- ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿರುವ ಅಮೃತಹಳ್ಳಿ ಪೊಲೀಸರು
- ಏರೋನಿಕ್ಸ್ ಇಂಟರ್‌ನೆಟ್ ಕಂಪನಿಯ ಉದ್ಯೋಗಿಯಾಗಿದ್ದ ಆರೋಪಿ ಫೆಲಿಕ್ಸ್
ರಾಜ್ಯ ರಾಜಧಾನಿ ಬೆಂಗಳೂರಿನ ಪಂಪಾ ಬಡಾವಣೆಯಲ್ಲಿ ಹಾಡಹಗಲೇ ಜೋಡಿ ಕೊಲೆಯಾಗಿದ್ದು, ಘಟನಾ ಸ್ಥಳಕ್ಕೆ ಅಮೃತಹಳ್ಳಿ ಠಾಣೆಯ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಏರೋನಿಕ್ಸ್ ಇಂಟರ್ನೆಟ್ ಕಂಪನಿ ಸಿಇಒ ವಿನುಕುಮಾರ್ ಮತ್ತು ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಫಣೀಂದ್ರ ಸುಬ್ರಮಣ್ಯ ಅವರ ಹತ್ಯೆಯಾಗಿದೆ.
ಅದೇ ಕಂಪನಿಯ ಮಾಜಿ ಉದ್ಯೋಗಿಯಾಗಿದ್ದ ಫೆಲಿಕ್ಸ್ ಎಂಬಾತ ಎಂಡಿ ಮತ್ತು ಸಿಇಒ ಅವರನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಮಂಗಳವಾರ ಸಂಜೆ 4 ಗಂಟೆಗೆ ಕಂಪನಿ ಪ್ರವೇಶ ಮಾಡಿದ್ದ ಫೆಲಿಕ್ಸ್ ಎಂಡಿ ಮತ್ತು ಸಿಇಒ ಮೇಲೆ ಏಕಾಏಕಿ ದಾಳಿ ಮಾಡಿದ್ದಾನೆ. ತಲ್ವಾರ್‌ನಿಂದ ಕೊಚ್ಚಿ, ಚಾಕುವಿನಿಂದ ಇರಿದು ಇಬ್ಬರನ್ನು ಹತ್ಯೆಗೈದಿದ್ದಾನೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕ್ಯೂಆರ್ ಕೋಡ್ ಆಧಾರಿತ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಣೆಗೆ ಮುಂದಾದ ಪೊಲೀಸ್ ಇಲಾಖೆ
ಅದೇ ಕಂಪನಿಯ ಉದ್ಯೋಗಿಯಾಗಿದ್ದ ಫೆಲಿಕ್ಸ್ ಏರೋನಿಕ್ಸ್ ಇಂಟರ್ನೆಟ್ ಕಂಪನಿ ಬಿಟ್ಟು ಸ್ವಂತ ಕಂಪನಿ ಸ್ಥಾಪಿಸಿದ್ದನು. ತನ್ನ ಉದ್ಯಮಕ್ಕೆ ಎದುರಾಳಿಯಾಗಿದ್ದ ಫಣೀಂದ್ರನ ಹತ್ಯೆಗೆ ಸಂಚು ರೂಪಿಸಿದ್ದನು ಎನ್ನಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಮೃತಹಳ್ಳಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸ್ ತನಿಖೆ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ.