ಹೊಸದಾಗಿ ನಿರ್ಮಾಣವಾಗಿರುವ ಮಂಗಳೂರು ತಲಪಾಡಿ – ಕೇರಳ ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ವಾಹನಗಳು ಹಾಗೂ ಜೀವ ಹಾನಿ ಸಂಭವಿಸುತ್ತಿರುವುದು ಆಗಾಗ ವರದಿಯಾಗುತ್ತಿವೆ.
ಕೇರಳ ರಾಜ್ಯದ ಗಡಿಯಾದ ಮಂಗಳೂರಿನ ತಲಪಾಡಿಯಿಂದ – ಕಾಸರಗೋಡು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ಅನ್ನು ಆರು ಪಥಗಳ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ಹೆದ್ದಾರಿಯುದ್ದಕ್ಕೂ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆಯನ್ನು ನಿರ್ಮಿಸಲಾಗಿದೆ. ರಸ್ತೆ ನಿರ್ಮಾಣದ ಕಾಮಗಾರಿ ಶೇ. 80ರಷ್ಟು ಮುಕ್ತಾಯವಾಗಿದ್ದು ಉಳಿದ ಕಾಮಗಾರಿ ಪ್ರಗತಿಯಲ್ಲಿದೆ.
ಹೆದ್ದಾರಿಯ ಕುಂಬ್ಳೆ ಶಿರಿಯಾ – ಉಪ್ಪಳ ಗೇಟ್ – ಮಂಜೇಶ್ವರ ಪೆಟ್ರೋಲ್ ಬಂಕ್‌ವರೆಗೆ ಅಪಘಾತ ವಲಯಗಳಾಗಿ ಮಾರ್ಪಟ್ಟಿದೆ. ಪದೇ ಪದೇ ಅಪಘಾತಗಳು ಸಂಭವಿಸಿ ಹಲವು ವಾಹನಗಳು ಜಖಂಗೊಂಡಿವೆ. ಅಲ್ಲದೆ ಜೀವ ಹಾನಿ, ಹಲವರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗುವ ಘಟನೆಗಳು ಹೆಚ್ಚುತ್ತಿವೆ. ಹಿಂದೆ ಈ ರಸ್ತೆ ದ್ವಿಪಥವಾಗಿತ್ತು. ವಾಹನ ಸಂಚಾರ ದಟ್ಟಣೆಯಿಂದ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದವು. ಇದೀಗ ರಸ್ತೆ ಷಟ್ಪಥವಾಗಿ ಅಭಿವೃದ್ಧಿಗೊಂಡ ಬಳಿಕವೂ ಅಪಘಾತಗಳು ಮರುಕಳಿಸುತ್ತಲೇ ಇವೆ.
ಸುಸಜ್ಜಿತವಾಗಿ ನಿರ್ಮಾಣವಾದ ಹೆದ್ದಾರಿಯಲ್ಲಿ ಮಿತಿ ಮೀರಿದ ವೇಗದ ಚಾಲನೆಯೇ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಜಾಗರೂಕತೆಯಿಂದ, ಹೆದ್ದಾರಿಯಲ್ಲಿ ಸೂಚಿಸಿದಷ್ಟೇ ವೇಗದಿಂದ ಚಾಲನೆ ಮಾಡಿದರೆ ಅಪಘಾತಗಳನ್ನು ತಪ್ಪಿಸಬಹುದು. ಹೆಚ್ಚಿನ ಅಪಘಾತಗಳಿಗೆ ಚಾಲಕರ ಅತಿಯಾದ ವೇಗ, ಅಜಾಗರೂಕತೆಯೇ ಕಾರಣ ಎಂದು ಮಂಜೇಶ್ವರ, ಉಪ್ಪಳ, ಕುಂಬ್ಳೆ ಪರಿಸರದ ನಾಗರಿಕರ ಆರೋಪವಾಗಿದೆ.
