ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಅಬುಜ್‌ಮದ್ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ)ನ ನಾಯಕ ಬಸವರಾಜು ಸೇರಿದಂತೆ ಒಟ್ಟು 27 ಸದಸ್ಯರನ್ನು ಹತ್ಯೆ ಮಾಡಲಾಗಿದೆ. ಇನ್ನು ಈ ಎನ್‌ಕೌಂಟರ್ ವೇಳೆ ಜಿಲ್ಲಾ ಮೀಸಲು ಗಾರ್ಡ್(ಡಿಆರ್‌ಜಿ)ನ ಓರ್ವ ಸಿಬ್ಬಂದಿಯೂ ಮೃತಪಟ್ಟಿರುವುದಾಗಿ ವರದಿ ಉಲ್ಲೇಖಿಸಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಬಸ್ತಾರ್ ವಲಯದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಿ, “ಈ ಎನ್‌ಕೌಂಟರ್ ವೇಳೆ ಓರ್ವ ಡಿಆರ್‌ಜಿ ತಂಡದ ಸಿಬ್ಬಂದಿ ಹುತಾತ್ಮರಾದರು. ಎನ್‌ಕೌಂಟರ್ ಸಮಯದಲ್ಲಿ ಕೆಲವು ಇತರ ಸಿಬ್ಬಂದಿ ಗಾಯಗೊಂಡಿದ್ದಾರೆ. ಸದ್ಯ ಶೋಧ ಕಾರ್ಯಾಚರಣೆ ಮುಂದುವರೆದಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಛತ್ತೀಸ್‌ಗಢ | ಎನ್‌ಕೌಂಟರ್; ಎಂಟು ನಕ್ಸಲರು ಹತ
ಹಿರಿಯ ಮಾವೋವಾದಿ ನಾಯಕ ಅಬುಜ್‌ಮದ್‌ನ ನಿರ್ದಿಷ್ಟ ಪ್ರದೇಶದಲ್ಲಿ ಅಡಗಿಕೊಂಡಿದ್ದಾರೆ ಎಂಬ ಮಾಹಿತಿಯ ಆಧಾರದಲ್ಲಿ ನಾರಾಯಣಪುರ, ದಂತೇವಾಡ, ಬಿಜಾಪುರ ಮತ್ತು ಕೊಂಡಗಾಂವ್‌ನ ನಾಲ್ಕು ಜಿಲ್ಲೆಗಳ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಕಾರ್ಯಾಚರಣೆಯನ್ನು ನಡೆಸಿದೆ ಎನ್ನಲಾಗಿದೆ.
ಎನ್‌ಕೌಂಟರ್ ಬಗ್ಗೆ ಮಾತನಾಡಿದ ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, “ಕಾರ್ಯಾಚರಣೆಗಳನ್ನು ಮುಖ್ಯವಾಗಿ ಡಿಆರ್‌ಜಿ ನಡೆಸುತ್ತದೆ. ನಾನು ಅವರ ಧೈರ್ಯಕ್ಕೆ ನಮಸ್ಕರಿಸುತ್ತೇನೆ. ನಾವು ಆರಂಭದಿಂದಲೂ ಶರಣಾಗುವಂತೆ ಮಾವೋವಾದಿಗಳಿಗೆ ಮನವಿ ಮಾಡುತ್ತಿದ್ದೇವೆ. ಈಗ ಮತ್ತೆ ಅದನ್ನು ಪುನರಾವರ್ತಿಸುವ ಅಗತ್ಯವಿಲ್ಲ” ಎಂದು ಹೇಳಿಕೊಂಡಿದ್ದಾರೆ.
ಛತ್ತೀಸ್‌ಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಇದರ ಹೆಸರಲ್ಲಿ ಅದೆಷ್ಟೋ ಆದಿವಾಸಿಗಳ ಹತ್ಯೆ ನಡೆದಿದೆ ಎಂಬ ಆರೋಪಗಳಿವೆ. ಏಪ್ರಿಲ್ 21ರಂದು ಕಾರ್ಯಾಚರಣೆ ನಡೆಸಲು ಆರಂಭಿಸಲಾಗಿದ್ದು, ಒಟ್ಟು 31 ಮಾವೋವಾದಿಗಳ ಹತ್ಯೆ ಮಾಡಲಾಗಿದೆ. ಈ ಪೈಕಿ 16 ವರ್ಷದ ಬಾಲಕ.
