‘ರಾಷ್ಟ್ರೀಯ ಶಿಕ್ಷಣ ನೀತಿ 2020’ (ಎನ್‌ಇಪಿ 2020)ಗೆ ಪರ್ಯಾಯವಾಗಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ)ಯು ಸಿದ್ಧಪಡಿಸಿದ ‘ಜನತೆಯ ಶಿಕ್ಷಣ ನೀತಿ 2025’ (ಪಿಇಪಿ 2025) ಕರಡನ್ನು ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳು, ಶಿಕ್ಷಣ ತಜ್ಞರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ತಜ್ಞ, ಎಐಎಸ್‌ಇಸಿ ಕರ್ನಾಟಕ ಅಧ್ಯಕ್ಷ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಐದು ವರ್ಷಗಳಿಂದ ನೂರಾರು ಕಾರ್ಯಾಗಾರಗ, ಚರ್ಚೆ, ವಿಚಾರ ಸಂಕಿರಣ, ಸಂವಾದ- ಸಮಾವೇಶ ಮತ್ತು ಸಾರ್ವಜನಿಕ ಸಭೆಗಳನ್ನು ಆಯೋಜಿಸಿ, ಶಿಕ್ಷಣ ತಜ್ಞರು, ಶಿಕ್ಷಕರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳ ಅಭಿಪ್ರಾಯ, ಸಲಹೆಗಳನ್ನು ಸ್ವೀಕರಿಸಿ ‘ಜನತೆಯ ಶಿಕ್ಷಣ ನೀತಿ 2025′ ಕರಡನ್ನು ಸಿದ್ಧಪಡಿಸಿದ್ದೇವೆ. ಇದರ ಬಗ್ಗೆ ಹೆಚ್ಚಿನ ಸಾರ್ವಜನಿಕ ಚರ್ಚೆಗಾಗಿ ಔಪಚಾರಿಕವಾಗಿ ಇಂದು ಕರಡನ್ನು ಬಿಡುಗಡೆ ಮಾಡಿದ್ದೇವೆ ಎಂದರು.
ಸಂಸತ್ತಿನಲ್ಲಿ ಹೆಚ್ಚಿನ ಚರ್ಚೆ ನಡೆಸದೆ, ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸದೆ, ಬುದ್ದಿಜೀವಿಗಳು, ಶಿಕ್ಷಣ ತಜ್ಞರು, ಶಿಕ್ಷಕರು, ವಿದ್ಯಾರ್ಥಿಗಳು, ಜನರ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ 2020ರಲ್ಲಿ ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರದ ಮೂಲಕ ‘ರಾಷ್ಟ್ರೀಯ ಶಿಕ್ಷಣ ನೀತಿ 2020’ ಅನ್ನು ದೇಶದ ಮೇಲೆ ಹೇರಿದೆ. ‘ರಾಷ್ಟ್ರೀಯ ಶಿಕ್ಷಣ ನೀತಿ 2020’ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣ ನಾಶಪಡಿಸುತ್ತದೆ ಎಂಬುದನ್ನು ಮನಗಂಡ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು ಅದಕ್ಕೆ ಪರ್ಯಾಯವಾಗಿ ‘ಜನತೆಯ ಶಿಕ್ಷಣ ನೀತಿ 2025’ ಕರಡನ್ನು ಹೊರ ತಂದಿದೆ ಎಂದು ತಿಳಿಸಿದರು.
ಮೇ 22 ರಾಜಾ ರಾಮಮೋಹನ್ ರಾಯ್ ಅವರ ಜನ್ಮದಿನವಾಗಿದ್ದು, ಅವರು ಭಾರತೀಯ ನವೋದಯ ಚಳವಳಿಯ ಪ್ರವರ್ತಕರಾಗಿದ್ದರು ಮತ್ತು ಭಾರತದಲ್ಲಿ ಆಧುನಿಕ ಶಿಕ್ಷಣಕ್ಕೆ ದಾರಿ ಮಾಡಿಕೊಟ್ಟ ಮಹಾನ್ ವ್ಯಕ್ತಿಯಾಗಿದ್ದಾರೆ. ಹೀಗಾಗಿ ‘ಜನತೆಯ ಶಿಕ್ಷಣ ನೀತಿ 2025’ ಕರಡನ್ನು ಬಹುತೇಕ ಎಲ್ಲಾ ರಾಜ್ಯ ರಾಜಧಾನಿಗಳಲ್ಲಿ ಮತ್ತು ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ ಮೇ 22ರಂದು ಏಕಕಾಲದಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಎನ್‌ಇಪಿ 2020 ಜಾರಿಗೆ ತಂದ ಕೋಮುವಾದಿ, ಪ್ರಜಾಪ್ರಭುತ್ವ ವಿರೋಧಿ, ವಿಜ್ಞಾನ ವಿರೋಧಿ, ಖಾಸಗೀಕರಣ ಮತ್ತು ವಾಣಿಜೀಕರಿಸಿದ ಶಿಕ್ಷಣಕ್ಕೆ ಎದುರಾಗಿ ಪಿಇಪಿ 2025 ಜಾತ್ಯತೀತ, ವೈಜ್ಞಾನಿಕ, ಜನತಾಂತ್ರಿಕ ಮತ್ತು ಸಾರ್ವತ್ರಿಕ ಶಿಕ್ಷಣವನ್ನು ಪ್ರಸ್ತಾಪಿಸುತ್ತದೆ. ಎನ್‌ಇಪಿ 2020ರ ಪರಿಣಾಮವಾಗಿ ಸರ್ಕಾರದ ಅನುದಾನದ ಹಂಚಿಕೆಯು ಕುಸಿದು ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿದೆ. ಪಿಇಪಿಯು ಕೇಂದ್ರ ಬಜೆಟ್‌ನ ಕನಿಷ್ಠ 10% ಮತ್ತು ರಾಜ್ಯ ಬಜೆಟ್‌ನ 20-25% ಅನ್ನು ಶಿಕ್ಷಣಕ್ಕಾಗಿ ಮೀಸಲಿಡಲು ಪ್ರಸ್ತಾಪಿಸುತ್ತದೆ. ಹಾಗೂ ಸರ್ಕಾರವು ಶಿಕ್ಷಣದ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ಹೇಳುತ್ತದೆ ಎಂದರು.
ಪಿಇಪಿ ಶಿಕ್ಷಣವು ಸಮವರ್ತಿ ಪಟ್ಟಿಯಿಂದ ರಾಜ್ಯಪಟ್ಟಿಯ ವಿಷಯವಾಗಿಸಲು ಪ್ರಸ್ತಾಪಿಸುತ್ತದೆ ಮತ್ತು ಭಾರತೀಯ ಸಂವಿಧಾನವನ್ನು ಅದಕ್ಕೆ ಅನುಗುಣವಾಗಿ ಮರು ತಿದ್ದುಪಡಿ ಮಾಡಬೇಕು. ಈ ವಿಷಯದ ಬಗ್ಗೆ ಎನ್‌ಇಪಿ ಮೌನವಾಗಿದೆ. ಪಿಇಪಿ ಎರಡು ಭಾಷಾ ಸೂತ್ರವನ್ನು ಶಿಫಾರಸು ಮಾಡುತ್ತದೆ. ಮಾತೃ ಭಾಷೆಗಳು ಮತ್ತು ಇಂಗ್ಲಿಷ್ ಭಾಷೆಯನ್ನು ಉತ್ತೇಜಿಸಲು. ಭಾಷಾ ನೀತಿಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲು ಇದು ಶಿಫಾರಸು ಮಾಡುತ್ತದೆ. ಹಿಂದಿ ಮತ್ತು ಸಂಸ್ಕೃತವನ್ನು ಹೇರುವ ಮತ್ತು ಎಲ್ಲಾ ಮಾತೃಭಾಷೆಗಳು ಮತ್ತು ಇಂಗ್ಲಿಷ್ ಕಲಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಎನ್‌ಇಪಿ ವಿಫಲವಾದ 3 ಭಾಷಾ ಸೂತ್ರವನ್ನು ಹೇರುತ್ತದೆ ಎಂದು ತಿಳಿಸಿದರು.
