ಬಾನು ಮುಷ್ತಾಕ್‌ ಬರಹಕ್ಕೆ ಇನ್ನಾದರೂ ʼಸಾಹಿತ್ಯಕ ಮನ್ನಣೆʼ ಸಿಗಲಿ

Date:

Advertisements

ಹೋರಾಟಗಾರ್ತಿ, ಪತ್ರಕರ್ತೆ ಹಾಗೂ ವಕೀಲರಾಗಿ ಬಾನು ಅವರು ಕನ್ನಡಿಗರಿಗೆ ಪರಿಚಿತರಾದಷ್ಟು ಲೇಖಕಿಯಾಗಿ ಪರಿಚಿತರಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ. ಅವರು ತಮ್ಮ ವೃತ್ತಿಯ ಕಾರಣ ಕನ್ನಡ ಸಾಹಿತ್ಯದ ಗೋಷ್ಠಿಗಳಲ್ಲಾಗಲಿ, ಸಮ್ಮೇಳನಗಳಲ್ಲಾಗಲಿ ಹೆಚ್ಚು ಭಾಗವಹಿಸದಿರುವುದು ಒಂದು ಕಾರಣವಾಗಿರಬೇಕು. ಬೂಕರ್‌ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಾದರೂ ಅವರ ಬರಹಕ್ಕೆ ಸಿಗಬೇಕಾದ ಸಾಹಿತ್ಯಿಕ ಮನ್ನಣೆ ಸಿಗಲಿ ಎಂಬುದು ನನ್ನ ಆಶಯ

ಬಾಲ್ಯದಲ್ಲಿ ಜಾತಿ ಅಥವಾ ಹೆಣ್ಣು ಎನ್ನುವ ತಾರತಮ್ಯವನ್ನು ತಾನು ಅನುಭವಿಸದೆ ಬೆಳೆದೆ, ಆ ವಾತಾವರಣದಲ್ಲೂ ʼನೀವು ತಿಂಗಳಾದರೂ ಸ್ನಾನನೇ ಮಾಡೋದಿಲ್ಲವಂತೆ… ಅದಕ್ಕೆ ಸೆಂಟ್ ಹೊಡ್ಕೋತೀರಂತೆ… ನಿಮ್ಮಲ್ಲಿ ಹಂಗಂತೆ, ಹಿಂಗಂತೆʼ ಎನ್ನುವ ಪೂರ್ವಗ್ರಹಿಕೆಯ ಪ್ರಶ್ನೆಗಳ ಎದುರಲ್ಲಿ ಆರಂಭದಲ್ಲಿ ತಬ್ಬಿಬ್ಬಾಗುತ್ತಿದ್ದೆ, ಕೋಪಗೊಳ್ಳುತ್ತಿದ್ದೆʼ ಎಂದು ನೆನಪಿಸಿಕೊಳ್ಳುವ ಬಾನು ಅವರು, ಕ್ರಮೇಣ ಯಾರ ಪರವಾಗಿ ತನ್ನಲ್ಲಿ ಉತ್ತರ ಕೇಳಲಾಗುತ್ತಿತ್ತೋ ಅವರನ್ನು ಸೂಕ್ಷ್ಮವಾಗಿ ಗಮನಿಸಲಾರಂಭಿಸಿದೆ. ಈ ಗಮನಿಸುವಿಕೆ ವಿಸ್ತಾರವಾಗುತ್ತಾ ತನ್ನ ಸುತ್ತಮುತ್ತಲಿನ ಜನರ ಸ್ವಭಾವ ವೈಚಿತ್ರ್ಯಗಳನ್ನು, ಘಟನೆಗಳನ್ನು ಅವಲೋಕಿಸುತ್ತಾ ಬಂದು ಬರೆಯತೊಡಗಿದೆ” ಎಂದು ತಮ್ಮ ಮೊದಲ ಸಂಕಲನದಲ್ಲಿ ನೆನಪಿಸಿಕೊಂಡಿದ್ದಾರೆ.

