ಕನ್ನಡ ಭಾಷೆ ಮತ್ತು ಕನ್ನಡಿಗರ ವಿರುದ್ಧ ಉದ್ದಟತನ ಪ್ರದರ್ಶಿಸಿದ್ದ ಬೆಂಗಳೂರು ಹೊರವಲಯದ ಚಂದಾಪುರ ಎಸ್‌ಬಿಐ ಬ್ಯಾಂಕಿನ ಮಹಿಳಾ ಮ್ಯಾನೇಜರ್ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ಮತ್ತು ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಾನು ಕನ್ನಡದಲ್ಲಿ ಮಾತನಾಡಲ್ಲ. ಹಿಂದಿಯಲ್ಲೇ ಮಾತನಾಡುತ್ತೇನೆ. ಇದು ಭಾರತ. ಬರೀ ಕರ್ನಾಟಕ ಮಾತ್ರ ಅಲ್ಲ ಎಂದು ಎಸ್‌ಬಿಐ ಬ್ಯಾಂಕಿನ ಮಹಿಳಾ ಮ್ಯಾನೇಜರ್ ಒಬ್ಬರು, ಕನ್ನಡದಲ್ಲಿ ಮಾತನಾಡಿ ಎಂದ ಗ್ರಾಹಕರೊಬ್ಬರಿಗೆ ಗದರಿಸುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವೀಡಿಯೋ ವೈರಲ್ ಆಗುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ನಾಯಕರು ಮತ್ತು ಕಾರ್ಯಕರ್ತರು, ಇಂದು ಬೆಂಗಳೂರು ಹೊರವಲಯದ ಚಂದಾಪುರ ಎಸ್‌ಬಿಐ ಬ್ಯಾಂಕ್ ಶಾಖೆ ಮತ್ತು ಬೆಂಗಳೂರಿನ ಎಸ್‌ಬಿಐ ಪ್ರಧಾನ ಶಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕನ್ನಡಿಗ ಗ್ರಾಹಕರೊಬ್ಬರು ಕೆಲಸದ ನಿಮಿತ್ತ ಬೆಂಗಳೂರು ಹೊರವಲಯದ ಚಂದಾಪುರ ಎಸ್‌ಬಿಐ ಬ್ಯಾಂಕಿಗೆ ಹೋದಾಗ ಹಿಂದಿಯಲ್ಲಿ ಮಾತನಾಡಿದ ಬ್ಯಾಂಕಿನ ಮಹಿಳಾ ಮ್ಯಾನೇಜರ್ ಬಳಿ ಕನ್ನಡದಲ್ಲಿ ಮಾತನಾಡುವಂತೆ ಹೇಳಿದ್ದಾರೆ. ಕನ್ನಡದಲ್ಲಿ ಮಾತನಾಡಲು ಒಪ್ಪದ ಮಹಿಳಾ ಮ್ಯಾನೇಜರ್ ಗ್ರಾಹಕನಿಗೆ ಹಿಂದಿಯಲ್ಲಿ ಮಾತನಾಡುವಂತೆ ಗದರಿಸಿದ್ದಾರೆ. ಅಲ್ಲದೆ ನಾನು ಕನ್ನಡದಲ್ಲಿ ಮಾತನಾಡಲ್ಲ. ಹಿಂದಿಯಲ್ಲೇ ಮಾತನಾಡುತ್ತೇನೆ. ಇದು ಭಾರತ. ಬರೀ ಕರ್ನಾಟಕ ಮಾತ್ರ ಅಲ್ಲ. ನಾನು ಯಾವತ್ತೂ ಕನ್ನಡ ಮಾತನಾಡಲ್ಲ. ಏನೇ ಆದರೂ ಮಾತನಾಡಲ್ಲ ಎಂದು ಉದ್ದಟತನ ಪ್ರದರ್ಶಿಸಿದ್ದಾರೆ. ಇದು ಹಿಂದಿ ರಾಜ್ಯಗಳ ಜನರು ಕನ್ನಡಿಗರ ತಾಳ್ಮೆ ಪರೀಕ್ಷಿಸುವ ನಡೆಯಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಹಿಂದಿವಾಲಾಗಳಿಂದ ಕನ್ನಡಿಗರ ಸಹನೆಯನ್ನು ಕೆಣಕಿಸುವ ಕೆಲಸ ಮತ್ತೆ ಮತ್ತೆ ನಡೆಯುತ್ತಿದೆ. ಕನ್ನಡ ಮತ್ತು ಕನ್ನಡಿಗರ ವಿರುದ್ಧ ಎಸ್‌ಬಿಐ ಬ್ಯಾಂಕ್ ಮೇನೇಜರ್ ಅವರ ಮಾತು ಕೇಳುವಾಗ ರಕ್ತ ಕುದಿಯುತ್ತಿದೆ. ಕೂಡಲೇ ಅವರು ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು. ಕನ್ನಡ ಗೊತ್ತಿಲ್ಲದಿದ್ದರೆ ಕನ್ನಡ ಕಲಿಯುವ ಕೆಲಸ ಮಾಡಬೇಕು. ಅದು ಬಿಟ್ಟು ಕನ್ನಡಿಗರಿಗೆ ಹಿಂದಿ ಮಾತನಾಡುವಂತೆ ಗದರಿಸುವವರ ವಿರುದ್ಧ ಮೌನವಾಗಿ ಇರಲು ಸಾಧ್ಯವಿಲ್ಲ ಎಂದು ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.
