ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಕಾನೂನುಬದ್ಧವಾಗಿ ‘ಕೆಲಸ ಮಾಡುವ ಹಕ್ಕನ್ನು’ ಪ್ರತಿಪಾದಿಸುತ್ತದೆ. ಆದ್ದರಿಂದ, ಮಹಿಳೆಯರು ತಮ್ಮ ಗ್ರಾಮ ಪಂಚಾಯಿತಿಗೆ ನಮೂನೆ-6ರ ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗ ಕೇಳಿ ಪಡೆದುಕೊಳ್ಳಬೇಕು ಎಂದು ಗದಗ ಜಿಲ್ಲಾ ಪಂಚಾಯಿತಿ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಕಿರಣ ಎಸ್ ಎಚ್ ಸಲಹೆ ನೀಡಿದರು.
ಜಿಲ್ಲೆಯ ನರಗುಂದ ತಾಲೂಕಿನ ಹದಲಿ ಗ್ರಾಮ ಪಂಚಾಯತಿಯಲ್ಲಿ ಹಮ್ಮಿಕೊಂಡ ಮಹಿಳಾ ಸ್ನೇಹಿ ಉದ್ಯೋಗ ಖಾತ್ರಿ ಯೋಜನೆಯ ವಿಶೇಷ ಸಭೆಯಲ್ಲಿ ಮಾತನಾಡಿದರು.
“ವಯಸ್ಕ ಸದಸ್ಯರ ಪ್ರತಿ ಕುಟುಂಬಕ್ಕೆ ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಖಾತರಿಯ ಕೂಲಿ ಉದ್ಯೋಗವನ್ನು ಒದಗಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯದ ಭದ್ರತೆಯನ್ನು ಖಚಿತಪಡಿಸುತ್ತದೆ. ಕೌಶಲ್ಯರಹಿತ ಕೆಲಸ ಮಾಡಲು ಮಹಿಳೆಯರು ಸ್ವಯಂ ಪ್ರೇರಣೆಯಿಂದ ಮುಂದೆ ಬರಬೇಕು” ಎಂದರು.
“ಅಳತೆ ಪ್ರಕಾರ ಕೆಲಸ ಮಾಡಿದರೆ 316 ರೂ. ಪಾವತಿಸಲಾಗುತ್ತದೆ. ಪ್ರತಿ ಎನ್ಎಂಆರ್‌ನಲ್ಲಿ ಕಡ್ಡಾಯವಾಗಿ ಶೇ.60ರಷ್ಟು ಮಹಿಳೆಯರು ಇರುವಂತೆ ಬಿಎಫ್‌ಟಿ, ಡಿಇಒ ಕ್ರಮವಹಿಸುವಂತೆ ಸೂಚಿಸಿದರು. ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಈ ಯೋಜನೆ ಜಾರಿಗೆ ತಂದಿದ್ದು, ಇದರ ಲಾಭ ಪಡೆದುಕೊಳ್ಳುವುದು ಪ್ರತಿಯೊಬ್ಬರ ಹಕ್ಕಾಗಿದೆ. ಜಿಲ್ಲೆಯಲ್ಲಿ ಶೇ. 60ರಷ್ಟು ಮಹಿಳೆಯರು ಉದ್ಯೋಗ ಖಾತ್ರಿಯಲ್ಲಿ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಲು ಯೋಜನೆ ರೂಪಿಸಲಾಗಿದ್ದು, ಈ ಕಾರ್ಯಕ್ಕೆ ಎಲ್ಲ ಹಂತದ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಬೇಕು” ಎಂದು ಮನವಿ ಮಾಡಿದರು.
ಸಭೆಯಲ್ಲಿ ನರಗುಂದ ತಾಲೂಕು ಪಂಚಾಯತ ಐಇಸಿ ಸಂಯೋಜಕ ಸುರೇಶ ಬಾಳಿಕಾಯಿ ಮಾತನಾಡಿ, “ಮುಂಗಾರು ಮಳೆ ಕೈಕೊಟ್ಟು ಕೈಗೆ ಕೆಲಸ ಇಲ್ಲವಲ್ಲ ಎಂಬ ಕೊರಗುವುದು ಬೇಡ. ಮನರೇಗಾ ಯೋಜನೆಯಡಿ ನಿರಂತರವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೆಲಸ ಕೊಡಲಾಗುತ್ತಿದೆ. ಯೋಜನೆಯಡಿ ಕೆಲಸ ಪಡೆದು ಗ್ರಾಮೀಣ ಪ್ರದೇಶದ ಮಹಿಳೆಯರು ಆರ್ಥಿಕವಾಗಿ ಸಬಲೀಕರಣವಾಗಬೇಕು” ಎಂದು ತಿಳಿಸಿದರು.
ನರೇಗಾ ತಾಂತ್ರಿಕ ಸಂಯೋಜಕ. ಹನಮಂತ ಡಂಬಳ ಮಾತನಾಡಿ, “ಉದ್ಯೋಗ ಖಾತ್ರಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ಹೆಚ್ಚಿಸಲು ಎಲ್ಲ ವೈಯಕ್ತಿಕ ಹಾಗೂ ಇತರ ಕಾಮಗಾರಿಗಳ ಎನ್ಎಂಆರ್‌ಗಳನ್ನು ಮಹಿಳೆಯರ ಹೆಸರಿನಲ್ಲಿ ಸೃಜನೆ ಮಾಡಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಡವರಿಗೆ ಭೂಮಿ ಮಂಜೂರಾತಿ ಗ್ಯಾರಂಟಿ ನೀಡಲಿ: ಮಾರೆಪ್ಪ ಹರವಿ
ಮಹಿಳಾ ಸ್ನೇಹಿ ವಿಶೇಷ ಸಭೆಯಲ್ಲಿ ಹದಲಿ ಗ್ರಾಮ ಪಂಚಾಯಿಯಿ ಪಿಡಿಒ ಎಸ್ ಡಿ ಹಿರೇಮನಿ, ಗ್ರಾಮ ಪಂಚಾಯತ ಅಧ್ಯಕ್ಷ ಗದಿಗೆಪ್ಪ ಮಂತ್ರಿ, ಸದಸ್ಯರುಗಳಾದ ಸಿದ್ದಪ್ಪ ಹಡಗಲಿ, ದಾವಲಬಿ ನರಗುಂದ, ಎನ್‌ಆರ್‌ಎಲ್‌ಎಂ ನರಗುಂದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮೋಹನಕೃಷ್ಣ, ಎನ್‌ಆರ್‌ಎಲ್‌ಎಂ ಸಮ್ಮೂಹ ಮೇಲ್ವಿಚಾರಕ ಲಕ್ಷ್ಮಣ ಪೂಜಾರ, ಎನ್‌ಆರ್‌ಎಲ್‌ಎಂ ಸಿಬ್ಬಂದಿ ಕಿರಣಕುಮಾರ್ ಮತ್ತು ಮನರೇಗಾ ತಾಂತ್ರಿಕ ಸಿಬ್ಬಂದಿ ಹಾಗೂ ಹದಲಿ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ, ಹದಲಿ ಗ್ರಾಮದ ಸದಸ್ಯರು ಇದ್ದರು.