ದಲಿತರಿಗಾಗಿ ಮೀಸಲಿಟ್ಟ ‘ಶೋಷಿತ ವರ್ಗ (ಡಿಸಿ) ಮನ್ನಾ ಭೂಮಿ’ಯಲ್ಲಿ ವಿಶ್ವನಾಥ ಪೂಜಾರಿ ಎಂಬಾತ ಅಕ್ರಮವಾಗಿ ನಿರ್ಮಿಸುತ್ತಿರುವ ಅಂಗಡಿ ಮಳಿಗೆಯನ್ನು ತೆರವುಗೊಳಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆಗ್ರಹಿಸಿದೆ.
ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಪಡುಕುಡೂರು ಗ್ರಾಮದಲ್ಲಿ ಸರ್ವೆ ನಂ.74/2ರಲ್ಲಿರುವ ಡಿಸಿ ಮನ್ನಾ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದೆ ಎಂದು ದಸಂಸ ಆರೋಪಿಸಿದೆ.
“ಅಕ್ರಮ ಕಟ್ಟಡದ ವಿರುದ್ಧ ದಸಂಸ ದೂರು ದಾಖಲಿಸಿದ ಪರಿಣಾಮ ಕಟ್ಟಡ ತೆರವುಗೊಳಿಸುವಂತೆ ತಹಶೀಲ್ದಾರರು ಮಾರ್ಚ್ 2ರಂದು ಆದೇಶ ಹೊರಡಿಸಿದ್ದರು. ಆದರೆ, ಈವರೆಗೂ ಆಕ್ರಮ ಕಟ್ಟಡವನ್ನು ತೆರವುಗೊಳಿಸಿಲ್ಲ” ಎಂದು ಸಂಘಟನೆಯ ಜಿಲ್ಲಾ ಪ್ರಾಧಾನ ಸಂಚಾಲಕ ಸುಂದರ ಮಾಸ್ತರ್ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಾಹುಲ್ ಗಾಂಧಿ ಅನರ್ಹತೆ ಹಿಂದೆ ಕೇಂದ್ರದ ಕೈವಾಡವಿದೆ: ಕಾಂಗ್ರೆಸ್ ಮುಖಂಡ
“ಅಕ್ರಮ ಕಟ್ಟಡವನ್ನು ಕೂಡಲೇ ತೆರವುಗೊಳಿಸದಿದ್ದಲ್ಲಿ ಹೆಬ್ರಿ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು” ಎಂದು ಅವರು ತಿಳಿಸಿದ್ದಾರೆ.
ಸಂಘಟನೆಯ ಜಿಲ್ಲಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ಮಂಜುನಾಥ್ ಬಾಳ್ಕುದ್ರು, ಶ್ಯಾಮಸುಂದರ್ ತೆಕ್ಕಟ್ಟೆ, ಅಣ್ಣಪ್ಪ ನಕ್ರೆ, ಶ್ರೀಧರ ಕುಂಜಿಬೆಟ್ಟು, ಹೆಬ್ರಿ ತಾಲೂಕು ಸಂಚಾಲಕ ದೇವು ಹೆಬ್ರಿ, ಕಾರ್ಕಳ ತಾಲೂಕು ಸಂಚಾಲಕ ರಾಘವ ಕುಕುಜೆ ಇದ್ದರು.
ಉಡುಪಿ ಮೀಡಿಯಾ ವಾಲಂಟಿಯರ್ ಶಾಮರಾಜ್ ಬಿರ್ತಿ ಮಾಹಿತಿ ಆಧರಿಸಿದ ವರದಿ