ನಾನು ಎಂದಿಗೂ ಕನ್ನಡದಲ್ಲಿ ಮಾತಾಡಲ್ಲ, ಹಿಂದಿಯಲ್ಲೇ ಮಾತಾಡ್ತೀನಿ ಎಂದು ಎಸ್‌ಬಿಐ ಮ್ಯಾನೇಜರ್ ಹೇಳಿರುವ ವಿಡಿಯೋ ವೈರಲ್ ಆಗಿದೆ. ಸದ್ಯ ಎಸ್‌ಬಿಐ ಮ್ಯಾನೇಜರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
“ಚಂದಾಪುರದ ಸೂರ್ಯಸಿಟಿ ಯ ಎಸ್‌ಬಿಐ ಬ್ರ್ಯಾಂಚ್ ಮ್ಯಾನೇಜರ್ ಕನ್ನಡ ಮಾತಾಡುವುದಿಲ್ಲ ಎಂದು ಧಿಮಾಕು ತೋರಿಸಿದ್ದಾರೆ. ಕೂಡಲೇ ಈಕೆಯ ಮೇಲೆ ಕ್ರಮ ಆಗಬೇಕು” ಎಂದು ಕನ್ನಡಿಗರು ಆಗ್ರಹಿಸಿದ್ದಾರೆ. ಇನ್ನು ಕೆಲವರು “ಸರ್ಕಾರ ಏನು ಕ್ರಮ ಕೈಗೊಳ್ಳುತ್ತಿದೆ? ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏನು ಮಾಡುತ್ತಿದೆ” ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ಜಿಲ್ಲೆಯಲ್ಲಿ ಕನ್ನಡ ಭಾಷೆ ಮಾಯವಾಗುತ್ತಿದೆ
ಸದ್ಯ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ವಿಡಿಯೋ ಮಾಡಿಕೊಂಡ ಗ್ರಾಹಕರು “ಇದು ಕರ್ನಾಟಕ ಮೇಡಂ. ಹಾಗಾಗಿ ಕನ್ನಡದಲ್ಲಿ ಮಾತನಾಡಿ” ಎಂದು ಹೇಳಿರುವುದು ಕೇಳಿಬಂದಿದೆ. ಅದಕ್ಕೆ ಉತ್ತರಿಸಿರುವ ಎಸ್‌ಬಿಐ ಮ್ಯಾನೇಜರ್, “ಇದು ಭಾರತ” ಎಂದಿದ್ದಾರೆ.
“ಇದು ಭಾರತವಾದರೆ ಕರ್ನಾಟಕದಲ್ಲಿ ಕನ್ನಡ ಮೊದಲು. ಈಗ ನೀವು ಏನು ಮಾತಾಡುತ್ತಿದ್ದೀರೋ ಅದು ತುಂಬಾ ಒಳ್ಳೆಯದು. ಈಗ ನೀವು ಕನ್ನಡ ಮಾತನಾಡುವುದೇ ಇಲ್ಲವೇ” ಎಂದು ಗ್ರಾಹಕರು ಪ್ರಶ್ನಿಸಿದ್ದಾರೆ.
ಅದಕ್ಕೆ ಪ್ರತ್ಯುತ್ತರಿಸಿರುವ ಎಸ್‌ಬಿಐ ಮ್ಯಾನೇಜರ್, “ಇಲ್ಲ ಮಾತಾನಾಡುವುದಿಲ್ಲ. ಹಿಂದಿ ಮಾತಾನಾಡುವೆ. ನೀವು ನನ್ನ ಎಸ್‌ಬಿಐ ಚೇರ್‌ಮ್ಯಾನ್ ಜೊತೆ ಮಾತನಾಡಿಕೊಳ್ಳಿ” ಎಂದಿದ್ದಾರೆ.
ಚಂದಾಪುರದ ಸೂರ್ಯಸಿಟಿ ಯ SBI Branch Manager ಕನ್ನಡ ಮಾತಾಡುವುದಿಲ್ಲ ಎಂದು ಧಿಮಾಕು ತೋರಿಸಿದ್ದಾಳೆ.
