ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಭದ್ರಾಪುರದ ಹಕ್ಕಿಪಿಕ್ಕಿ ಕಾಲೊನಿಯಲ್ಲಿ ವಾರದ (ಮೇ 12) ಹಿಂದೆ ರೈಲು ಹಳಿ ಬಳಿ ಶವವಾಗಿ ಪತ್ತೆಯಾಗಿದ್ದ 15 ವರ್ಷದ ಬಾಲಕಿ ಖುಷಿದು ಕೊಲೆಯಲ್ಲ, ಬದಲಿಗೆ ರೈಲು ಅಪಘಾತ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಶ್ರೀನಿವಾಸ ಗೌಡ ಹೇಳಿರುವ ಬೆನ್ನಲ್ಲೇ ಪ್ರಕರಣದ ಸ್ವತಂತ್ರ ಮರು ತನಿಖೆಗೆ ಆಗ್ರಹ ಕೇಳಿಬಂದಿದೆ.
‘ನಾವೆದ್ದು ನಿಲ್ಲದಿದ್ದರೆ ಕರ್ನಾಟಕ’ ಎಂಬ ಮಹಿಳೆಯರು ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಕಾರ್ಯನಿರ್ವಹಿಸುವ ಸಂಸ್ಥೆಗಳು ಮತ್ತು ವ್ಯಕ್ತಿಗಳ ಜಂಟಿವೇದಿಕೆ ಬಹಿರಂಗ ಪತ್ರವೊಂದನ್ನು ಬರೆದಿದೆ.
ಬಾಲಕಿಯ ಸಾವು ಸಂಭವಿಸಿದ್ದು ಹೇಗೆ?, ರೈಲ್ವೇ ಅಪಘಾತದಿಂದಲೋ ಅಥವಾ ಕ್ರೂರ ಹಿಂಸೆಯಿಂದಲೋ? ಬಿಡದಿ ಸಮೀಪದ ಭದ್ರಾಪುರದ ಹಕ್ಕಿಪಿಕ್ಕಿಸಮುದಾಯಕ್ಕೆ ಸೇರಿದ್ದ 14 ವರ್ಷದ ಬಾಲಕಿಯ ಸಾವಿನ ಕುರಿತು ಸರ್ಕಾರ ಮತ್ತುಪೊಲೀಸ್ ವ್ಯವಸ್ಥೆಗೆ ನಾವು ಪತ್ರದ ಮೂಲಕ ಮರು ತನಿಖೆಗೆ ಆಗ್ರಹಿಸುತ್ತಿದ್ದೇವೆ ಎಂದು ವೇದಿಕೆ ಹೇಳಿಕೊಂಡಿದೆ.
ಸಾವಿನ ಹಿಂದೆ ಆತಂಕ ಹುಟ್ಟಿಸುವಂತಹ ವಿಚಾರಗಳಿವೆ. ಅವಳು ಹಿಂದಿನ ಸಂಜೆಯಿಂದ ಕಾಣೆಯಾಗಿದ್ದಳು ಎಂಬ ಅಂಶದಿಂದ ಹಿಡಿದು ಆಕೆಯ ದೇಹವು ಪತ್ತೆಯಾದ ನಿರ್ಜನ ಸ್ಥಳ, ಆಕೆಯ ಬಟ್ಟೆಗಳ ಹರಿದ ಸ್ಥಿತಿ, ಗಂಭೀರವಾದ ಏಟು ಬಿದ್ದಿದ್ದ ತಲೆ, ಮುರಿದ ಕಾಲು ಮತ್ತು ಬೆನ್ನು ಸೇರಿದಂತೆ ಆಕೆಯ ದೇಹದ ಮೇಲಿನ ಗಂಭೀರ ಗಾಯಗಳ ಗುರುತುಗಳವರೆಗೆ ಅನೇಕ ವಿಷಯಗಳು ಮೊದಲ ದಿನವೇ ಟುಂಬದ ಸದಸ್ಯರ ಹೇಳಿಕೆಗಳಲ್ಲಿ ಕೇಳಬಂದವು. ಹಾಗೆಯೇ ಅಪರಿಚಿತ ಕಾರೊಂದು ದೇಹ ಸಿಕ್ಕಿದ ಸ್ಥಳದ ಸಮೀಪದವರೆಗೆ ಬಂದು ಹಿಂತಿರುಗಿ ಹೋಗಿದ್ದಕ್ಕೆ ಸಿಸಿಟಿವಿ ಫೂಟೇಜ್ ಇದೆ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬಿಡದಿ ಗ್ರೌಂಡ್ ರಿಪೋರ್ಟ್: ಹಕ್ಕಿಪಿಕ್ಕಿ ಬಾಲಕಿಯ ಅತ್ಯಾಚಾರ, ಕೊಲೆ ಮುಚ್ಚಿ ಹಾಕುವ ಷಡ್ಯಂತ್ರ ನಡೆದಿದೆಯೇ?
