ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ಸಾಧನೆ ತೀವ್ರ ನಿರಾಶಾದಾಯಕವಾಗಿದೆ ಎಂದು ಮಾಜಿ ಸಚಿವ, ಶಾಸಕ ಪ್ರಭು ಬಿ.ಚವ್ಹಾಣ ಅವರು ಟೀಕಿಸಿದ್ದಾರೆ.
ಬಳ್ಳಾರಿಯ ಹೊಸಪೇಟೆಯಲ್ಲಿ ಸರ್ಕಾರ ನಡೆಸುತ್ತಿರುವ ಸಾಧನಾ ಸಮಾವೇಶದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ‘ರಾಜ್ಯದಲ್ಲಿ ವಿದ್ಯುತ್, ಪೆಟ್ರೋಲ್, ಡಿಸೇಲ್, ಹಾಲಿನಂತಹ ದಿನಬಳಕೆ ವಸ್ತುಗಳ ಬೆಲೆಗಳನ್ನು ಏರಿಸಿ ಬಡ ಜನರನ್ನು ಸಂಕಷ್ಟಕ್ಕೆ ದೂಡಿ ಸಾಧನಾ ಸಮಾವೇಶ ಆಯೋಜಿಸುತ್ತಿರುವುದು ಸರ್ಕಾರದ ಅಸಫಲತೆಯ ಸಮಾವೇಶದಂತೆ ಭಾಸವಾಗುತ್ತಿದೆ’ ಎಂದಿದ್ದಾರೆ.
‘ಗ್ಯಾರಂಟಿ ಹೆಸರಿನಲ್ಲಿ ಜನರನ್ನು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಅಭಿವೃದ್ಧಿಯನ್ನೇ ಮರೆತಿದೆ. ರಾಜ್ಯದಲ್ಲಿ ಅರಾಜಕತೆ ವಿಪರೀತವಾಗಿ ಹೆಚ್ಚುತ್ತಿದೆ. ಗ್ಯಾರಂಟಿ ಹೆಸರಿನಲ್ಲಿ ಒಂದು ಕಡೆ ಕೊಟ್ಟು ಮತ್ತೊಂದು ಕಡೆಯಿಂದ ದುಪ್ಪಟ್ಟು ವಸೂಲಿ ಮಾಡಲಾಗುತ್ತಿದೆ. ಪರಿಶಿಷ್ಟರ ಹಣ ದುರ್ಬಳಕೆ, ವಾಲ್ಮೀಕಿ ಹಗರಣ ಸೇರಿದಂತೆ ನಾನಾ ಅವಾಂತರಗಳನ್ನು ಮಾಡಿದ ಸರ್ಕಾರದ ಸಾಧನೆ ಎರಡು ವರ್ಷಗಳಲ್ಲಿ ಹೇಳಿಕೊಳ್ಳುವಂತಹದ್ದು ಏನು ಇಲ್ಲ’ ಎಂದು ಹೇಳಿದ್ದಾರೆ.
‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಅಭಿವೃದ್ಧಿಗೆ ಹಣವಿಲ್ಲ, ನಿಯಮಿತವಾಗಿ ಸಂಬಳವಾಗುತ್ತಿಲ್ಲವೆಂದು ನೌಕರರು ಅಳಲು ತೋಡಿಕೊಳ್ಳುತ್ತಿದ್ದಾರೆ. ಎಲ್ಲರ ಹಿತಕ್ಕಾಗಿ ಕೆಲಸ ಮಾಡಬೇಕಾದ ಸರ್ಕಾರ ಕೇವಲ ಒಂದು ಸಮುದಾಯದ ಓಲೈಕೆಗಾಗಿ ನಿರಂತರ ಪ್ರಯಾಸಪಡುತ್ತಿದೆ’ ಎಂದು ದೂರಿದರು.
ಇದನ್ನೂ ಓದಿ : ಬೀದರ್ | ಪೊಲೀಸ್ ಇಲಾಖೆಗೆ 7 ಹೊಸ ವಾಹನಗಳ ಹಸ್ತಾಂತರ
‘ಸರ್ಕಾರದ ಬಗ್ಗೆ ಬಡವರು, ರೈತರು, ಶ್ರಮಿಕರು ರೋಸಿ ಹೋಗಿದ್ದಾರೆ. ಹಿಂದುಗಳ ಹತ್ಯೆ, ಧಾರ್ಮಿಕ ನಂಬಿಕೆಗಳ ಮೇಲೆ ಪ್ರಹಾರದಂತಹ ಅನ್ಯಾಯಗಳು ನಿರಂತರವಾಗಿ ನಡೆಯುತ್ತಿವೆ. ಬಹುತೇಕ ಇಲಾಖೆ ನಿಷ್ಕ್ರೀಯಗೊಂಡಿವೆ. ಇಂತಹದರಲ್ಲಿ ಸಾಧನಾ ಸಮಾವೇಶ ನಡೆಸುತ್ತಿರುವುದು ಹಾಸ್ಯಾಸ್ಪದ’ ಎಂದು ತಿಳಿಸಿದ್ದಾರೆ.