ಬೈಕ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾದ ಆರೋಪಿಗೆ ಕಲಬುರಗಿ ಜಿಲ್ಲೆಯ ಅಫಜಲಪುರದ ಜೆಎಂಎಫ್‍ಸಿ ನ್ಯಾಯಾಲಯ 1 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ ₹500 ದಂಡ ವಿಧಿಸಿದೆ.
2020ರಲ್ಲಿ ಬಂದಗಿಸಾಬ್ ತಂದೆ ಮತಾಬ್‌ಸಾಬ್ ಸುತಾರ್ ಎಂಬುವವರು ಚೌಡಾಪುರ-ಕಲಬುರಗಿ ರಸ್ತೆಯ ಗೊಬ್ಬೂರವಾಡಿ ಕ್ರಾಸ್ ಸಮೀಪ ಜಮೀನಿಗೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ವ್ಯಕ್ತಿಯೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದಿದ್ದರು. ಗಂಭೀರವಾಗಿ ಗಾಯಗೊಂಡು ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಈ ಕುರಿತು ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿಗಳಾದ ಅಫಜಲಪುರ ಸಿಪಿಐ ಮಹಾದೇವ ಪಂಚಮುಖಿ, ದೇವಲಗಾಣಗಾಪುರ ಪಿಎಸ್‍ಐ ಭೀಮರತ್ನ, ಮುಖ್ಯಪೇದೆ ಮಹಾಂತಯ್ಯ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿದ ಅಫಜಲಪುರ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ ಅನಿಲ ಅಮಾತೆ ಅವರು ಆರೋಪಿ ಕಡಣಿ ಗ್ರಾಮದ ಬೀರಪ್ಪಾ ತಂದೆ ಚಂದ್ರಕಾಂತ ಎಂಬುವವರಿಗೆ ಒಂದು ತಿಂಗಳ ಸಾದಾ ಕಾರಾಗೃಹವಾಸ ಮತ್ತು ₹500 ದಂಡ ವಿಧಿಸಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಜಯಶ್ರೀ ಪಿ.ಅವರು ವಾದ ಮಂಡಿಸಿದ್ದರು.
ಇದನ್ನೂ ಓದಿ : ಬೀದರ್ | ಬಿಟ್ಟೂಬಿಡದ ಮಳೆ : 325 ಹೆಕ್ಟೇರ್‌ಗೂ ಅಧಿಕ ಬೆಳೆ ಹಾನಿ; ಪರಿಹಾರದ ನಿರೀಕ್ಷೆಯಲ್ಲಿ ರೈತರು