- 12 ವರ್ಷಗಳ ನಂತರ ಕೊನೆಗೊಂಡ ಎರಡನೇ ಹಂತದ ವಿಚಾರಣೆ
- ಪ್ರಶ್ನೆ ಪತ್ರಿಕೆಯಲ್ಲಿ ಪ್ರವಾದಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ದಾಳಿ
ಪ್ರವಾದಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ 2010ರಲ್ಲಿ ಕೇರಳದ ಪ್ರೊಫೆಸರ್ ಟಿಜೆ ಜೋಸೆಫ್ ಕೈ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಚ್ಚಿಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯ ಬುಧವಾರ ಆರು ಮಂದಿಯನ್ನು ದೋಷಿಗಳೆಂದು ಘೋಷಿಸಿದೆ.
“12 ವರ್ಷಗಳ ನಂತರ ಕೊನೆಗೊಂಡ ಎರಡನೇ ಹಂತದ ವಿಚಾರಣೆಯಲ್ಲಿ 11 ಆರೋಪಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಐವರನ್ನು ಖುಲಾಸೆಗೊಳಿಸಲಾಗಿದ್ದು, ಆರು ಮಂದಿಗೆ ಶಿಕ್ಷೆ ವಿಧಿಸಲಾಗಿದೆ. ಮೂವರು ಅಪರಾಧಿಗಳಿಗೆ ಪಿತೂರಿಗಾಗಿ ಶಿಕ್ಷೆ ವಿಧಿಸಲಾಗಿದೆ” ಎಂದು ವಕೀಲ ನೌಶಾದ್ ಪ್ರಕರಣದ ಬಗ್ಗೆ ನೀಡಿದ ತೀರ್ಪಿನ ಬಗ್ಗೆ ಮಾಹಿತಿ ನೀಡಿದ್ದಾರೆ.
2015ರಲ್ಲಿ ನಡೆದ ಮೊದಲ ಹಂತದ ವಿಚಾರಣೆಯ ಬಳಿಕದ ತೀರ್ಪಿನಲ್ಲಿ, ಘಟನೆಗೆ ಸಂಬಂಧಿಸಿದಂತೆ 31 ಜನರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು ಮತ್ತು ಅವರಲ್ಲಿ 13 ಜನರನ್ನು ತಪ್ಪಿತಸ್ಥರೆಂದು ಘೋಷಿಸಲಾಗಿತ್ತು.
ಎರಡನೇ ಹಂತದ, ವಿಚಾರಣೆಗೊಳಪಡಿಸಿದ 11 ಮಂದಿ ಆರೋಪಿಗಳ ಪೈಕಿ ಸಜಿಲ್, ಎಂ.ಕೆ.ನಾಸರ್, ಶಫೀಕ್, ನಜೀಬ್ ಕೆ.ಎ, ಅಝೀಝ್ ಓಡಕ್ಕಲ್, ಝುಬೈರ್ ಟಿ.ಪಿ., ಎಂ.ಕೆ.ನೌಶಾದ್, ಮನ್ಸೂರ್, ಪಿ.ಪಿ.ಮೊಯ್ದೀನ್ ಕುಂಜು, ಮೊಹಮ್ಮದ್ ರಫಿ, ಪಿ.ಎಂ.ಅಯ್ಯೂಬ್ ಸೇರಿದ್ದರು.
ಇವರಲ್ಲಿ ನಾಸರ್, ಸಜಿಲ್, ನಜೀಬ್, ನೌಶಾದ್, ಮೊಯ್ದೀನ್ ಕುಂಜು, ಅಯ್ಯೂಬ್ ತಪ್ಪಿತಸ್ಥರಾಗಿದ್ದರೆ, ಶಫೀಕ್, ಅಝೀಝ್, ರಫಿ, ಝುಬೈರ್ ಮತ್ತು ಮನ್ಸೂರ್ ಅವರನ್ನು ಖುಲಾಸೆಗೊಳಿಸಲಾಗಿದೆ.
ಎಲ್ಲ ಆರೋಪಿಗಳು 2022ರಲ್ಲಿ ನಿಷೇಧಿಸಲ್ಪಟ್ಟ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರಾಗಿದ್ದರು. ಎನ್‌ಐಎ ಚಾರ್ಜ್‌ಶೀಟ್ ಪ್ರಕಾರ, ಪ್ರೊಫೆಸರ್ ಜೋಸೆಫ್ ಅವರ ಕೈಯನ್ನು ಕತ್ತರಿಸಿದ ಎಂದು ಹೇಳಲಾದ ಪ್ರಮುಖ ಆರೋಪಿ ಆಶಾಮಣ್ಣೂರು ಸವಾದ್ ಇನ್ನೂ ತಲೆಮರೆಸಿಕೊಂಡಿದ್ದಾನೆ.
ಜುಲೈ 4, 2010ರಂದು, ತೋಡುಪುಳದ ನ್ಯೂಮನ್ ಕಾಲೇಜಿನ ಪ್ರೊಫೆಸರ್ ಟಿಜೆ ಜೋಸೆಫ್ ಅವರು ಕಾಲೇಜಿನಲ್ಲಿನ ಆಂತರಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಪ್ರವಾದಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಸಶಸ್ತ್ರ ತಂಡ ದಾಳಿ ನಡೆಸಿತ್ತು. ಜೋಸೆಫ್ ಮತ್ತು ಅವರ ಕುಟುಂಬದವರು ಚರ್ಚ್‌ಗೆ ಹೋಗುತ್ತಿದ್ದಾಗ ಅವರ ಮೇಲೆ ದಾಳಿ ಮಾಡಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ಎನ್‌ಐಎ, ಮಾರ್ಚ್ 9, 2011 ರಂದು ಕೇರಳ ಪೊಲೀಸರಿಂದ ಕೈಗೆತ್ತಿಕೊಂಡಿತ್ತು. ಈ ದಾಳಿಯನ್ನು ‘ಭಯೋತ್ಪಾದಕ ಕೃತ್ಯ’ ಎಂದು ಉಲ್ಲೇಖಿಸಿ, ಆರೋಪಿಗಳ ವಿರುದ್ಧ ಯುಎಪಿಎ ದಾಖಲಿಸಲಾಗಿತ್ತು.
ಶಿಕ್ಷೆಯ ಪ್ರಮಾಣವನ್ನು ಎನ್‌ಐಎ ನ್ಯಾಯಾಲಯವು ಜು.13ರಂದು ಮೂರು ಗಂಟೆಗೆ ಪ್ರಕಟಿಸಲಿದೆ ಎಂದು ವರದಿಯಾಗಿದೆ.