ಪಾಕಿಸ್ತಾನ ವಿರುದ್ದ ನಡೆದ ಆಪರೇಷನ್ ಸಿಂಧೂರ ಮತ್ತು ಭಯೋತ್ಪಾದನೆ ವಿರೋಧಿ ನಿಲುವಿನ ಹೆಸರಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ‘ಟೂರ್ಸ್ ಆ್ಯಂಡ್ ಟ್ರಾವೆಲ್ಸ್’ ಕಂಪನಿ ತೆರೆಯಲು ಮುಂದಾಗಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ರಾಜ್ಯಸಭಾ ಸದಸ್ಯ ರಾವತ್, “ಭಯೋತ್ಪಾದನೆ ವಿರುದ್ದವಾಗಿ ಭಾರತದ ನಿಲುವನ್ನು ಮಿತ್ರ ರಾಷ್ಟ್ರಗಳಿಗೆ ತಿಳಿಸಲು ಕೇಂದ್ರ ಸರ್ಕಾರವು ನಿಯೋಗಗಳನ್ನು ಕಳಿಸುತ್ತಿದೆ. ಆ ಮೂಲಕ, ಸರ್ಕಾರವು ಸರ್ವಪಕ್ಷಗಳ ಸದಸ್ಯರನ್ನು ಪ್ರವಾಸಕ್ಕೆ ಕಳಿಸಿದೆ” ಎಂದು ಟೀಕಿಸಿದ್ದಾರೆ.
“ಕಾಶ್ಮೀರ ಸಮಸ್ಯೆಯ ಕುರಿತು ಸರ್ಕಾರವು ವಿಶೇಷ ಅಧಿವೇಶನ ಕರೆದು, ಗಂಭೀರವಾಗಿ ಚರ್ಚೆ ನಡಸಬೇಕಿತ್ತು. ಆದರೆ, ವಿಶೇಷ ಅಧಿವೇಶನ ಕರೆಯದೆ, ವಿದೇಶಗಳಿಗೆ ನಿಯೋಗಗಳನ್ನು ಕಳಿಸುವ ಮೂಲಕ ಸಮಸ್ಯೆಯನ್ನು ಅಂತಾರಾಷ್ರೀಯಗೊಳಿಸಲು ಬಿಜೆಪಿ ಮುಂದಾಗಿದೆ. ಮೊದಲು ವಿಶೇಷ ಅಧಿವೇಶನ ನಡೆಸಿ, ಬಳಿಕ ಅಗತ್ಯವಿದ್ದರೆ ನಿಯೋಗಗಳನ್ನು ಕಳಿಸಬಹುದಿತ್ತು” ಎಂದು ರಾವತ್ ಹೇಳಿದ್ದಾರೆ.
“ಸಂಘರ್ಷದಲ್ಲಿರುವ ಇಸ್ರೇಲ್, ಉಕ್ರೇನ್ನ ಪ್ರಧಾನಿಗಳು ವಿದೇಶಗಳಿಗೆ ನಿಯೋಗ ಕಳಿಸಿದ್ದಾರೆಯೇ. ಭಾರತದ ಸಂಸದರು ವಿದೇಶಗಳಿಗೆ ಹೋಗಿ ಏನು ಮಾಡುತ್ತಾರೆ. ಮೋದಿ ಅವರು 11 ವರ್ಷಗಳಲ್ಲಿ ಎಷ್ಟು ಬಾರಿ ವಿದೇಶಿ ಪ್ರವಾಸ ಮಾಡಿದ್ದಾರೆ. ಆದರೆ, ಅವರ ಪ್ರವಾಸಗಳು ಯಾವುದೇ ಫಲಿತಾಂಶ ನೀಡಿಲ್ಲ” ಎಂದಿದ್ದಾರೆ.
“ಲೋಕಸಭೆಯಲ್ಲಿ ಶಿವಸೇನೆ (ಯುಟಿಬಿ)ಯ 9 ಸಂಸದರಿದ್ದಾರೆ. ಆದರೂ, ಸರ್ವಪಕ್ಷ ನಿಯೋಗದ ವಿಚಾರವಾಗಿ ನಮ್ಮ ಪಕ್ಷವನ್ನು ಸಂಪರ್ಕಿಸಿಲ್ಲ. ಟಿಎಂಸಿ, ಸಮಾಜವಾದಿ ಪಕ್ಷ ಹಾಗೂ ಆರ್ಜೆಡಿ ಪಕ್ಷದ ಯಾವುದೇ ಸಂಸದರನ್ನು ನಿಯೋಗದಲ್ಲಿ ಸೇರಿಸಿಕೊಂಡಿಲ್ಲ. ನಿಯೋಗದ ವಿಚಾರದಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ. ವಿಪಕ್ಷಗಳೊಳಗೆ ಒಡಕು ಮೂಡಿಸಲು ಯತ್ನಿಸುತ್ತಿದೆ” ಎಂದು ರಾವತ್ ಆರೋಪಿಸಿದ್ದಾರೆ.