ರಾಜ್ಯದ ಹಲವೆಡೆ ಭಾನುವಾರ ರಾತ್ರಿಯಿಂದಲೂ ಭಾರೀ ಮಳೆ ಸುರಿಯುತ್ತಿದ್ದು, ಬೆಳೆಹಾನಿಯಾಗಿದೆ. ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿರುವುದರಿಂದ ಕಂಗಾಲಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ತುಮಕೂರು ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಕೃಷಿ ಕೆಲಸಗಳು ಬಿರುಸು ಪಡೆದಿದ್ದು, ಪೂರ್ವ ಮುಂಗಾರಿನಲ್ಲಿ ಹೆಸರು, ಅಲಸಂದೆ ಸೇರಿದಂತೆ ಇತರೆ ಬೆಳೆಗಳ ಬಿತ್ತನೆ ಕಾರ್ಯ ಚುರುಕು ಪಡೆದಿತ್ತು. ಭಾನುವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದ ಭೂಮಿಯೆಲ್ಲಾ ಕೆಸರುಮಯವಾದಂತಾಗಿದ್ದು, ಬಿತ್ತನೆ ಕಾರ್ಯಕ್ಕೆ ತೊಡಕುಂಟಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ತೋಟಗಳಿಗೆ ಮಳೆ ನೀರು ನುಗ್ಗಿದೆ. ಪರಿಣಾಮ ಫಸಲಿಗೆ ಬಂದ ಹೂವು, ತರಕಾರಿ ಸೇರಿ ಇತರೆ ಬೆಳೆಗಳಿಗೆ ಹಾನಿಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಒಂದು ಕುರಿ, ಬಾಗೇಪಲ್ಲಿ ತಾಲೂಕಿನಲ್ಲಿ 10 ಕುರಿಗಳು ಮೃತಪಟ್ಟಿವೆ. ಚಿಂತಾಮಣಿ ತಾಲೂಕಿನಲ್ಲಿ 8.5 ಎಕರೆ ಮಾವಿನ ತೋಟ ಹಾಗೂ ಅರ್ಧ ಎಕರೆ ಚಂಡು ಹೂವು ತೋಟ ಹಾನಿಯಾಗಿದೆ.
ಕೊಪ್ಪಳ ಸೇರಿದಂತೆ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಕುಕನೂರು ತಾಲೂಕು ವ್ಯಾಪ್ತಿಯಲ್ಲಿ ಮಳೆಯಾಗಿದೆ. ಭಾನುವಾರ ತಡರಾತ್ರಿಯಿಂದ ಸುರಿದ ಭಾರೀ ಮಳೆಗೆ ಗಂಗಾವತಿ ತಾಲೂಕು ವ್ಯಾಪ್ತಿಯಲ್ಲಿ ನಾಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಭತ್ತದ ಸಸಿಗಳಿಗೆ ಹಾನಿಯಾಗಿವೆ. ಎರಡು ತಿಂಗಳಲ್ಲಿ ಭತ್ತದ ನಾಟಿ ಮಾಡಲಿದ್ದು, ಅದಕ್ಕೆ ಸಸಿಗಳನ್ನು ಬೆಳೆಸಿಕೊಳ್ಳುವ ಕಾರ್ಯ ನಡೆದಿತ್ತು.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರದಲ್ಲಿ ಬಿರುಸಿನ ಮಳೆ ಮತ್ತು ಕುಮಟಾ, ಶಿರಸಿಯಲ್ಲಿ ತುಂತುರು ಮಳೆಯಾಗಿದೆ. ‘ಮೇ 23ರವರೆಗೆ ಕರಾವಳಿ ಭಾಗದಲ್ಲಿ ಪ್ರತಿ ಗಂಟೆಗೆ 35 ರಿಂದ 45 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಈ ವೇಳೆ ಮೀನುಗಾರಿಕೆ ನಡೆಸಬಾರದು’ ಎಂದು ಕೇಂದ್ರ ಹವಾಮಾನ ಇಲಾಖೆ ಮೀನುಗಾರರಿಗೆ ಸೂಚಿಸಿದೆ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಜೋಳ ಖರೀದಿ ಕೇಂದ್ರದಲ್ಲಿ ರೈತರಿಂದ ಖರೀದಿಸಿದ್ದ ಜೋಳ ಮಳೆಯಲ್ಲಿ ನೆನೆದು ಚೀಲದಲ್ಲೇ ಮೊಳಕೆಯೊಡೆದಿದೆ. ನಾಲ್ಕೈದು ದಿನ ನಿರಂತರವಾಗಿ ಸುರಿದ ಮಳೆಯಿಂದ ಸುಮಾರು 250ಕ್ಕೂ ಹೆಚ್ಚು ಚೀಲದಲ್ಲಿನ ಜೋಳ ಮೊಳಕೆಯೊಡೆದಿದೆ. ಕನಿಷ್ಠ 12 ಟನ್ ಜೋಳ ಹಾನಿಯಾದ ಸಾಧ್ಯತೆಯಿದೆ.

ರಾಯಚೂರು ಜಿಲ್ಲೆಯ ಸಿರವಾರದಲ್ಲಿ ಸುಮಾರು ಎರಡು ಗಂಟೆ ಕಾಲ ಭಾರೀ ಮಳೆಯಾಗಿದೆ. ಲಿಂಗಸುಗೂರು ತಾಲೂಕಿನ ಜಾಂತಾಪೂರ ಗ್ರಾಮದಲ್ಲಿ ಭಾನುವಾರ ರಾತ್ರಿ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ. ತಾಲೂಕಿನ ಹಲವಡೆ ಮಂಗಳವಾರ ಸಂಜೆ ಸುರಿದ ಅಕಾಲಿಕ ಮಳೆಯಿಂದ ಭತ್ತದ ರಾಶಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿಯ ಬೆಳೆ ಹಾನಿಯಾಗಿದೆ.
ಸಿಂಧನೂರು ತಾಲೂಕಿನ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ಕಟಾವಾಗಿರುವ ಸುಮಾರು 700ಕ್ಕೂ ಹೆಚ್ಚು ಕ್ವಿಂಟಾಲ್ ಭತ್ತದ ರಾಶಿಗೆ ನೀರು ನುಗ್ಗಿದ್ದು, ಸಂಪೂರ್ಣ ಹಾಳಾಗಿದೆ. ಸುಮಾರು 10 ಲಕ್ಷ ರೂ. ಮೌಲ್ಯದ ಹಾನಿ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.
ರಾಜ್ಯ ರೈತ ಸಂಘದ ಮುಖಂಡ ಚಾಮರಸ ಮಾಲಿ ಪಾಟೀಲ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಈ ಮೊದಲು ಕಟಾವಾಗಿರುವ ಭತ್ತವನ್ನು ರೈತರು ಕಡಿಮೆ ಬೆಲೆಗೆ ಮಾರಾಟ ಮಾಡಿಕೊಂಡಿದ್ದಾರೆ. ಮೊದಲು ಸುರಿದ ಮಳೆಯಿಂದ ಕಟಾವಾಗಬೇಕಿದ್ದ ಬೆಳೆಯೇ ನೀರು ಪಾಲಾಯಿತು. ಇದರಿಂದ ಸುಮಾರು 10 ಲಕ್ಷ ರೂಪಾಯಿವರೆಗೂ ಅಪಾರ ಹಾನಿಯಾಗಿದೆ” ಎಂದು ಹೇಳಿದರು.