ದೇಶದ ನಾನಾ ರಾಜ್ಯಗಳಿಂದ ಉದ್ಯಮ, ಉದ್ಯೋಗ ಸಹಿತ ನಾನಾ ಕಾರಣಗಳಿಂದ ರಾಜ್ಯಕ್ಕೆ ಬರುವ ಎಲ್ಲಾ ಜನರನ್ನು ಸ್ವಾಗತಿಸುವ ಕನ್ನಡಿಗರು, ಅವರನ್ನು ನಮ್ಮವರಂತೆ ಗೌರವದಿಂದ ಕಾಣುತ್ತಾರೆ. ಇಲ್ಲಿ ಸಮೃದ್ಧ ಜೀವನ ನಡೆಸುವ ಹಿಂದಿ ರಾಜ್ಯಗಳ ಜನರು ಪದೇ ಪದೇ ಕನ್ನಡ ಮತ್ತು ಕನ್ನಡಿಗರ ವಿರುದ್ಧ ಮಾತನಾಡುತ್ತಾರೆ. ಅವರು ಕನ್ನಡ ಕಲಿಯದೆ ಹಿಂದಿಯನ್ನು ಕನ್ನಡಿಗರ ಮೇಲೆ ಹೇರುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕನ್ನಡ ಕಲಿಯಲು ಸಾಧ್ಯವಾಗದಿದ್ದರೆ ಅವರು ಅವರ ಊರಿಗೆ ಮರಳಿ ಹೋಗಬೇಕು ಎಂದು ಪ್ರತಿಭಟನಾ ನಿರತರು ಎಚ್ಚರಿಸಿದರು.

ಬೆಂಗಳೂರು ಎಸ್‌ಬಿಐ ಬ್ಯಾಂಕ್ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಪ್ರತಿಭಟನೆ:
ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದ ಚಂದಾಪುರದ ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕಿ ಕ್ಷಮೆ ಕೇಳಬೇಕು. ಅವರನ್ನು ಕೂಡಲೇ ಇಲ್ಲಿಂದ ವರ್ಗಾವಣೆ ಮಾಡಬೇಕು. ಕರ್ನಾಟಕದ ಎಲ್ಲಾ ಬ್ಯಾಂಕುಗಳಲ್ಲಿ ಸ್ಥಳೀಯರಿಗೆ ನೌಕರಿ ನೀಡಬೇಕು. ಸಿಬ್ಬಂದಿ ಕಡ್ಡಾಯವಾಗಿ ಕನ್ನಡದಲ್ಲಿ ಸೇವೆ ಒದಗಿಸಬೇಕು ಎಂದು ಒತ್ತಾಯಿಸಿ ಕರ್ಣಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಪಕ್ಷದ ಸ್ಥಾಪಕಾಧ್ಯಕ್ಷ ರವಿ ಕೃಷ್ಣಾ ರಡ್ಡಿ ನೇತೃತ್ವದಲ್ಲಿ ಚಂದಾಪುರದ ಎಸ್‌ಬಿಐ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಯಿತು.
ಇದನ್ನು ಓದಿ: ಎಂದಿಗೂ ಕನ್ನಡ ಮಾತಾಡಲ್ಲ, ಹಿಂದಿಯಲ್ಲೇ ಮಾತಾಡ್ತೀನಿ: ಎಸ್‌ಬಿಐ ಮ್ಯಾನೇಜರ್ ವಿಡಿಯೋ ವೈರಲ್, ತೀವ್ರ ಟೀಕೆ
ಬ್ಯಾಂಕ್ ಮ್ಯಾನೇಜರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಎಸ್‌ಬಿಐ ಅಧಿಕಾರಿಗಳು, ಮಹಿಳಾ ಮ್ಯಾನೇಜರ್‌ನನ್ನು ವರ್ಗಾವಣೆ ಮಾಡಿರುವುದು ಇಲ್ಲಿ ಸ್ಮರಿಸಬಹುದು.