ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾಗಿ ಕಂದಕಕ್ಕೆ ಉರುಳಿದ್ದು, ಇಬ್ಬರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಔರಾದ್ ತಾಲ್ಲೂಕಿನ ಜಮಲಾಪುರ ಕ್ರಾಸ್ ಬಳಿ ಬುಧವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ನಡೆದಿದೆ.
ಔರಾದ್ ಘಟಕಕ್ಕೆ ಸೇರಿದ KA 38, F0882 ಬಸ್ ಔರಾದ್‌ದಿಂದ ಭಾಲ್ಕಿಗೆ ತೆರಳುತ್ತಿದ್ದ ವೇಳೆ ಕಮಲನಗರ ರಸ್ತೆಯಲ್ಲಿ ಈ ಘಟನೆ ಜರುಗಿದೆ. ಎದುರಿನಿಂದ ಟೆಂಪೋ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಬಸ್ ಉರುಳಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಖಂಡೇಕೆರಿ ಗ್ರಾಮದ ಹಿರಿಯರಾದ ಸೋಪನರಾವ್ ಬಿರಾದಾರ ಹಾಗೂ ವಿದ್ಯಾರ್ಥಿ ನರಸಿಂಗ್ ಬಿರಾದಾರ ಗಾಯಗೊಂಡಿದ್ದು, ಅವರನ್ನು ಔರಾದ್ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಸ್‌ನಲ್ಲಿ 9 ಜನ ಪ್ರಯಾಣಿಸುತ್ತಿದ್ದರು. ಇಬ್ಬರಿಗೆ ಗಾಯವಾಗಿದೆ. ಉಳಿದವರು ಎಲ್ಲರೂ ಸುರಕ್ಷಿತವಾಗಿದ್ದಾರೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಔರಾದ್ ಬಸ್ ಘಟಕ ವ್ಯವಸ್ಥಾಪಕ ರಾಜೇಂದ್ರ ‘ಈದಿನ.ಕಾಮ್’ ಗೆ ಮಾಹಿತಿ ನೀಡಿದರು.