ಇದೀಗ ಕಟಾವು ಮಾಡಿರುವ ಭತ್ತಕ್ಕೆ ಬೆಂಬಲ ಬೆಲೆ ಇಲ್ಲದ ಕಾರಣ ರೈತರು ತಮ್ಮ ಜಮೀನು ಅಥವಾ ಬಯಲು ಪ್ರದೇಶಗಳಲ್ಲಿ ರಾಶಿ ಹಾಕಿಕೊಂಡಿದ್ದರು. ಭಾರೀ ಮಳೆ ಸುರಿಯುತ್ತಿರುವುದರಿಂದ ಭತ್ತದ ರಾಶಿಗೆ ನೀರು ನುಗ್ಗಿ ಸಂಪೂರ್ಣ ಹಾಳಾಗಿದೆ. ರಾಶಿ ಮಾಡಿದ್ದ ಭತ್ತ ಮಳೆಯಿಂದಾಗಿ ಕಣದ ಸುತ್ತಮುತ್ತ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾದ ಕಾರಣ ಭತ್ತ ರಕ್ಷಿಸಲು ಸಾಧ್ಯವಾಗಿಲ್ಲ. ಇದರಿಂದ ಸುಮಾರು 10 ಲಕ್ಷ ರೂಪಾಯಿವರೆಗೂ ಅಪಾರ ಹಾನಿಯಾಗಿರುವುದು ಕಂಡುಬಂದಿದೆ.
ಇದನ್ನೂ ಓದಿದ್ದೀರಾ? ಚನ್ನರಾಯಪಟ್ಟಣ | 15ನೇ ಹಣಕಾಸು ಅನುದಾನ ಬಿಡುಗಡೆ; ಆನೆಕೆರೆ ಗ್ರಾ.ಪಂ. ಪಿಡಿಒ ಶೇ.10ರಷ್ಟು ಲಂಚಕ್ಕೆ ಬೇಡಿಕೆ
ರೈತರಿಗೆ ಕೆಲ ಕಡೆ ಸೂಕ್ತ ದಾಸ್ತಾನು ಸಂಗ್ರಹ ಗೋದಾಮು ಇಲ್ಲದ ಕಾರಣ ತಮ್ಮ ಹೊಲ ಅಥವಾ ಬಯಲು ಪ್ರದೇಶದಲ್ಲಿ ಭತ್ತದ ರಾಶಿ ಹಾಕಿದ್ದರು. ಭತ್ತವನ್ನು ರಾಶಿ ಹಾಕಿದ್ದ ಕಣದ ಸುತ್ತಮುತ್ತ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾದ ಕಾರಣ ಭತ್ತವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಕಾಲಿಕ ಮಳೆ ಸುರಿದಿರುವ ಕಾರಣ ಕ್ಷಣಾರ್ಧದಲ್ಲಿ ಭತ್ತದ ರಾಶಿ ನಾಶವಾಗಿದ್ದು, ವರ್ಷದ ಕೂಳಿಗೆ ಕುತ್ತು ಬಂದಿದೆ.
ರೈತರು ರಾತ್ರಿ, ಹಗಲೆನ್ನದೆ ಬೇಸಿಗೆಯ ದಿನಗಳಲ್ಲಿಯೂ ಭತ್ತದ ಗದ್ದೆಗಳಿಗೆ ನೀರು ಕಟ್ಟಿಕೊಂಡು ಬೆಳೆ ಬೆಳೆದಿರುತ್ತಾರೆ. ಬೆಳೆ ಕೈಗೆ ಸಿಗುವಷ್ಟರಲ್ಲಿ ಅಕಾಲಿಕ ಮಳೆ ಸುರಿದು ಒಂದೆಡೆ ಹಾಳಾಗುತ್ತಿದ್ದರೆ, ದಾಸ್ತಾನು ಸಂಗ್ರಹ ಗೋದಾಮು ಇಲ್ಲದ ಕಾರಣ ಇಡೀ ಬೆಳೆ ಹಾನಿಯಾಗುತ್ತಿದ್ದು, ರೈತರು ಕಂಗಾಲಾಗುವಂತಾಗಿದೆ.