ನಿನ್ನೆ ಬಾನು ಮುಷ್ತಾಕ್ ಅವರ ಕಥಾ ಸಂಕಲನ ಹಾರ್ಟ್‌ ಲ್ಯಾಂಪ್‌ ಪ್ರತಿಷ್ಠಿತ ಬೂಕರ್ ಪ್ರಶಸ್ತಿಗೆ ಭಾಜನವಾಗಿದೆ. ತಾನು ಅನುಭವಿಸದ ಆದರೆ, ತನ್ನವರು ಅನುಭವಿಸಿದ ತಲ್ಲಣಕ್ಕೆ ಬಾನು ಎದುರುಗೊಂಡ ಪರಿ ಅವರನ್ನು ಈ ಪ್ರತಿಷ್ಟಿತ ವೇದಿಕೆಯವರೆಗೆ ತಂದು ನಿಲ್ಲಿಸಿದೆ. ಇಂದು ಇಡೀ ಕನ್ನಡಿಗರಲ್ಲಿ ಸಂಭ್ರಮ, ನವೋಲ್ಲಾಸ ಮತ್ತು ಹೆಮ್ಮೆಯನ್ನು ಮೂಡಿಸಿದೆ. ಬೂಕರ್‌ ಪ್ರಶಸ್ತಿ ಪಡೆದ ಅವರ ʼಹಾರ್ಟ್‌ ಲ್ಯಾಂಪ್‌ʼ ಕಥಾ ಸಂಕಲನದಲ್ಲಿ ಆಯ್ದ 12 ಕತೆಗಳಿವೆ. ಈ ಸಂದರ್ಭದಲ್ಲಿ ಬಾನು ಮುಷ್ತಾಕ್‌ ಮತ್ತು ಅನುವಾದಕಿ ದೀಪಾ ಭಾಸ್ತಿ ಇಬ್ಬರಿಗೂ ಹಾರ್ದಿಕ ಅಭಿನಂದನೆಗಳು. ಈ ಇಬ್ಬರು ಕನ್ನಡತಿಯರು ಜೊತೆಗೂಡಿ ನಡೆಸಿದ ಪ್ರಯತ್ನಕ್ಕೆ ಇಂಥ ಯಶಸ್ಸು ದೊರೆತಿರುವುದು ಸಂಭ್ರಮವನ್ನು ನೂರ್ಮಡಿಗೊಳಿಸಿದೆ.

Advertisements

ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಮುದಾಯದ, ಅದರಲ್ಲೂ ಮಲೆಯಾಳಿ ಭಾಷಿಕರ ಜಗತ್ತು ಕನ್ನಡ ಸಾಹಿತ್ಯಕ್ಕೆ ತೆರೆದುಕೊಂಡಷ್ಟು ಪ್ರಮಾಣದಲ್ಲಿ ಉರ್ದು ಭಾಷಿಕರ ಜಗತ್ತು ತೆರೆದುಕೊಂಡಿಲ್ಲ ಎಂಬುದಂತೂ ಸತ್ಯ. ಈ ಎರಡು ಸಮುದಾಯಗಳು ಕೆಲವು ವಿಷಯಗಳಲ್ಲಿ ಸಮಾನ ಸಮಸ್ಯೆಗಳನ್ನು ಎದುರಿಸುತ್ತವಾದರೂ ಜನರ ನಂಬಿಕೆಗಳು, ಆಚರಣೆಗಳು, ಶ್ರದ್ಧೆಗಳು ಹಾಗೂ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳು, ಜೀವನದ ಪರಿಸರಗಳು ಎರಡೂ ಗುಂಪುಗಳಲ್ಲಿ ಒಂದೇ ಆಗಿಲ್ಲ. ಈ ಹಿನ್ನೆಲೆಯಲ್ಲಿ ಬಾನು ಮುಷ್ತಾಕರ ಬರಹಗಳಿಗೆ ವಿಶೇಷ ಮಹತ್ವ ಒದಗಿಬರುತ್ತದೆ.