— 👑Che_Krishna🇮🇳💛❤️ (@CheKrishnaCk_) May 20, 2025
ಕೂಡಲೇ ಈಕೆಯ ಮೇಲೆ ಕ್ರಮ ಆಗಬೇಕು. ಕರ್ನಾಟಕದಲ್ಲಿ ಕನ್ನಡ ಮಾತಾಡೊಲ್ಲ ಅಂದ್ರೆ ಏನಕ್ಕೆ ಇರಬೇಕು ಇಲ್ಲಿ? pic.twitter.com/llkqTjsW7R
ಈ ವೇಳೆ “ಚೇರ್‌ಮ್ಯಾನ್ ಜೊತೆ ಮಾತನಾಡಬೇಕಾಗಿಲ್ಲ. ಇದು ಆರ್‌ಬಿಐ ನಿಯಮ. ಆಯಾ ರಾಜ್ಯಗಳಲ್ಲಿ ಆಯಾ ಭಾಷೆ ಮಾತನಾಡಬೇಕು” ಎಂದು ಗ್ರಾಹಕರು ಆರ್‌ಬಿಐ ನಿಯಮ ವಿವರಿಸಿದ್ದಾರೆ. ಜೊತೆಗೆ ಸಮೀಪದಲ್ಲಿರುವ ಎಸ್‌ಬಿಐ ಸಿಬ್ಬಂದಿ “ಅವರು ಕನ್ನಡನೇ ಮಾತಾಡಲ್ಲ, ಅವರಿಗೆ ಕನ್ನಡವೇ ಬರಲ್ಲ” ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಕೊನೆಯಲ್ಲಿ “ನಾನು ಎಂದಿಗೂ ಕನ್ನಡ ಮಾತನಾಡುವುದೇ ಇಲ್ಲ” ಎಂದು ಬ್ಯಾಂಕ್ ಮ್ಯಾನೇಜರ್ ಹೇಳಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಎಸ್‌ಬಿಐ ಬ್ರ್ಯಾಂಚ್ ಮ್ಯಾನೇಜರ್ ವಿರುದ್ಧ ಕ್ರಮಕ್ಕೆ ಕನ್ನಡಿಗರು ಆಗ್ರಹಿಸಿದ್ದಾರೆ.
ಇಂದು ಕರವೇ ಪ್ರತಿಭಟನೆ
ಎಸ್‌ಬಿಐನ ಚಂದಾಪುರ ಶಾಖೆಯ ವ್ಯವಸ್ಥಾಪಕಿ ಕನ್ನಡದಲ್ಲಿ ವ್ಯವಹರಿಸಲು ನಿರಾಕರಿಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದೆ. ಇದರ ವಿರುದ್ಧವಾಗಿ ಬುಧವಾರ(ಮೇ 21) ಬೆಳಿಗ್ಗೆ ಪ್ರತ್ಯೇಕವಾಗಿ ಎರಡು ಸ್ಥಳಗಳಲ್ಲಿ ಕರವೇ ಪ್ರತಿಭಟನೆಗೆ ಕರೆ ನೀಡಿದೆ. ಬೆಳಿಗ್ಗೆ 11 ಗಂಟೆಗೆ ಕರವೇ ಬೆಂಗಳೂರು ನಗರ ಘಟಕದ ಕಾರ್ಯಕರ್ತರು ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಬ್ಯಾಂಕ್‌ನ ಪ್ರಧಾನ ಕಚೇರಿಗೆ ಭೇಟಿ ನೀಡಿ ವ್ಯವಸ್ಥಾಪಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಲಿದ್ದಾರೆ. ಹಾಗೆಯೇ ಕರವೇ ವೇದಿಕೆ ಮಹಿಳಾ ಘಟಕವು ಚಂದಾಪುರದ ಶಾಖೆಗೆ ಮುತ್ತಿಗೆ ಹಾಕಲಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಮಾಹಿತಿ ನೀಡಿದ್ದಾರೆ.
