- ಹೋರಾಟ ನಿರತ ಸಹ ಪ್ರಾಧ್ಯಾಪಕ ಆಕಾಂಕ್ಷಿಗಳ ಭೇಟಿ ಮಾಡಿದ ಸಚಿವರು
- ‘ಎರಡು ವರ್ಷ ಕಾದಿದ್ದೀರಿ, ಕೆಲವೇ ದಿನಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ’
ಎರಡು ವರ್ಷಗಳ ಹಿಂದೆ 2021ರಲ್ಲಿ ನೇಮಕಗೊಂಡು ಹುದ್ದೆ ನಿರೀಕ್ಷೆಯಲ್ಲಿರುವ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಕುರಿತಂತೆ ನ್ಯಾಯಾಲಯದ ನಾಳಿನ ತೀರ್ಪು ನೋಡಿಕೊಂಡು ರಾಜ್ಯ ಸರ್ಕಾರ ಸೂಕ್ತ ತೀರ್ಮಾನಕ್ಕೆ ಬರಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ ಸಿ ಸುಧಾಕರ್ ಹೇಳಿದರು.
ಸ್ವತಂತ್ರ ಉದ್ಯಾನವನದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿರುವ 2021ರ ಸಹ ಪ್ರಾಧ್ಯಾಪಕರ ನೇಮಕಾತಿ ನಿರೀಕ್ಷೆಯಲ್ಲಿರುವ ಹೋರಾಟ ನಿರತರನ್ನು ಭೇಟಿ ನೀಡಿದ ಸಚಿವರು, “ರಾಜ್ಯ ಸರ್ಕಾರ ನಿಮ್ಮ ನ್ಯಾಯಯುತ ಬೇಡಿಕೆ ಈಡೇರಿಸಲು ಮುಕ್ತವಾಗಿದೆ” ಎಂದರು.
“ಪರೀಕ್ಷೆ ಫಲಿತಾಂಶದ ನಂತರ ಉಂಟಾಗಿರುವ ಪ್ರಶ್ನೆ ಪತ್ರಿಕೆ ಬಯಲು ಪ್ರಕರಣ ಒಂದು ವಿಷಯಕ್ಕೆ ಮಾತ್ರ ಸೀಮಿತವಾಗಿದೆ. ಈಗಾಗಲೇ ಈ ಬಗ್ಗೆ ತಪ್ಪಿತಸ್ಥರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಿ.ಸಿ.ಬಿ ಪೊಲೀಸರು ಈಗಾಗಲೇ ಚಾರ್ಚ್‍ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆದರೆ, ತನಿಖೆ ಮುಗಿದಿದೆಯೇ, ಇಲ್ಲವೋ ಎಂಬುದರ ಬಗ್ಗೆ ಅಂತಿಮ ವರದಿ ನೀಡಿಲ್ಲ. ಹಾಗಾಗಿ ವಿಳಂಬವಾಗಿದೆ. ಈ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ” ಎಂದರು.
“ಮತ್ತೊಂದು ಕಲ್ಯಾಣ ಕರ್ನಾಟಕದ 371ಜೆ ಸಂಬಂಧಿಸಿದಂತೆ ಹಿಂದಿನ ಸರ್ಕಾರ ಪರೀಕ್ಷೆ ಸಮಯದಲ್ಲಿ ಒಂದು ಮಾರ್ಗದರ್ಶನ ನೀಡಿ, ಆನಂತರ ಮತ್ತೊಂದು ಆದೇಶವನ್ನು ಹೊರಡಿಸಿದ್ದು ಕೂಡ ಈಗ ಗೊಂದಲಕ್ಕೆ ಕಾರಣವಾಗಿದೆ ಎಂದು ವಿವರಿಸಿದರು. ಎರಡು ವರ್ಷ ಕಾದಿದ್ದೀರಿ. ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಸಮಸ್ಯೆ ಪರಿಹಾರವಾಗಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯದಲ್ಲಿ ಮತ್ತೆ ಶುರುವಾಯಿತು ಹೆಣ ರಾಜಕಾರಣ
“ಸಿ.ಸಿ.ಬಿ ವರದಿ ಹಾಗೂ 371ಜೆ ಪ್ರಕರಣಗಳು ಮುಖ್ಯವಾಗಿವೆ. ಈ ಹಿನ್ನೆಲೆಯಲ್ಲಿ ನಾಳೆ ನ್ಯಾಯಾಲಯ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಸರ್ಕಾರ ನಿರೀಕ್ಷಿಸುತ್ತಿದ್ದು, ತೀರ್ಪಿನ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ನೇಮಕಾತಿಗೊಂಡಿರುವ 1242 ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಸರ್ಕಾರ ನ್ಯಾಯ ದೊರಕಿಸಿಕೊಡಲು ಬದ್ಧವಾಗಿದೆ” ಎಂದು ಸಚಿವರು ಭರವಸೆ ನೀಡಿದರು.
“ಅತ್ಯಂತ ಕಠಿಣ ಪರೀಕ್ಷೆಯನ್ನು ಎದುರಿಸಿ ಆಯ್ಕೆಯಾಗಿರುವ ನಿಮ್ಮೆಲ್ಲರ ನೋವಿಗೆ, ಆತಂಕಕ್ಕೆ ನನ್ನ ಸಹಮತವಿದೆ. ಆದರೆ, ವ್ಯವಸ್ಥೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅಷ್ಟೇ ಮುಖ್ಯ. ದುಡುಕಿನ ನಿರ್ಧಾರ ಕೈಗೊಂಡರೆ ಮತ್ತೆ ನಿಮಗೆ ತೊಂದರೆ ಆಗಬಾರದೆಂಬ ನಿಲುವಿನಿಂದ ಸಿ.ಸಿ.ಬಿ ಅಂತಿಮ ವರದಿ ಹಾಗೂ ನ್ಯಾಯಾಲಯದ ತೀರ್ಪನ್ನು ಸರ್ಕಾರ ನಿರೀಕ್ಷಿಸುತ್ತಿದೆ. ಹಾಗಾಗಿ ಮುಷ್ಕರಕ್ಕಾಗಿ ನೂರಾರು ಮೈಲಿ ದೂರದ ಊರುಗಳಿಂದ ಬಂದಿರುವ ನೀವುಗಳು ಮುಷ್ಕರ ಕೈಬಿಟ್ಟು ನಮ್ಮೊಡನೆ ಸಹಕರಿಸಿ” ಎಂದು ವಿನಂತಿಸಿದರು.