banu mishtak

ಇತ್ತೀಚೆಗೆ ಎಪ್ರಿಲ್‌ 30, 2025ರಂದು ಅಭಿರುಚಿ ಪ್ರಕಾಶನ ಪ್ರಕಟಿಸಿದ ʼಹಸೀನಾ ಮತ್ತು ಇತರ ಕಥೆಗಳುʼ ಎನ್ನುವ ಸಮಗ್ರ ಕತೆಗಳ ಸಂಕಲನದ ಬಿಡುಗಡೆಯ ಸಂದರ್ಭದಲ್ಲಿ ಬಾನು ಅವರ ಜೊತೆಗೆ ಒಂದು ಸಂಜೆ ಕಳೆಯುವ ಅವಕಾಶ ಒದಗಿತ್ತು. ಅಂದು ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡು ಕೊನೆಯ ಸುತ್ತಿನ ಸ್ಪರ್ಧೆಯಲ್ಲಿ ಇರುವುದನ್ನು ಅವರು ಪ್ರಸ್ತಾಪಿಸುತ್ತಾ, ತಮ್ಮ ಬರಹದ ಜಗತ್ತಿನ ಕುರಿತು ಅನೇಕ ಒಳನೋಟಗಳನ್ನು ನೀಡಿದರು. ದಮನಿತರ ಬರಹವೇ ಬಂಡಾಯದ ಸೂಚನೆಯಾಗಿ ಕೆಲವರಿಗೆ ಕಂಡರೆ, ಅಂಥ ಬರಹವು ಶೋಷಿತರ ಬಿಡುಗಡೆಯ ಮಾಧ್ಯಮವೂ ಆಗಿರುತ್ತದೆ. ಇದು ಹೆಣ್ಣುಮಕ್ಕಳ ಸಂದರ್ಭದಲ್ಲಿ ಕೂಡ ನಿಜ. ಮಾತು ಮತ್ತು ಬರಹಗಳು ಒದಗಿಸುವ ಎಚ್ಚರ ಮತ್ತು ಸೋದರಿತ್ವದ ಗುಣ ನೀಡುವ ಬಾಂಧವ್ಯಗಳು ಮಹಿಳಾ ಜಗತ್ತನ್ನು ಆಮೂಲಾಗ್ರವಾಗಿ ಪರಿವರ್ತಿಸುವ, ಬಿಡುಗಡೆಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬ ನಿಲುವು ಬಾನು ಅವರ ದೃಢವಾದ ನಂಬಿಕೆಯಾದಂತಿದೆ.

ಸುರಕ್ಷಿತ ವಾತಾವರಣದಲ್ಲಿ ಬೆಳೆದಿದ್ದರೂ ಅವರ ಬರವಣಿಗೆಯ ಹಾದಿ ಹೂವಿನ ಹಾಸಿಗೆ ಆಗಿರಲಿಲ್ಲ. ಅನೇಕ ಬಾರಿ ಅವರು ತಮ್ಮ ಸಮುದಾಯದ ಮೂಲಭೂತವಾದಿಗಳಿಂದ ವಿರೋಧವನ್ನು ಎದುರಿಸುತ್ತಾ ಬಂದದ್ದು ಸಹಜ.

ಬಾನು ಅವರ ಕಥೆಗಳಲ್ಲಿ ವೈವಿಧ್ಯಮಯ ಸ್ತ್ರೀಪಾತ್ರಗಳು ಕಂಡುಬರುತ್ತವೆ. ಶಿಕ್ಷಿತ-ಅಶಿಕ್ಷಿತ, ಶ್ರಮಿಕ ಮತ್ತು ಅನುಕೂಲವಂತ, ಗ್ರಾಮೀಣ ಮತ್ತು ನಗರ ಹಿನ್ನೆಲೆಯ, ಎಲ್ಲ ವಯೋಮಾನದ, ಎಲ್ಲ ಬದುಕಿನ ಕ್ರಮಗಳ ಮಹಿಳಾ ಜಗತ್ತು ಇವರ ಕಥೆಗಳಲ್ಲಿ ಮೂಡಿಬಂದಿವೆ. ತಮ್ಮ ಹಕ್ಕುಗಳ ಕುರಿತು ಅರಿವೇ ಇಲ್ಲದ ಹೆಣ್ಣುಮಕ್ಕಳು ಪುರುಷ ಪ್ರಧಾನ ಸಮಾಜದಲ್ಲಿ ಎದುರಿಸುವ ಸಂಕಷ್ಟಗಳು ಮತ್ತು ಅವರ ದೈನ್ಯತೆಯ ಬದುಕಿನ ಅನಾವರಣ, ಧಾರ್ಮಿಕ ಗ್ರಂಥಗಳು ಮಹಿಳೆಯರಿಗೆ ನೀಡಿರುವ ಹಕ್ಕುಗಳನ್ನು ಬಡ, ಅಶಿಕ್ಷಿತ, ಮಹಿಳೆಯರಿಗೆ ಸೋದರಿತ್ವದ ನೆಲೆಯಲ್ಲಿ ಓದು ಬಲ್ಲ ಹೆಣ್ಣುಮಕ್ಕಳು ದಾಟಿಸುತ್ತಾರೆ.