ಕುಂಬ್ಳೆ ಉಪ್ಪಳ ಗೇಟ್ ಬಳಿ ಮೇ 20ರಂದು ಸಂಜೆ ಸಂಭವಿಸಿದ ಸರಣಿ ಅಪಘಾತದಲ್ಲಿ ಆಂಬುಲೆನ್ಸ್ ನಿಂದ ಹೊರಗೆ ಎಸೆಯಲ್ಪಟ್ಟು ಕಣ್ಣೂರು ವಾರಂ ನಿವಾಸಿ ಶಾಹಿನಾ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಶಾಹಿನಾ ಅವರ ಪುತ್ರಿ ರಿಯಾ ಫಾತಿಮಾ, ಸಹೋದರಿ ಶಜಿನಾ, ಆಸೀಫ್, ಚಾಲಕ ಅಕ್ರಂ ಗಾಯಗೊಂಡಿದ್ದರು. ಉಪ್ಪಳ ಗೇಟಿನಲ್ಲಿ ಕಾರೊಂದರ ಹಿಂಭಾಗಕ್ಕೆ ಮತ್ತೊಂದು ಕಾರು ಢಿಕ್ಕಿ ಹೊಡೆದಿದೆ. ಅದರ ಹಿಂದೆ ಸಂಚರಿಸುತ್ತಿದ್ದ ಆಂಬುಲೆನ್ಸ್ ಕೂಡಾ ಕಾರಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಈ ಅವಘಡ ಸಂಭವಿಸಿದೆ.

“ರಾಷ್ಟ್ರೀಯ ಹೆದ್ದಾರಿಗೆ ಹೊಸದಾಗಿ ಡಾಂಬರು ಹಾಕಿರುವುದರಿಂದ ಮಳೆ ನೀರು ಬಿದ್ದಾಗ ರಸ್ತೆಯಲ್ಲಿ ಆಯಿಲ್ ಅಂಶ ಕಂಡುಬರುತ್ತಿದೆ. ಜೋರು ಮಳೆ ಬಂದಾಗ ರಸ್ತೆ ಜಾರುವ ಅಪಾಯವೂ ಹೆಚ್ಚಿದೆ. ಮಳೆ ಸುರಿಯುವ ಸಂದರ್ಭದಲ್ಲಿ ವಾಹನಗಳ ಸವಾರರು ಇನ್ನಷ್ಟು ಜಾಗೂರುಕತೆಯಿಂದ ಸಂಚರಿಸಬೇಕು. ವಾಹನ ಸವಾರರು ನಿಗದಿತ ವೇಗ ಮತ್ತು ವಾಹನಗಳ ನಡುವೆ ಹೆಚ್ಚಿನ ಅಂತರ ಕಾಯ್ದುಕೊಳ್ಳಬೇಕು. ಮಳೆ ಸುರಿಯುತ್ತಿರುವ ಸಮಯದಲ್ಲೇ ಹೆಚ್ಚಿನ ಅಪಘಾತಗಳು ಕಂಡು ಬರುತ್ತಿದೆ” ಎಂದು ಉಪ್ಪಳ ನಿವಾಸಿ ಫಾಝಿಲ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಹೆದ್ದಾರಿ ಕಾಮಗಾರಿ ಸಂರ್ಪೂಣಗೊಂಡಿಲ್ಲ. ಇನ್ನೂ ಶೇ. 20ರಷ್ಟು ಕಾಮಗಾರಿ ಬಾಕಿ ಇದೆ. ಸರ್ವೀಸ್ ರಸ್ತೆಗೆ ಇರುವ ತಿರುವುಗಳ ಬಳಿ ಸೂಚನಾ ಫಲಕಗಳನ್ನು ಅಳವಡಿಸುವ ಕೆಲಸಗಳು ಕೂಡಾ ಬಾಕಿ ಇದೆ. ಹೆದ್ದಾರಿ ಅಭಿವೃದ್ಧಿಗೊಂಡ ಹಿನ್ನೆಲೆಯಲ್ಲಿ ಹೆದ್ದಾರಿ ಹಾದು ಹೋದ ಊರಿನ ಗುರುತು ಸಿಗುವುದು ಕಷ್ಟಕರವಾಗಿದೆ. ವೇಗವಾಗಿ ಬರುವ ವಾಹನಗಳ ಸವಾರರು ತಮ್ಮ ಊರಿನ ಸರ್ವೀಸ್ ರಸ್ತೆಗೆ ತಿರುವು ಪಡೆಯಲು ಏಕಾಏಕಿ ಬ್ರೇಕ್ ಹಾಕುವುದರಿಂದಲೂ ಅಪಘಾತಗಳು ಸಂಭವಿಸುತ್ತಿದೆ ಎಂದು ಅಪಘಾತಗಳ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
