ಉಡುಪಿ ಜಿಲ್ಲೆಯ ಪಡುಬಿದ್ರಿ-ಕಾರ್ಕಳ ಬೈಪಾಸ್ ರಾಜ್ಯ ಹೆದ್ದಾರಿ ಕುಂಟಲ್ಪಾಡಿ ಜಂಕ್ಷನ್ ಅಪಘಾತ ವಲಯವಾಗುವ ಮುನ್ನ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ. ಈ ಬಗ್ಗೆ ಹೆದ್ದಾರಿ ಇಲಾಖೆ ಸುರಕ್ಷಾ ಕ್ರಮಗಳನ್ನು ರೂಪಿಸುವಂತೆ ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಸಾಣೂರು, ಸಾಣೂರು ಜಂಕ್ಷನ್, ಕುಂಟಲ್ಪಾಡಿ, ಬಿಂದು ನಗರ, ಮಠದಕೆರೆ, ದೂಪದಕಟ್ಟೆ, ಪರ್ಪಲೆ, ದೆಂದಬೆಟ್ಟು, ಜೋಡು ಗರೋಡಿ, ಕಡೆಬೆಟ್ಟು, ಮಠದ ಬೈಲು ಭಾಗದ ಜನರಿಗೆ ಜಂಕ್ಷನ್ ನಿತ್ಯ ಓಡಾಟದ ಸ್ಥಳವಾಗಿದೆ. ಈ ರಾಜ್ಯ ಹೆದ್ದಾರಿಯಲ್ಲಿ ಕಾರು, ಬೈಕು, ಬಸ್ಸು ಸಹಿತ ಲಘು, ಘನ ವಾಹನಗಳು ನೂರಾರು ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತವೆ. 10 ವರ್ಷಗಳ ಹಿಂದೆ ರಾಜ್ಯ ಹೆದ್ದಾರಿಯಾಗಿ ವ್ಯವಸ್ಥಿತವಾಗಿ ರೂಪುಗೊಂಡ ರಸ್ತೆಯು ಕುಂಟಲ್ಪಾಡಿಯಲ್ಲಿ ಮಾತ್ರ ಅವೈಜ್ಞಾನಿಕ ಮಾದರಿಯಲ್ಲಿ ರೂಪುಗೊಂಡಿದೆ ಎಂದು ಸ್ಥಳೀಯರ ಅಭಿಪ್ರಾಯ. ಈಗಾಗಲೆ ಹಲವು ಅಪಘಾತಗಳು ಇಲ್ಲಿ ಸಂಭವಿಸಿದ್ದು, ಒಂದೆಡೇ ರಸ್ತೆ ಅವೈಜ್ಞಾನಿಕತೆ ಮತ್ತು ಚಾಲಕರ ಅತೀ ವೇಗದ ಚಾಲನೆಯೂ ಅಪಘಾತಗಳಿಗೆ ಕಾರಣ ಎನ್ನಲಾಗುತ್ತದೆ.
ಇಲ್ಲಿ ಕೈಗಾರಿಕೆ ಪ್ರದೇಶಗಳು ಇದ್ದು, ಹೆಚ್ಚಿನ ಸಂಖ್ಯೆ ಘನ ವಾಹನಗಳ ಓಡಾಟವು ಇದೆ. ವಿದ್ಯಾರ್ಥಿಗಳು, ಹಿರಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಓಡಾಡುತ್ತಾರೆ. ಇಲ್ಲಿ ರಸ್ತೆ ಇಳಿಜಾರಿನಂತೆ ರೂಪಿಸಲಾಗಿದೆ. ಅಲ್ಲದೆ ತಿರುವು ಮತ್ತು ಜಂಕ್ಷನ್ ಇರುವುದರಿಂದ ಸವಾರರಿಗೆ ಗೊಂದಲ ಉಂಟಾಗುತ್ತದೆ. ಹೆದ್ದಾರಿಯಲ್ಲಿ ಬರುವ ವಾಹನಗಳು ಅತೀವೇಗದಿಂದ ಬರುತ್ತಾರೆ. ಅತೀವೇಗದಿಂದ ಬರುವ ವಾಹನಗಳು ಸ್ಥಳೀಯ ಸ್ಕೂಟರ್ ಅಥವಾ ಬೈಕ್ ಸವಾರರಿಗೆ ಢಿಕ್ಕಿ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ರಾಜ್ಯ ಹೆದ್ದಾರಿ ಇಲಾಖೆ ಈ ಬಗ್ಗೆ ಗಮನಹರಿಸಿ ಸುರಕ್ಷತಾ ಫಲಕ, ರಿಪ್ಲೆಕ್ಟ್ ಲೈಟ್, ಸಮರ್ಪಕ ಬ್ಯಾರಿಕೇಡ್ ಅಳವಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸ್ಥಳೀಯರರಾದ ಸತೀಶ್. ಎಸ್. ಬಂಗೇರ, ಮಠದಕೆರೆ ಮಾತನಾಡಿದ್ದು, ಪಡುಬಿದ್ರಿ-ಕಾರ್ಕಳ ಬೈಪಾಸ್ ರಾಜ್ಯ ಹೆದ್ದಾರಿ ರಸ್ತೆ ಉತ್ತಮವಾಗಿದ್ದು, ಕುಂಟಲ್ಪಾಡಿ ಜಂಕ್ಷನ್‌ನಲ್ಲಿ ಮಾತ್ರ ಅವೈಜ್ಞಾನಿಕ ರೀತಿಯಲ್ಲಿ ರೂಪಿಸಲಾಗಿದೆ.
ಇಳಿಜಾರಿನಂತಿರುವ ಹೆದ್ದಾರಿಯಲ್ಲಿ ವೇಗದಿಂದ ಚಲಿಸುವ ವಾಹನಗಳು ಸ್ಥಳೀಯರಿಗೆ ಆತಂಕ ಹುಟ್ಟಿಸುತ್ತದೆ. ಈಗಾಗಲೇ ಇಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸೂಕ್ತ ಪರಿಹಾರ ಕ್ರಮ ತೆಗೆದುಕೊಳ್ಳಬೇಕು. ಸ್ಥಳೀಯ ಸಾರ್ವಜನಿಕರ ಸುರಕ್ಷತೆಗಾಗಿ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಹೇಳಿದರು.