ಬಂಗಾರದ ಬೆಲೆ ದಿನೇ ದಿನೇ ಗಗನಕ್ಕೇರುತ್ತಿರುವ ಸಮಯದಲ್ಲಿ ಲಾಭದ ಆಸೆಗೆ ಖರೀದಿ ಮತ್ತು ಹೂಡಿಕೆಗಳು ಹೆಚ್ಚುತ್ತಿವೆ. ಇಂತಹ ಅವಕಾಶವನ್ನೇ ಬಳಸಿಕೊಳ್ಳುವ ವಂಚಕರು, ಹೆಚ್ಚು ಲಾಭದ ಆಸೆ ತೋರಿಸಿ ವಂಚಿಸುವ ವ್ಯವಸ್ಥಿತವಾದ ಪ್ರಕರಣಗಳು ಹೆಚ್ಚುತ್ತಿವೆ. ದಾವಣಗೆರೆ ನಗರದ ಪ್ರತಿಷ್ಠಿತ ವೈದ್ಯರೊಬ್ಬರಿಗೆ ಷೇರು ಮಾರುಕಟ್ಟೆಯಲ್ಲಿ ಬಂಗಾರದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ಆಮಿಷ ತೋರಿಸಿದ ಫೇಸ್ ಬುಕ್‌ನ ಅಪರಿಚಿತ ಸ್ನೇಹಿತ ನಗರದ ವೈದ್ಯರಿಗೆ 2,40,92,150 ರೂ. ವಂಚಿಸಿದ್ದು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೆಲಿಗ್ರಾಂ ಗ್ರೂಪ್‌ನಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಹಾಕಿದ ಸಂದೇಶಕ್ಕೆ, ನಗರದ ಪ್ರತಿಷ್ಠಿತ ಕುಟುಂಬದ ವೈದ್ಯರೊಬ್ಬರು ಪ್ರತಿಕ್ರಿಯಿಸಿ ಮಾಹಿತಿ ಕೇಳಿದ್ದು, ಅಪರಿಚಿತ ವ್ಯಕ್ತಿಯೊಬ್ಬ ಪ್ರತಿಕ್ರಿಯಿಸಿದ್ದಾರೆ. ನಂತರ ವಾಟ್ಸಾಪ್ ನಲ್ಲಿ ಚಾಟ್ ಮಾಡಲು ಆರಂಭಿಸಿ, ಫೇಸ್ ಬುಕ್ಕ್ ಮೂಲಕವೂ ಸ್ನೇಹಿತರಾಗಿದ್ದಾರೆ.
ಬಂಗಾರದ ಮೇಲೆ ‘ಸಿಎಂಸಿ ಮಾರ್ಕೆಟ್’ ಎಂಬ ಜಾಲತಾಣದಲ್ಲಿ ಇಬ್ಬರೂ ಒಟ್ಟಿಗೆ ಹೂಡಿಕೆ ಮಾಡೋಣ, ಕಮಿಷನ್ ರೂಪದಲ್ಲಿ ಹೆಚ್ಚು ಲಾಭಗಳಿಸಬಹುದು ಎಂದು ವಂಚಕ, ವೈದ್ಯರನ್ನು ನಂಬಿಸಿದ್ದಾನೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಪ್ರಶ್ನಿಸಿ ಸಂಯುಕ್ತ ಹೋರಾಟ ಕರ್ನಾಟಕ ಜನಾಗ್ರಹ ಚಳುವಳಿ.
ವಂಚಕನು ವಾಟ್ಸ್ಆಪ್‌ನಲ್ಲಿ ಕಳುಹಿಸಿದ ಲಿಂಕ್ ಮೂಲಕ ಸಿಎಂಸಿ ಮಾರ್ಕೆಟ್ ವೆಬ್‌ಸೈಟ್ ನಲ್ಲಿ ಕಳೆದ ಫೆ.18ರಿಂದ ಮೇ 15ರವರೆಗೆ ಒಟ್ಟು 2.40 ಕೋಟಿ ರೂ.ಗಳನ್ನು ವೈದ್ಯರು ಹೂಡಿಕೆ ಮಾಡಿದ್ದಾರೆ. ನಾನಾ ಬ್ಯಾಂಕ್ ಖಾತೆಗಳಿಗೆ ಒಟ್ಟು 17 ಬಾರಿ ಹಣ ವರ್ಗಾವಣೆ ಮಾಡಿರುವ ವೈದ್ಯರು, ಮಾರ್ಚ್ 11ರಂದು 5 ಲಕ್ಷ ರೂ. ವಿತ್ ಡ್ರಾ ಮಾಡಿದ್ದಾರೆ. ಬಳಿಕ ಹಣ ವಿತ್ ಡ್ರಾ ಮಾಡಲು ನಡೆಸಿದ ಹತ್ತಾರು ಪ್ರಯತ್ನಗಳು ವಿಫಲವಾದವು. ನಂತರದಲ್ಲಿ ಸಿಎಂಸಿ ಮಾರ್ಕೆಟ್ ವೆಬ್‌ಸೈಟ್ ನಕಲಿ ಎನ್ನುವ ಅನುಮಾನ ಬಂದಿದೆ. ಅನುಮಾನಗೊಂಡ ವೈದ್ಯರು, ಮೇ 17ರಂದು ‘1930’ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದಾರೆ. ದಾವಣಗೆರೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.