ಬಾಲ್ಯವಿವಾಹ, ಅತಿ ಸಂತಾನ, ಬಹುಪತ್ನಿತ್ವ, ಗಂಡಾಳ್ವಿಕೆ, ವೈಧವ್ಯ, ಮಹಿಳೆಯರ ಆರ್ಥಿಕ ಅವಲಂಬನೆ, ದ್ವನಿ ಇಲ್ಲದ ಸ್ಥಿತಿ ಇತ್ಯಾದಿ ಸಮಸ್ಯೆಗಳನ್ನು ಚರ್ಚಿಸುವ ಬಾನು ಅವರ ಕಥೆಗಳು ವಿಶಾಲ ಕ್ಯಾನ್ವಾಸ್ ಗಳನ್ನು ಹೊಂದಿವೆ. ಎಂದರೆ ಮುಸ್ಲಿಂ ಪಾತ್ರಗಳ ಮೂಲಕ ಇವು ಕಥಿಸಿದರೂ ಸಮಸ್ಯೆಯು ಧರ್ಮ, ಜಾತಿ, ವರ್ಗ, ಪ್ರದೇಶ, ಭಾಷೆಗಳೆಂಬ ಗಡಿ ದಾಟಿ ಸಾರ್ವತ್ರಿಕ ಆಯಾಮಗಳನ್ನು ಹೊಂದಿರುವುದು ಈ ಕಥೆಗಳ ಅನನ್ಯತೆ ಆಗಿದೆ. 

ಹೆಣ್ಣಿನ ಅಧೀನತೆಯ ಸ್ಥಿತಿಯನ್ನು ಪ್ರಜ್ಞಾಪೂರಕವಾಗಿ ಪೋಷಿಸುವ ಕುಟುಂಬ ಮತ್ತು ಸಮಾಜದ ಮೌಲ್ಯಗಳು ಎಲ್ಲಕ್ಕೂ ಅವಳನ್ನೇ ಹೊಣೆಯಾಗಿಸಿ, ಕೈ ತೊಳೆದುಕೊಳ್ಳುವಲ್ಲಿನ ಜಾಣ ಕಿವುಡು, ಕುರುಡುತನದ ವಿಕ್ಷಿಪ್ತ ಮುಖಗಳು ಇವರ ಕಥೆಗಳಲ್ಲಿ ನಿರೂಪಿತವಾಗಿದೆ.

ಇವರ ಕಥೆಗಳಲ್ಲಿ ಪುರುಷರ ಚಿಂತನ ಕ್ರಮಗಳಿಗೆ ಮುಖಾಮುಖಿಯಾಗಿ ಸ್ತ್ರೀಯರ ಚಿಂತನಾ ಕ್ರಮಗಳನ್ನು ಮಂಡಿಸುವ ಕ್ರಮ ವಿಶಿಷ್ಟವಾಗಿದೆ. ಪುರುಷರ ಲೋಕದೃಷ್ಟಿಯು ಅಧಿಕಾರ, ಸ್ವಾರ್ಥ ಮತ್ತು ಅಹಂಕಾರದಿಂದ ಕೂಡಿದ್ದರೆ, ಮಹಿಳಾ ಲೋಕದೃಷ್ಟಿಯು ಸದಾ ಕಾಯುವ, ನೆರವಾಗುವ ಮತ್ತು ಎಲ್ಲರನ್ನು ಒಳಗೊಳ್ಳುವ ರಾಜಕಾರಣವನ್ನು ಹೇಗೆ ಅದು ಸಹಜವಾಗಿ ಪಡೆದಿದೆ ಎನ್ನುವ ವಿವರಗಳನ್ನು ಈ ಕಥೆಗಳು ದಾಟಿಸುತ್ತವೆ. ಹೀಗಾಗಿ ಸ್ತ್ರೀಪಾತ್ರಗಳು ತಮ್ಮ ಹೃದಯ ಶ್ರೀಮಂತಿಕೆಯಿಂದ ಗಮನ ಸೆಳೆಯುತ್ತವೆ. ಸೋದರಿತ್ವದ ಬಾಂಧವ್ಯದ ಬಳ್ಳಿಯನ್ನು ಹಬ್ಬಿಸುವ ಕ್ರಮ ತುಂಬಾ ಸಹಜ ಎನ್ನುವ ರೀತಿಯಲ್ಲಿ ಕತೆಗಳಲ್ಲಿ ಮೂಡಿ ಬಂದಿದೆ. 

