ಅದಾನಿ ಗ್ರೂಪ್ ಷೇರುಗಳನ್ನು ಹೊಂದಿರುವ ಎರಡು ವಿದೇಶಿ ಫಂಡ್‌ಗಳಿಗೆ ಸೆಬಿ ದಂಡ ವಿಧಿಸುವ ಎಚ್ಚರಿಕೆ ನೀಡಿದೆ. ಈ ಸುದ್ದಿಯನ್ನು ಉಲ್ಲೇಖಿಸಿರುವ ಕಾಂಗ್ರೆಸ್, ಮೇಲ್ನೋಟಕ್ಕೆ ತನಿಖೆ ಪ್ರಗತಿಯಲ್ಲಿರುವಂತೆ ಕಾಣಬಹುದು. ಆದರೆ ತನಿಖೆ ಎರಡು ವರ್ಷಗಳಿಗೂ ಅಧಿಕ ಕಾಲ ವಿಳಂಬವಾಗಿದೆ. ಈ ವಿಳಂಬದಿಂದ ಸಮೂಹ ಸಂಸ್ಥೆಯು ಲಾಭ ಪಡೆಯುತ್ತಿದೆ ಎಂದು ಟೀಕಿಸಿದೆ.
ಆದರೆ ಈ ವರದಿ ಬಗ್ಗೆ ಸೆಬಿ ಅಥವಾ ಅದಾನಿ ಗ್ರೂಪ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. “ಡಬಲ್-ಎಂಜಿನ್- ಮೋದಾನಿ (ಮೋದಿ-ಅದಾನಿ) ಕಥೆ ಮುಂದುವರೆದಿದೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮೋದಾನಿ | ಮಹಾರಾಷ್ಟ್ರ ಸಿಎಂ ಫಡ್ನವೀಸ್ ಭೇಟಿಯಾದ ಅದಾನಿ
“ಷೇರುದಾರರ ವಿವರಗಳನ್ನು ಒದಗಿಸಲು ವಿಫಲವಾದ ಎಲಾರಾ ಕ್ಯಾಪಿಟಲ್‌ನ ನಿಯಂತ್ರಣದಲ್ಲಿರುವ ಎರಡು ಮಾರಿಷಸ್ ಮೂಲದ ವಿದೇಶಿ ಫಂಡ್‌ಗಳಾದ ಎಲಾರಾ ಇಂಡಿಯಾ ಆಪರ್ಚುನಿಟೀಸ್ ಫಂಡ್ ಮತ್ತು ವೆಸ್ಪೆರಾ ಫಂಡ್‌ಗೆ ಸೆಬಿ ದಂಡ ಮತ್ತು ಪರವಾನಗಿ ರದ್ದತಿಗೆ ಬೆದರಿಕೆ ಹಾಕಿದೆ ಎಂದು ವರದಿಯಾಗಿದೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಫಂಡ್‌ಗಳು ‘ಸ್ಟಾಕ್ ಪಾರ್ಕಿಂಗ್’ ನಡೆಸಿದ ಆರೋಪವನ್ನು ಹೊಂದಿವೆ. ಸೆಬಿ ನಿಯಮಗಳನ್ನು ಉಲ್ಲಂಘಿಸಿ ತಮ್ಮದೇ ಕಂಪನಿಗಳಲ್ಲಿ ಬೇನಾಮಿ ಅದಾನಿ ಹೂಡಿಕೆಗಳನ್ನು ಮಾಡಲಾಗಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
The double-engine Modani saga continues.