ಪೊಲೀಸರು ಆರಂಭದಲ್ಲಿ ಇದು ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣ ಎಂದು ಪರಿಗಣಿಸಿ, ವಿಚಾರಣೆಗಾಗಿ ಕೆಲವರನ್ನು ಠಾಣೆಗೆ ಕರೆಸಿದ್ದರು. ಸಾಮಾಜಿಕ ಮಾಧ್ಯಮ ವರದಿಗಳ ಕಾರಣದಿಂದಾಗಿ ಈ ಪ್ರಕರಣವು ಪಡೆದ ಹೆಚ್ಚಿನ ಗಮನದಿಂದಾಗಿ, ಸರ್ಕಾರದ ಅನೇಕ ಉನ್ನತ ಅಧಿಕಾರಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು, ಜಿಲ್ಲಾಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿಗಳು ಸೇರಿದಂತೆ ಭೇಟಿ ನೀಡಿ ಹೆಣ್ಣುಮಗುವಿನಸಾವಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು. ಆದರೆ ಈಗ, ರಾಮನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದು ರೈಲ್ವೇ ಅಪಘಾತ ಎಂದು ಘೋಷಿಸಿದ್ದಾರೆ. ಇಡೀ ಪ್ರಕ್ರಿಯೆ ಮತ್ತು ಪ್ರಕರಣವನ್ನು ನಿಭಾಯಿಸಿದ ರೀತಿ ನಮ್ಮಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ ಎಂದು ವೇದಿಕೆ ಹೇಳಿದೆ.
ಹೆಣ್ಣು ಮಕ್ಕಳ ಸಾವಿನ ಸರಣಿಗೆ ಸೇರ್ಪಡೆಯಾದ ಮತ್ತೂಬ್ಬ ಮುಗ್ಧ ಬಾಲಕಿಯ ಸಂಶಯಾಸ್ಪದವಾದ ಸಾವಿನ ಬಗ್ಗೆ ನಮ್ಮ ಆಳವಾದ ದುಃಖವನ್ನು ವ್ಯಕ್ತಪಡಿಸಲು ನಾವು ಈ ಬಹಿರಂಗ ಪತ್ರವನ್ನು ಬರೆಯುತ್ತಿದ್ದೇವೆ. ಈ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಯು, ಉತ್ತರಗಳನ್ನು ಒದಗಿಸುವುದಕ್ಕಿಂತ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿರುವುದರಿಂದ, ಈ ವಿಚಾರಕ್ಕೆ ಸಂಬಂಧಿಸಿದಂತೆ ಮರು ತನಿಖೆ ಅಗತ್ಯವಿದೆ ಎಂದು ನಾವು ಭಾವಿಸುತ್ತೇವೆ ಎಂದು ‘ನಾವೆದ್ದು ನಿಲ್ಲದಿದ್ದರೆ- ಕರ್ನಾಟಕ’ ವೇದಿಕೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.