ಬಳ್ಳಾರಿ ಜಿಲ್ಲಾ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಕೈಗಾರಿಕೆ ಮತ್ತು ಖಾಸಗಿ ಕಾರ್ಖಾನೆಗಳಲ್ಲಿ ಶೇಕಡ 70 ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಅದರಲ್ಲೂ ಕನ್ನಡಿಗರಿಗೆ ನೀಡಬೇಕು ಎಂದು ಸುವರ್ಣ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ ಒತ್ತಾಯಿಸಿದರು.
ಈ ಕುರಿತು ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, “ತಾಲೂಕಿನ ಹಲಕುಂದಿ ಹರಗಿನಡೋಣಿ, ಜಾನೆಕುಂಟೆ, ವೇಣಿವೀರಾಪುರ, ಕುಡಿತಿನಿ, ತೋರಣಗಲ್ಲು, ಬೆಳಗಲ್ಲು, ಸಿಡಿಗಿನಮೊಳ ಮತ್ತು ಜಿಲ್ಲೆಯ ಇತರ ಕಡೆಗಳಲ್ಲಿ ಖಾಸಗಿ ಕಾರ್ಖಾನೆಗಳಿದ್ದು, ಆ ಕಾರ್ಖಾನೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊರರಾಜ್ಯದಿಂದ ಬಂದವರಿಗೆ ಉದ್ಯೋಗವನ್ನು ನೀಡಿ ಸ್ಥಳೀಯರನ್ನು ಕಡೆಗಣಿಸಲಾಗಿದೆ. ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸ್ಥಳೀಯರ ಸಂಖ್ಯೆ ಕಡಿಮೆಯಿದೆ. ನೆಲ, ಜಲ, ಊರು, ಕೇರಿ ನಮ್ಮದು ಆದರೆ ಇಲ್ಲಿ ಕೆಲಸ ಮಾಡುವವರು ಮಾತ್ರ ನಮ್ಮವರಲ್ಲ. ಇದೆಂಥ ದುರದೃಷ್ಟ! ಕೂಡಲೇ ಕಾರ್ಖಾನೆಗಳು ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡಬೇಕು” ಎಂದು ಆಗ್ರಹಿಸಿದರು.
ಈ ಭಾಗದಲ್ಲಿ ಖಾಸಗಿ ಕಾರ್ಖಾನೆಗಳು ಮುಂದುವರಿಯಬೇಕಾದರೆ ಸ್ಥಳೀಯರಿಗೆ ಉದ್ಯೋಗವಕಾಶ ನೀಡಲೇಬೇಕು. ಇಲ್ಲದಿದ್ದದಲ್ಲಿ ಕಾರ್ಖಾನೆಗಳು ಬಳ್ಳಾರಿ ಜಿಲ್ಲೆ ಮತ್ತು ತಾಲೂಕನ್ನು ತೊರೆದು ಬೇರೆ ಕಡೆ ಸ್ಥಳಾಂತರಗೊಳ್ಳಲಿ” ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬಳ್ಳಾರಿ | ತೈಲ ಹೊರತೆಗೆಯುವ ಕಾರ್ಖಾನೆ ಮೇಲೆ ದಾಳಿ; 7 ಬಾಲ ಕಾರ್ಮಿಕರ ರಕ್ಷಣೆ
ಜಿಲ್ಲೆಯಾದ್ಯಂತ ಐಟಿಐ, ಡಿಪ್ಲಮಾ, ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ನಿರುದ್ಯೋಗಿ ಯುವ ಸಮೂಹವೇ ಇದೆ. ಅವರಿಗೆ ಕಾರ್ಖಾನೆಗಳಲ್ಲಿ ಉದ್ಯೋಗ ಕಲ್ಪಿಸುವ ಮೂಲಕ ಸ್ಥಳೀಯರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಕಾರ್ಖಾನೆಗಳ ಮಾಲೀಕರನ್ನು ಒತ್ತಾಯಿಸಿದರು.