ಪ್ರತಿಯೊಂದು ಮಗುವಲ್ಲೂ ವಿವಿಧ ರೀತಿಯ ಪ್ರತಿಭೆಗಳಿದ್ದು, ಅವರ ಪ್ರತಿಭೆಯ ಶಕ್ತಿಯನ್ನು ಸಮಾಜದ ಉನ್ನತಿಗೆ ಬಳಸಿಕೊಳ್ಳಬೇಕು ಎಂದು ಉಡುಪಿ ಅಜ್ಜರಕಾಡು ಡಾ. ಜಿ ಶಂಕರ್ ಸರ್ಕಾರಿ ಹೆಣ್ಣುಕ್ಕಳ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ನಿಕೇತನಾ ಹೇಳಿದರು.
ಚಿಣ್ಣರ ಚಾವಡಿ ಮಂಗಳೂರು ಹಾಗೂ ಸಂತ ಮದರ್ ತೆರೇಸಾ ವಿಚಾರ ವೇದಿಕೆ ಗಳ ಜಂಟಿ ಆಶ್ರಯದಲ್ಲಿ ನಗರದ ಸಂತ ಅಲೋಶಿಯಸ್ ಹೈಸ್ಕೂಲ್ ಸಭಾಂಗಣದಲ್ಲಿ ಇಂದಿನಿಂದ 4 ದಿನಗಳ ಕಾಲ ನಡೆಯಲಿರುವ ಚಿಣ್ಣರ ಕಲರವ-2025ರ ಮಕ್ಕಳ ಕಲಿಕಾ ಕಾರ್ಯಾಗಾರವನ್ನು ಉದ್ಘಾಟಿಸುತ್ತಾ ಅವರು ಮಾತನಾಡಿದರು.
“ಭವಿಷ್ಯತ್ತಿನ ಹರಿಕಾರರಾದ ಮಕ್ಕಳ ಮೇಲೆ ನಡೆಯುತ್ತಿರುವ ಪ್ರಜ್ಞಾಪೂರ್ವಕ ದಾಳಿಯಿಂದಾಗಿ ಮಕ್ಕಳ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕುವಂತಾಗಿದೆ. ಅಂತಹ ಮಕ್ಕಳಿಗೆ ಪ್ರೀತಿಯ ಧಾರೆ ಎರೆಯುವ ಮೂಲಕ ಅವರಲ್ಲಿರುವ ಅಪಾರ ಶಕ್ತಿಯನ್ನು ಹೊರತೆಗೆಯಬೇಕು. ಮಕ್ಕಳಲ್ಲಿರುವ ಅಪಾರ ಶಕ್ತಿಯನ್ನು ಗುರುತಿಸಿ ನೀರೆರೆದು ಪೋಷಿಸಿ ಹೆಮ್ಮರವಾಗಿ ಬೆಳೆಸುವಲ್ಲಿ ಹಿರಿಯರ ಪಾತ್ರ ಮಹತ್ವದ್ದಾಗಿದೆ” ಎಂದು ಅಭಿಪ್ರಾಯಪಟ್ಟರು.

ಕೇರಳ ಬಾಲಸಂಘದ ರಾಜ್ಯ ಸಮಿತಿ ಸದಸ್ಯೆ ಭಾರತಿ ಎಸ್ ಮಾತನಾಡಿ, “ಇತಿಹಾಸಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ವಾಸ್ತವ ಜಗತ್ತಿನಲ್ಲಿ ಕಾರ್ಯಾಚರಿಸಿ ಭವಿಷ್ಯದ ಬದುಕನ್ನು ಕಟ್ಟಬೇಕಾದ ಎಳೆಯ ಮಕ್ಕಳಲ್ಲಿ ಪ್ರಜ್ಞಾಪೂರ್ವಕವಾಗಿ ಇತಿಹಾಸವನ್ನು ತಿರುಚಿ ಸುಳ್ಳುಗಳನ್ನು ಸೃಷ್ಟಿಸಿ, ಮೂಢನಂಬಿಕೆಗಳನ್ನು ವೈಭವೀಕರಿಸಿ ಅರಾಜಕತೆಯನ್ನುಂಟು ಮಾಡುವ ದುಷ್ಟ ಶಕ್ತಿಗಳ ವಿರುದ್ಧ ಪ್ರಬಲ ಧ್ವನಿಯನ್ನು ಮೊಳಗಿಸಬೇಕು. ಆ ಮೂಲಕ ಚರಿತ್ರೆಯನ್ನು ಅರಿತು ವೈಜ್ಞಾನಿಕ ಮನೋಭಾವವನ್ನು ಎಳೆಯ ಪ್ರಾಯದ ಮಕ್ಕಳಲ್ಲಿ ಮೂಡಿಸಬೇಕಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ಮಂಗಳೂರು | ಸರ್ಕಾರಿ ಜಾಗ ಅತಿಕ್ರಮಿಸಿ ಮೂರ್ತಿ ನಿರ್ಮಾಣ- ‘ಈ ದಿನ’ ವರದಿ ನಂತರ ಅಧಿಕಾರಿಗಳಿಂದ ಕ್ರಮ
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ ಮಾತನಾಡಿ, “ಏನೂ ತಿಳಿಯದ ಮುಗ್ಧ ಮನಸುಗಳಿಗೆ ಪ್ರೀತಿ ನೀಡುವ ಮೂಲಕ ಅವರು ಮತ್ತೆ ಸಮಾಜಕ್ಕೆ ಪ್ರೀತಿಯನ್ನು ನೀಡುವಲ್ಲಿ ಸಮಾಜದ ಎಲ್ಲಾ ವರ್ಗದ ಜನತೆ ಒಂದಾಗಬೇಕಾಗಿದೆ ಹಾಗೂ ಮಕ್ಕಳ ಮನಸನ್ನು ಅರಿಯುವ ವಿಶಾಲ ಹೃದಯ ಪ್ರತಿಯೊಬ್ಬರಲ್ಲಿ ಇರಬೇಕಾಗಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಮಾ ನೌಕರರ ಸಂಘಟನೆಯ ಮುಖಂಡ ಅಲ್ಬನ್ ಮಸ್ಕರೇನಸ್, ಚಿಣ್ಣರ ಚಾವಡಿ ಸಂಚಾಲಕ ಸುನಿಲ್ ಕುಮಾರ್ ಬಜಾಲ್, ಸಾಮಾಜಿಕ ಚಿಂತಕ ಡಾ.ಲಯನ್ ಓಸ್ವಾಲ್ಡ್ ಪುರ್ತಾಡೋ, ವಿದ್ಯಾ ಶೆಣೈ, ನೀನಾಸಂ ಪದವೀಧರರಾದ ಮೈಟಿ ಗಿಬ್ಸನ್, ಯುವ ಉದ್ಯಮಿಗಳಾದ ಸಿರಾಜ್ ಮಂಜೇಶ್ವರ, ಶಿಬಿರದ ನಿರ್ದೇಶಕ ಪ್ರವೀಣ್ ವಿಸ್ಮಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.