- ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಸವಾಲು
- ಯತ್ನಾಳ್, ನೀವೇನು ವಿಪಕ್ಷ ನಾಯಕರಾಗಿ ಆಯ್ಕೆಯಾಗಲ್ಲ
ರಾಜಕೀಯದಲ್ಲಿ ನಾನು ಹೊಂದಾಣಿಕೆ ರಾಜಕಾರಣ ಮಾಡಿರುವುದು ಸಾಬೀತಾದರೆ ರಾಜಕೀಯವಾಗಿ ನಿವೃತ್ತಿ ಘೋಷಿಸುವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
ಬುಧವಾರ ನಡೆದ ಎಂಟನೇ ದಿನದ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಹೊಂದಾಣಿಕೆ ರಾಜಕಾರಣದ ಆರೋಪ ಮಾಡಿದ ಯತ್ನಾಳ್ ಅವರಿಗೆ ಸಿದ್ದರಾಮಯ್ಯ ಸವಾಲು ಹಾಕಿದರು.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುತ್ತಿದ್ದರು. ಈ ವೇಳೆ ಅವರು ಕಾಂಗ್ರೆಸ್‌ನ ಐದು ಗ್ಯಾರಂಟಿ ಕುರಿತು ಪ್ರಸ್ತಾಪಿಸಿ, ಉಚಿತ ವಿದ್ಯುತ್ ವಿಚಾರ ಮಾತನಾಡುತ್ತಿದ್ದರು. ಈ ವೇಳೆ ಯತ್ನಾಳ್ ಅವರು ಕುಮಾರಸ್ವಾಮಿ ಮಾತಿಗೆ ಧ್ವನಿಗೂಡಿಸಿದರು.
ಸಿಎಂ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ, “ಯತ್ನಾಳ್ ಅವರೇ ನೀವು ತಿಂಗಳಿಗೆ 100, 110 ಯೂನಿಟ್ ವಿದ್ಯುತ್ ಸರಾಸರಿ ಬಳಸುತ್ತಿದ್ದರೆ ಒಂದು ವರ್ಷದ ಅವಧಿಯಲ್ಲಿ ಸರಾಸರಿ ಅಷ್ಟೇ ಬರುತ್ತದೆ. ಹಾಗಾಗಿ ನಿಮಗೆ 200 ಯೂನಿಟ್ ವಿದ್ಯುತ್ ಕೊಡೋ ಅಗತ್ಯ ಇದೆಯಾ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಪಕ್ಷದ ತೀರ್ಮಾನಕ್ಕೆ ತಲೆಬಾಗಿ ಉಪಸಭಾಪತಿ ಸ್ಥಾನವನ್ನು ಒಪ್ಪಿಕೊಂಡೆ: ನೂತನ ಉಪಸಭಾಪತಿ ರುದ್ರಪ್ಪ ಲಮಾಣಿ
ಮುಂದುವರಿದು, “ನೀವು ಹೀಗೆ ಪದೇ ಪದೇ ಮಾತನಾಡಿದರೆ ನೀವೇನು ವಿಪಕ್ಷನಾಯಕರಾಗಿ ಆಯ್ಕೆಯಾಗಲ್ಲ. ನನಗಿರುವ ಮಾಹಿತಿ ಪ್ರಕಾರ ಅಶ್ವತ್ಥ ನಾರಾಯಣ, ಬಸವರಾಜ ಬೊಮ್ಮಾಯಿ ಆಕಾಂಕ್ಷಿಗಳಾಗಿದ್ದಾರೆ” ಎಂದು ಸಿದ್ದರಾಮಯ್ಯ ಕಾಲೆಳೆದರು.
ಯತ್ನಾಳ್ ಮಧ್ಯ ಪ್ರವೇಶಿಸಿ, “ನೀವೆಷ್ಟೇ ಬೆಂಕಿ ಹಚ್ಚಲು ಪ್ರಯತ್ನಿಸಿದರು ಅದು ಹತ್ತಲ್ಲ. ನೀವು ನನಗೆ ಪದೇ ಪದೇ ವಿಪಕ್ಷ ನಾಯಕ ಆಗಲ್ಲ ಅಂತಿದ್ರೆ ನೀವು ಯಾರ ಜತೆಗೋ ಅಡ್ಜಸ್ಟ್‌ಮೆಂಟ್ ಮಾಡ್ಕೊಂಡಿದೀರ ಅಂತಾಯ್ತು” ಎಂದು ದೂರಿದರು.
ಯತ್ನಾಳ್ ಆರೋಪಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, “ನೋಡಿ ಯತ್ನಾಳ್, ನಾನು ಯಾರ ಜತೆಗೂ ನನ್ನ ಜೀವನದಲ್ಲಿ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡಿಲ್ಲ. ನೀವು ನನ್ನ ಮೇಲೆ ಮಾಡಿರುವ ಆರೋಪವನ್ನು ಸಾಬೀತು ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ” ಎಂದು ಸವಾಲು ಹಾಕಿದರು.