“ಎನ್ ದೇವರಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾರ್ಯನಿರ್ವಹಣಾಧಿಕಾರಿ ಸುಮಾರು 40 ಲಕ್ಷಕ್ಕೂ ಹೆಚ್ಚಿನ ಅವ್ಯವಹಾರ ನಡೆಸಿದ್ದು ಈ ಕೂಡಲೇ ಇದರ ಬಗ್ಗೆ ತನಿಖೆ ನಡೆಸಬೇಕು” ಎಂದು ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಹೋಬಳಿಯ ಎನ್ ದೇವರಹಳ್ಳಿ ಗ್ರಾಮದ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆಓ ಬೋರಯ್ಯ ಹಣ ದುರುಪಯೋಗದ ಬಗ್ಗೆ ಮಾತನಾಡಿ, ತನಿಖೆಗೆ ಒತ್ತಾಯಿಸಿದರು.
ಚಳ್ಳಕೆರೆಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು “ಎನ್ ದೇವರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಾಜಣ್ಣ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರು ಸಂಘದ ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಎನ್ ದೇವರಹಳ್ಳಿ, ಗೌರಿಪುರ, ಕುದಾಪುರ, ಕುದಾಪುರ ಲಂಬಾಣಿಹಟ್ಟಿ ಹಾಗೂ ಭೀಮನಕೆರೆ ಗ್ರಾಮದ ರೈತರಿಂದ ದಾಖಲೆಗಳನ್ನು ಪಡೆದು, ರೈತರಿಗೆ ಮಾಹಿತಿ ನೀಡದೆ ಅಕ್ರಮವಾಗಿ ರೈತರ ದಾಖಲೆಗಳ ಆಧಾರದ ಮೇಲೆ ಸಂಘದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಮೊತ್ತದ ಸಾಲವನ್ನು ಸೃಜಿಸಿಕೊಂಡಿದ್ದಾರೆ” ಎಂದು ಮಾಹಿತಿ ನೀಡಿದರು.

“ರೈತರ ದಾಖಲೆಗಳ ಆಧಾರದ ಮೇಲೆ ತೆಗೆದುಕೊಂಡಿರುವ ಸಾಲದ ಮೊತ್ತವನ್ನು ರೈತರಿಗೆ ನೀಡದೆ, ವೈಯಕ್ತಿಕವಾಗಿ ಬಳಸಿಕೊಂಡಿರುವುದು ಅವ್ಯವಹಾರ ಎಸಗಿರುವುದು ಇತ್ತೀಚಿನ ದಿನಾಂಕ 14.05.2025 ರಂದು ನಡೆದ ಸಂಘದ ಸಾಮಾನ್ಯ ಸಭೆಯಲ್ಲಿ ನಮ್ಮ ಗಮನಕ್ಕೆ ಬಂದಿದೆ” ಎಂದು ಆರೋಪಿಸಿದರು.
“ಈ ಬಗ್ಗೆ ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಂಕಿನ ವ್ಯವಸ್ಥಾಪಕರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ವಂಚನೆಗೊಳಗಾದ ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು” ಆಗ್ರಹಿಸಿದ್ದಾರೆ.
ಈ ಬಗ್ಗೆ ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ನಿರ್ದೇಶಕ ಬೋರಯ್ಯ,”ಪತ್ತಿನ ಸಹಕಾರ ಸಂಘದಲ್ಲಿ ರೈತರಿಗೆ ಗೊತ್ತಿಲ್ಲದೇ ಸಾಲಗಳನ್ನು ರೈತರ ಹೆಸರಿನಲ್ಲಿ ತೆಗೆದುಕೊಂಡಿದ್ದಾರೆ. ಸಾಲ ತೆಗೆದುಕೊಂಡಿರುವುದೇ ರೈತರಿಗೆ ಗೊತ್ತಿಲ್ಲ. 40 ಲಕ್ಷಕ್ಕೂ ಹೆಚ್ಚಿನ ಹಣ ದುರುಪಯೋಗ ಆಗಿದೆ. ತನಿಖೆ ನಡೆಸಿ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಭತ್ತ ಬೆಂಬಲ ಬೆಲೆಗೆ ಖರೀದಿಸುವಂತೆ ಆಗ್ರಹಿಸಿ ರೈತ ಸಂಘ ರಸ್ತೆ ತಡೆದು ಪ್ರತಿಭಟನೆ.
ಈ ಬಗ್ಗೆ ಮಾತನಾಡಿದ ಸಾಮಾಜಿಕ ಹೋರಾಟಗಾರರಾದ ಕೃಷ್ಣಮೂರ್ತಿ, “ರೈತರಿಗೆ ಗೊತ್ತಿಲ್ಲದಂತೆ ಅಲ್ಲಿನ ಅಧಿಕಾರಸ್ಥರೇ ಸಾಲ ಪಡೆದು ದುರುಪಯೋಗ ಪಡಿಸಿಕೊಂಡು ವಂಚಿಸಿದ್ದಾರೆ. ಯಶಸ್ವಿನಿ, ಬೇರೆ ಬೇರೆ ಉದ್ದೇಶಗಳಿಗೆ ಪಡೆದಿದ್ದ ಕಾಗದ ಪತ್ರಗಳನ್ನು ಇದಕ್ಕೆ ಉಪಯೋಗಿಸಿರುವ ಶಂಕೆ ಇದೆ. ಇದರಲ್ಲಿ ಬಹಳಷ್ಟು ಜನರ ಕೈವಾಡವಿರುವ ಶಂಕೆ ಇದೆ. ಇದು ಕೇವಲ ದೇವರಹಳ್ಳಿ ಪತ್ತಿನ ಸಹಕಾರ ಸಂಘದಲ್ಲಿ ಮಾತ್ರವಲ್ಲ. ಹಲವು ಕಡೆಗಳಲ್ಲಿ ಇದೇ ರೀತಿ ನೆಡೆದಿರುವ ಮಾಹಿತಿ ಇದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿದರೆ ಹಗರಣಗಳು ಬೆಳಕಿಗೆ ಬರಲಿವೆ. ಈ ನಿಟ್ಟಿನಲ್ಲಿ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.