ಸುರಪುರ ತಾಲ್ಲೂಕಿನ ಏವೂರ ಗ್ರಾಮದ ಸಮೀಪದ ಜೆಬಿಸಿ ಕಾಲುವೆಯಲ್ಲಿ ಈಜಲು ತೆರಳಿದ್ದ ಇಬ್ಬರು ಕುರಿಗಾಯಿ ಯುವಕರು ನೀರುಪಾಲಾದ ಘಟನೆ ಶನಿವಾರ ನಡೆದಿದೆ.
ವಿಜಯಪುರ ಮೂಲದ ಪ್ರಧಾನಿ ಜಟ್ಟೆಪ್ಪ ಕನ್ನೊಳ್ಳಿ (19) ಹಾಗೂ ಆತನನ್ನು ರಕ್ಷಿಸಲು ಹೋದ ಕರಿಯಪ್ಪ ಬೀರಪ್ಪ ಹೊನ್ನಮೀಸೆ (19) ಮೃತ ಯುವಕರು.
ʼವಿಜಯಪುರ ಜಿಲ್ಲೆಯ ಆರು ಕುರಿಗಾಹಿ ಯುವಕರು ಶನಿವಾರ ಮಧ್ಯಾಹ್ನ ಜೆಬಿಸಿ ಕಾಲುವೆಯಲ್ಲಿ ಸ್ನಾನ ಮಾಡಲು ತೆರಳಿದ್ದರು. ಆರೂ ಜನರಿಗೆ ಈಜು ಬಾರದೇ ಇದ್ದುದರಿಂದ ದಡದಲ್ಲೇ ಸ್ನಾನ ಮಾಡಿದ್ದಾರೆ. ಕಾಲಿಗೆ ಹತ್ತಿದ್ದ ಕೊಳೆ ತೊಳೆಯಲು ಪ್ರಧಾನಿ ಎಂಬ ಯುವಕ ಮತ್ತೊಮ್ಮೆ ನೀರಿಗೆ ಇಳಿಯಲು ಹೋದಾಗ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಹೋದ ಕರಿಯಪ್ಪ ಸಹ ನೀರಿನಲ್ಲಿ ಮುಳುಗಿದ್ದಾನೆ.
ಇಬ್ಬರ ಶವಗಳು ನೂರು ಮೀಟರ್ ದೂರದಲ್ಲಿ ಕಾಲುವೆಯಲ್ಲಿ ಸಿಕ್ಕಿವೆ. ಈ ಸಂಬಂಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕಲಬುರಗಿ | ಸಾಲದ ಹಣ ತಡವಾಗಿ ನೀಡಿದಕ್ಕೆ ಹಲ್ಲೆ : ಆರು ಜನರಿಗೆ 2 ವರ್ಷ ಜೈಲು ಶಿಕ್ಷೆ