ವಿವಾಹೇತರ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಪ್ರಿಯಕರನ ಜೊತೆಗೂಡಿ ಪತ್ನಿ ಕೊಲೆ ಮಾಡಿದ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಮುಗಳಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕೊಲೆಯಾದ ವ್ಯಕ್ತಿಯನ್ನು ಶಂಕ್ರಪ್ಪ ಅಲಿಯಾಸ್ ಮುತ್ತು ಕೊಳ್ಳಿ(30) ಎಂದು ಗುರುತಿಸಲಾಗಿದೆ.
ರೋಣ ಪಟ್ಟಣದ ಹಕಾರಿ ಕಾಲೋನಿ ನಿವಾಸಿ ಶಂಕ್ರಪ್ಪ ವಿದ್ಯಾಳನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಪತ್ನಿ ವಿದ್ಯಾ ಬೇರೊಬ್ಬನ ಜೊತೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಳು. ಇತ್ತೀಚಿಗಷ್ಟೇ ಈ ವಿಚಾರ ಶಂಕರಪ್ಪ ಅವರ ಗಮನಕ್ಕೆ ಬಂದಿತ್ತು. ಶಂಕರಪ್ಪ ಮಲಗಿದ್ದಾಗ ಪ್ರಿಯಕರ ಶಿವಕುಮಾರ್ ನನ್ನು ಮನೆಗ ಕರೆಸಿಕೊಂಡಿದ್ದ ಪತ್ನಿ ವಿದ್ಯಾ, ಶಿವಕುಮಾರ್ ತಂದಿದ್ದ ರಾಡ್ ನಿಂದ, ಇಬ್ಬರೂ ಸೇರಿ ಹಲ್ಲೆ ಮಾಡಿ ಶಂಕರಪ್ಪರನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮೃತದೇಹದ ಕೈಕಾಲು ಕಟ್ಟಿದ ಆರೋಪಿಗಳು ಮನೆಯಲ್ಲಿದ್ದ ನಾಲ್ಕೈದು ಹಾಸಿಗೆಯಲ್ಲಿ ಮೃತದೇಹವನ್ನು ಸುರುಳಿ ಸುತ್ತಿದ್ದಾರೆ. ಬಳಿಕ ಪ್ರಿಯಕರನಿಗೆ ಮೃತದೇಹವನ್ನು ಸಾಗಿಸುವಂತೆ ವಿದ್ಯಾ ಹೇಳಿದ್ದಾಳೆ. ಅದರಂತೆ ಮೃತದೇಹವನ್ನು ಸಾಗಿಸಿದ ಶಿವಕುಮಾರ್, ಅದನ್ನು ಊರಿನ ಹೊರಗಿನ ಪಾಳುಬಾವಿಯಲ್ಲಿ ಎಸೆದಿದ್ದಾನೆ. ಪೊಲೀಸ್ ವಿಚಾರಣೆಯ ವೇಳೆ ಆರೋಪಿ ಶಿವಕುಮಾರ್ ಈ ಮಾಹಿತಿ ತಿಳಿದು ಬಂದಿದೆ.
ಮೃತದೇಹವನ್ನು ಎಸೆದ ನಾಲ್ಕು ದಿನದ ಬಳಿಕ, ವಿದ್ಯಾ ಪೊಲೀಸ್ ಠಾಣೆಗೆ ತೆರಳಿ ಗಂಡ ಶಂಕರಪ್ಪ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಳು. ದೂರು ಸ್ವೀಕರಿಸಿದ ಪೊಲೀಸರು ಹುಡುಕಾಟ ನಡೆಸಿದ ಐದು ದಿನಗಳ ಬಳಿಕ ಶಂಕರಪ್ಪ ಮೃತದೇಹ ಪತ್ತೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಗ್ರಾಕೂಸ್ ಹೋರಾಟಕ್ಕೆ ಮಣಿದ ಗ್ರಾಪಂ; 3 ತಿಂಗಳಿಂದ ಕೂಲಿ ಕಾರ್ಮಿಕರನ್ನು ಸತಾಯಿಸಿದ್ದ ಆರೋಪ
ಪ್ರಾಥಮಿಕ ತನಿಖೆಯಲ್ಲಿ ಕೊಲೆ ಎಂದು ತಿಳಿದ ಪೊಲೀಸರು ವಿಚಾರಣೆ ನಡೆಸಿದಾಗ, ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ವಿದ್ಯಾ ಹಾಗೂ ಪ್ರಿಯಕರ ಶಿವಕುಮಾರ್ ಅವರನ್ನು ರೋಣ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.