“ಮಂಗಳೂರು, ಉಡುಪಿ ಸಹಿತ ಕರ್ನಾಟಕ ಭಾಗದಿಂದ ಅಪರೂಪಕ್ಕೆ ಕೇರಳಕ್ಕೆ ಬರುವ ವಾಹನಗಳ ಸವಾರರು ಅತೀ ಜಾಗೂರುಕತೆಯಿಂದ ವಾಹನ ಚಾಲನೆ ಮಾಡಬೇಕು. ಹೆಚ್ಚಿನ ತಿರುವು, ಹೆದ್ದಾರಿಯ ಪ್ರವೇಶ ದ್ವಾರ, ನಿರ್ಗಮನ ದ್ವಾರಗಳ ಅರಿವು ಅವರಿಗೆ ಇಲ್ಲದಿರುವುದರಿಂದ ಅಪಘಾತಗಳು ಸಂಭವಿಸುವ ಅಪಾಯ ಹೆಚ್ಚಿರುತ್ತದೆ. ಯಾವುದೇ ಕಾರಣಕ್ಕೂ ಅವಸರದ ಚಾಲನೆ ಮಾಡಬಾರದು. ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ನಿಧಾನವಾಗಿ ಸಂಚರಿಸಬೇಕು” ಎಂದು ಮಂಜೇಶ್ವರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅನೂಬ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ ಬಾನು ಮುಷ್ತಾಕ್ ಬರಹಕ್ಕೆ ಇನ್ನಾದರೂ ʼಸಾಹಿತ್ಯಕ ಮನ್ನಣೆʼ ಸಿಗಲಿ
ರಸ್ತೆ ಕಾಮಗಾರಿ ಸಂಪೂರ್ಣಗೊಳ್ಳದ ಕಾರಣ ಕೆಲವು ಭಾಗದಲ್ಲಿ ಏಕಮುಖ ಸಂಚಾರ ಮಾರ್ಗದಲ್ಲಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹೀಗಾಗಿಯೂ ಕೆಲವು ಅಪಘಾತಗಳು ಸಂಭವಿಸಿವೆ. ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ ಅಪಘಾತ ಮುಕ್ತವಾಗಲಿದೆ. ಕಾಮಗಾರಿ ಮುಗಿಯುವ ವರೆಗೆ ರಸ್ತೆಯಲ್ಲಿ ಅಳವಡಿಸಿರುವ ಶೈನ್ ಬೋರ್ಡ್ ಗಳು, ಸೂಚನಾ ಫಲಕಗಳನ್ನು ಅನುಸರಿಸುತ್ತಾ ಸಂಚರಿಸಬೇಕು. ಹೈ ಸ್ಪೀಡ್ ಪಥ ಆಗಿರುವುದರಿಂದ ವಾಹನ ಸವಾರರು ಮೊಬೈಲ್ ಫೋನ್‌ನಲ್ಲಿ ಹಾಗೂ ವಾಹನದಲ್ಲಿರುವ ಇತರರ ಜೊತೆ ಮಾತನಾಡಬಾರದು. ಇದರಿಂದ ಗಮನ ಬೇರೆಡೆಗೆ ತಿರುಗಿ ಅಪಘಾತಗಳು ಸಂಭವಿಸುತ್ತಿವೆ. ಎಲ್ಲಾ ಸವಾರರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿದಾಗ ಅಪಘಾತಗಳನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದ್ದಾರೆ.