ಇದನ್ನೂ ಓದಿ ಭಾರತದ ʼಬಾನುʼ ಬೆಳಗಿತು, ಕನ್ನಡದ ಹೃದಯ ʼದೀಪʼ ಬೆಳಗಿತು! ; ಲೇಖಕಿಯರ ಸಂಭ್ರಮ

ಪುರುಷ ಪ್ರಧಾನ ಚಿಂತನೆ ಮತ್ತು ಆ ಜೀವನಕ್ರಮವು ಕೇವಲ ಪುರುಷರನ್ನು ಮಾತ್ರವಲ್ಲ, ಶತಮಾನಗಳಿಂದ ಅದನ್ನೇ ಅರೆದು ಕುಡಿದ ಸ್ತ್ರೀಯರನ್ನೂ ಹೇಗೆ ಜೀವ ವಿರೋಧೀ ಆಗಿಸಬಲ್ಲದು ಎಂಬುದನ್ನು ಇವರ ಕಥೆಗಳು ತುಂಬ ಪರಿಣಾಮಕಾರಿಯಾಗಿ ಚಿತ್ರಿಸಿವೆ. ಇದರ ಜೊತೆಗೆ ಮಹಿಳೆಯರ ಆರ್ಥಿಕ ಅವಲಂಬನೆಯು, ಗಂಡಿನ ಕೇಂದ್ರದಲ್ಲಿ ಉಳಿಯಲು ಹೆಣ್ಣನ್ನು ಇನ್ನೊಂದು ಹೆಣ್ಣಿನೊಂದಿಗೆ ಅನಾರೋಗ್ಯಕರ ಸ್ಪರ್ಧೆಗೆ ನಿಲ್ಲಿಸಿಬಿಡುವ ವ್ಯಂಗ್ಯವನ್ನು ಮತ್ತು ಆ ಮೂಲಕ ವ್ಯಕ್ತಿತ್ವ ಹನನವನ್ನು ಮಾಡುವುದನ್ನು ಕಥೆಗಳು ಚಿತ್ರಿಸಿವೆ. 

ಶಿಕ್ಷಣ, ಉದ್ಯೋಗ, ʼಸ್ವʼದ ಅರಿವು- ಇವು ಹೆಣ್ಣಿನ ಬದುಕಿನಲ್ಲಿ ಅವಳಿಗೆ ಗೆಲ್ಲಲು ಎಷ್ಟರಮಟ್ಟಿಗೆ ನೆರವಾಗ ಬಲ್ಲವು? ಎಂಬ ಗಂಭೀರ ಪ್ರಶ್ನೆಗಳನ್ನು ಇವರ ಸಂಕಲನದ ಕಥೆಗಳು ವಿಶ್ಲೇಷಿಸುವದು ವಿಶಿಷ್ಟವಾಗಿದೆ. 