— Jairam Ramesh (@Jairam_Ramesh) May 20, 2025
SEBI has reportedly threatened two Mauritius-based offshore funds controlled by Elara Capital — Elara India Opportunities Fund and Vespera Fund — with penalties and licence cancellations for failing to provide shareholding details. These…
“ತಪ್ಪನ್ನು ಒಪ್ಪಿಕೊಳ್ಳದೆ ಮತ್ತು ಟೋಕನ್ ಶುಲ್ಕವನ್ನು ಪಾವತಿಸದೆಯೇ ಈ ವಿಷಯವನ್ನು ಇತ್ಯರ್ಥಪಡಿಸಿಕೊಳ್ಳಲು ಈ ಎರಡೂ ಫಂಡ್‌ಗಳು ಮುಂದಾಗಿವೆ ಎಂದು ವರದಿಯಾಗಿದೆ. ಇದು ಮೋದಾನಿಗೆ ಅನುಕೂಲಕರ ಕ್ರಮ” ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ‘ಮೋದಾನಿ’ ಬಣ್ಣ ಬಯಲು ಮಾಡಿದ್ದಕ್ಕೆ ನಂಬಲಸಾಧ್ಯ ವೇಗದಲ್ಲಿ ಮೊಯಿತ್ರಾ ಉಚ್ಚಾಟನೆ: ನಟ ಕಿಶೋರ್ ಕಿಡಿ
2022ರ ಡಿಸೆಂಬರ್‌ನಲ್ಲಿ ಇಂಡಿಯಾ ಆಪರ್ಚುನಿಟೀಸ್ ಫಂಡ್‌ನ ಶೇಕಡ 98.78ರಷ್ಟು ಬಂಡವಾಳವನ್ನು ಮೂರು ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗಿತ್ತು. 2022ರ ಜೂನ್‌ನಲ್ಲಿ ವೆಸ್ಪೆರಾದ ಶೇಕಡ 93.9ರಷ್ಟು ಮೊತ್ತವನ್ನು ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಹೂಡಿಕೆ ಮಾಡಲಾಗಿದೆ ಎಂದು ವರದಿಯಾಗಿದೆ.
“ಸೆಬಿಯ ಕ್ರಮಗಳು ಮೇಲ್ನೋಟಕ್ಕೆ ತನಿಖೆ ಪ್ರಗತಿಯಲ್ಲಿ ಇರುವಂತೆ ಕಾಣಿಸಬಹುದು. ಸುಪ್ರೀಂ ಕೋರ್ಟ್ ಈ ತನಿಖೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕೆಂದು ಆದೇಶಿಸಿತ್ತು. ಆದರೆ ತನಿಖೆಯು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ವಿಳಂಬವಾಗಿದೆ. ಈ ವಿಳಂಬದಿಂದ ಲಾಭ ಪಡೆದವರು ಮೋದಾನಿ” ಎಂದು ದೂರಿದರು.
“ಭಾರತದ ಅತಿದೊಡ್ಡ ಹಗರಣವನ್ನು ಮುಚ್ಚಿಹಾಕಲು ಸರ್ಕಾರ ಎಷ್ಟೇ ಪ್ರಯತ್ನಿಸಿದರೂ, ಸತ್ಯ ಹೊರಬರುತ್ತಿದೆ. ದೇಶ ರಾಜಿ ಮಾಡಿಕೊಂಡ ಸಂಸ್ಥೆಗಳ ಮೂಲಕವಲ್ಲದಿದ್ದರೂ, ವಿದೇಶಿ ನ್ಯಾಯವ್ಯಾಪ್ತಿಯ ಮೂಲಕ ಎಲ್ಲವೂ ಬಹಿರಂಗವಾಗಲಿದೆ. ಮೋದಾನಿ ಲಂಚ ನೀಡಲು, ಬೆದರಿಸಲು ಅಥವಾ ಸಹಕರಿಸಲು ಸಾಧ್ಯವಿಲ್ಲ” ಎಂದು ಹೇಳಿದರು.
ಅಮೆರಿಕ ಮೂಲದ ಹಿಂಡನ್‌ಬರ್ಗ್ ರಿಸರ್ಚ್ ಕೈಗಾರಿಕೋದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಸಂಸ್ಥೆಗಳು ಮಾಡಿದ ಹಲವು ವಂಚನೆಗಳನ್ನು ಬಯಲಿಗೆ ಎಳೆದಿತ್ತು. ಅದಾದ ಬಳಿಕ ಷೇರುಪೇಟೆಯಲ್ಲಿ ಅದಾನಿ ಷೇರುಗಳು ಭಾರೀ ಕುಸಿದಿದೆ. ಈ ನಡುವೆ ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದೆ.
