ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಈ ಬಾರಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದರೂ ಕಳೆದ 3 ಪಂದ್ಯಗಳಲ್ಲಿ ಉತ್ತಮ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದಾರೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ದೊಡ್ಡ ದಾಖಲೆ ಬರೆಯುವ ಸಾಧ್ಯತೆಯಿದೆ.
ಈಗಾಗಲೇ ಆಡಿದ 12 ಪಂದ್ಯಗಳಲ್ಲಿ 14 ಅಂಕಗಳನ್ನು ಕಲೆ ಹಾಕಿರುವ ಮುಂಬೈ ಇಂಡಿಯನ್ಸ್ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ಜಯ ಸಾಧಿಸಿ ಪ್ಲೇ ಆಫ್‌ಗೆ ಅರ್ಹತೆ ಪಡೆಯುವ ಕನಸನ್ನು ಮುಂಬೈ ಕಾಣುತ್ತಿದೆ. ಈ ವೇಳೆ ರೋಹಿತ್ ಶರ್ಮಾ ಅಬ್ಬರಿಸುವುದು ತಂಡಕ್ಕೆ ಅನಿವಾರ್ಯವಾಗಿದೆ.
ಇತ್ತೀಚಿಗೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ, ಈಗ ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ ಮಾತ್ರ ಆಡುತ್ತಾರೆ. ಇವರು ಐಪಿಎಲ್‌ನಲ್ಲಿ ಈ ಬಾರಿ ಉತ್ತಮವಾಗಿ ರನ್ ಕಲೆ ಹಾಕುತ್ತಿದ್ದಾರೆ. ರೋಹಿತ್ ಶರ್ಮಾ ಆಡಿದ 11 ಪಂದ್ಯಗಳಲ್ಲಿ 152 ಸ್ಟ್ರೈಕ್‌ರೇಟ್‌ನಲ್ಲಿ 300 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸರಾಸರಿ 30 ಆಗಿದೆ. ಇನ್ನು 17 ಸಿಕ್ಸರ್ ಹಾಗೂ 28 ಬೌಂಡರಿ ಬಾರಿಸಿರುವ ರೋಹಿತ್ ಶರ್ಮಾ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಮೈದಾನದಲ್ಲಿ ಜಗಳಕ್ಕಿಳಿದ ಅಭಿಷೇಕ್ ಶರ್ಮಾ–ದಿಗ್ವೇಶ್ ರಥಿ; ಬಿಸಿಸಿಐನಿಂದ ಒಬ್ಬರಿಗೆ ಅಮಾನತು ಶಿಕ್ಷೆ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಮೂರು ಸಿಕ್ಸರ್‌ಗಳನ್ನು ಬಾರಿಸಿದರೆ ಐಪಿಎಲ್‌ನಲ್ಲಿ 300 ಸಿಕ್ಸರ್ ಬಾರಿಸಿದ ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಳ್ಳಲಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಐಪಿಎಲ್‌ನಲ್ಲಿ 268 ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ, ಇಲ್ಲಿಯವರೆಗೆ 297 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮೂರು ಸಿಕ್ಸರ್ ಸಿಡಿಸುವಲ್ಲಿ ಯಶಸ್ವಿಯಾದರೆ ದೊಡ್ಡ ದಾಖಲೆ ಬರೆಯಬಹುದು.
ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಕೀರ್ತಿ ವಿಂಡೀಸ್‌ನ ಕ್ರಿಸ್ ಗೇಲ್ ಅವರಿಗೆ ಸಲ್ಲುತ್ತದೆ. ಇವರು 142 ಪಂದ್ಯಗಳಲ್ಲಿ 357 ಸಿಕ್ಸರ್ ಸಿಡಿಸಿದ್ದಾರೆ. ಎರಡನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದಾರೆ.
ಕ್ರಿಸ್ ಗೇಲ್ 142 ಪಂದ್ಯಗಳಿಂದ 357 ಸಿಕ್ಸರ್, ರೋಹಿತ್ ಶರ್ಮಾ 268 ಪಂದ್ಯಗಳಿಂದ 297 ಸಿಕ್ಸರ್, ವಿರಾಟ್ ಕೊಹ್ಲಿ 263 ಪಂದ್ಯಗಳಿಂದ 290 ಸಿಕ್ಸರ್, ಎಂ ಎಸ್ ಧೋನಿ 277 ಪಂದ್ಯಗಳಿಂದ 264 ಸಿಕ್ಸರ್ ಹಾಗೂ ಎಬಿ ಡಿವಿಲಿಯರ್ಸ್ 184 ಪಂದ್ಯಗಳಿಂದ 251 ಸಿಕ್ಸರ್ ಬಾರಿಸಿದ್ದಾರೆ.