ಇದನ್ನೂ ಓದಿ ಈ ದಿನ ಸಂಪಾದಕೀಯ | ಬಾನು-ಭಾಸ್ತಿ ಜೋಡಿ- ಕನ್ನಡಕ್ಕೆ ಬೂಕರ್ ಗೆದ್ದ ಮೋಡಿ

ಹೋರಾಟಗಾರ್ತಿ, ಪತ್ರಕರ್ತೆ ಹಾಗೂ ವಕೀಲರಾಗಿ ಬಾನು ಅವರು ಕನ್ನಡಿಗರಿಗೆ ಪರಿಚಿತರಾದಷ್ಟು ಲೇಖಕಿಯಾಗಿ ಪರಿಚಿತರಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ. ಅವರು ತಮ್ಮ ವೃತ್ತಿಯ ಕಾರಣ ಕನ್ನಡ ಸಾಹಿತ್ಯದ ಗೊಷ್ಠಿಗಳಲ್ಲಾಗಲಿ, ಸಮ್ಮೇಳನಗಳಲ್ಲಾಗಲಿ ಹೆಚ್ಚು ಭಾಗವಹಿಸದಿರುವುದು ಒಂದು ಕಾರಣವಾಗಿರಬೇಕು. ಆದರೆ ಅದೇ ವೇಳೆಗೆ ಬಹುತೇಕ ಎಲ್ಲ ವಿಶ್ವವಿದ್ಯಾನಿಲಯಗಳ ಸಂಶೋಧನಾ ವಿದ್ಯಾರ್ಥಿಗಳ ಎಂಫಿಲ್‌, ಪಿಎಚ್.ಡಿ ಪದವಿಗಾಗಿ ನಡೆಸುವ ಸಂಶೋಧನೆಗಾಗಿ ಅವರ ಬರಹಗಳು ಅಧ್ಯಯನಕ್ಕೆ ಒಳಗಾದಷ್ಟು ವಿಮರ್ಶಕರ ಗಮನವನ್ನು ಸೆಳೆದಿಲ್ಲ ಎಂಬುದು ಸತ್ಯ. ಅಭಿರುಚಿ ಪ್ರಕಾಶನವು ಅವರ ಸಮಗ್ರ ಕತೆಗಳ ಸಂಕಲನವನ್ನು ಪ್ರಕಟಿಸಿದ್ದು, ಬೂಕರ್‌ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಾದರೂ ಇನ್ನಾದರೂ ಅವರ ಬರಹಕ್ಕೆ ಸಿಗಬೇಕಾದ ಸಾಹಿತ್ಯಿಕ ಮನ್ನಣೆ ಸಿಕ್ಕೀತು ಎಂದು ನಂಬುವೆ.

ಸಬಿಹಾ ಭೂಮಿಗೌಡ
ಡಾ ಸಬಿಹಾ ಭೂಮಿಗೌಡ
+ posts

ಹಿರಿಯ ಲೇಖಕಿ. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ. ಮೈಸೂರಿನ ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಸಬಿಹಾ ಭೂಮಿಗೌಡ
ಡಾ ಸಬಿಹಾ ಭೂಮಿಗೌಡ
ಹಿರಿಯ ಲೇಖಕಿ. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ. ಮೈಸೂರಿನ ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷರು

2 COMMENTS

  1. ಚಿಕ್ಕ ಲೇಖನವಾದರೂ , ಬಾನು ಮುಷ್ತಾಕ್ ಅವರನ್ನು, ಅವರ ಕತೆಗಳ ಸೂಕ್ಷ್ಮ ಹೊಳಹನ್ನು ಹಿಡಿದಿಡಲಾಗಿದೆ.

  2. ಎಮ್.ಜಾನಕಿ.ಬ್ರಹ್ಮಾವರ.
    ಲೇಖನ ಆತ್ಮೀಯವಾಗಿದೆ. ಕೃತಿವಿಮರ್ಶೆಯು ಅರಿವಿನ ದೀಪದಂತಿದೆ. ಬಾನುಮುಸ್ತಾಕ್ ರವರ ಸಾಹಿತ್ಯ ಕುರಿತ ನನ್ನ ಅನಿಸಿಕೆಗಳಿಗೂ ಅಭಿವ್ಯಕ್ತಿ ನೀಡಿದಂತಿದೆ..ಧನ್ಯವಾದಗಳು .
    ಬೂಕರ್ ಸಾಹಿತ್ಯ ಪ್ರಶಸ್ತಿ ವಿಜೇತ ಸೋದರಿಗೆ ಹಾರ್ದಿಕ ಅಭಿನಂದನೆಗಳು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X