ಎಲ್ಲಾ ಹಂತಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಶಾಶ್ವತ ಶಿಕ್ಷಕರೊಂದಿಗೆ ನಿಯಮಿತವಾಗಿ ಭರ್ತಿ ಮಾಡುವ ಪರವಾಗಿ ಪಿಇಪಿ ಇದೆ. ಅರ್ಹ ಮತ್ತು ಅನುಭವಿ ‘ಅತಿಥಿ’ ಅಥವಾ ‘ಕಾಂಟ್ರಾಕ್ಟ್’ ಶಿಕ್ಷಕರ ಸೇವೆಗಳನ್ನು ಖಾಯಂಗೊಳಿಸಲು ಸಹ ಇದು ಪ್ರಸ್ತಾಪಿಸುತ್ತದೆ. ಎನ್‌ಇಪಿ ಈ ಬಗ್ಗೆ ಮೌನವನ್ನು ಕಾಯ್ದುಕೊಂಡಿದೆ. ಅದರ ಶಿಫಾರಸುಗಳು ‘ಅತಿಥಿ ಶಿಕ್ಷಕರ’ ಶೋಷಣೆಯನ್ನು ಮತ್ತಷ್ಟು ಬಲಪಡಿಸುತ್ತವೆ. ಪರ್ವತ ಪ್ರದೇಶಗಳು, ಅರಣ್ಯ ಪ್ರದೇಶಗಳು, ಮರುಭೂಮಿಗಳು, ಗಡಿ ಪ್ರದೇಶಗಳು ಮತ್ತು ಇತರ ವಿರಳ ಜನಸಂಖ್ಯೆಯ ಪ್ರದೇಶಗಳಂತಹ ದೂರದ ಮತ್ತು ಪ್ರವೇಶಿಸಲಾಗದ ಪ್ರದೇಶಗಳಲ್ಲಿಯೂ ಸಹ ಶಿಕ್ಷಣ ಸಂಸ್ಥೆಗಳು ಇರುವುದನ್ನು ಖಚಿತಪಡಿಸಿಕೊಳ್ಳಲು ಪಿಇಪಿ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.
3 ರಿಂದ 17 ವರ್ಷ ವಯಸ್ಸಿನ ಎಲ್ಲರಿಗೂ ಉಚಿತ ಶಿಕ್ಷಣವನ್ನು ಖಾತ್ರಿಪಡಿಸುವ ಮೂಲಕ ಆರ್‌ಟಿಇ ಕಾಯ್ದೆ 2009 ಅನ್ನು ತಿರಸ್ಕರಿಸಬೇಕೆಂದು ಪಿಇಪಿ ಒತ್ತಾಯಿಸುತ್ತದೆ. ಪಿಇಪಿ ಕಾಲದ ಪರೀಕ್ಷೆಯಲ್ಲಿ ಪಾಸಾದ 1042 ರಚನೆಯನ್ನು ಮುಂದುವರಿಸಲು ಹಾಗೂ 2 ವರ್ಷಗಳ ಕಡ್ಡಾಯವಲ್ಲದ ಪೂರ್ವ-ಪ್ರಾಥಮಿಕ ಶಿಕ್ಷಣದ ಬಗ್ಗೆ ಪ್ರಸ್ತಾಪಿಸುತ್ತದೆ. ಮತ್ತು ಎನ್‌ಇಪಿ 2020 ಪರಿಚಯಿಸಿದ ಸಮಸ್ಯಾತ್ಮಕವಾದ ಶೈಕ್ಷಣಿಕ ಮಾದರಿಯನ್ನು ವಿರೋಧಿಸುತ್ತದೆ ಎಂದು ಹೇಳಿದರು.
ಎನ್‌ಇಪಿಯ ಆವೈಜ್ಞಾನಿಕ ಬಹುಶೀಸ್ತಿನನ ವಿಧಾನದ ಆಧಾರದ ಮೇಲೆ 4 ವರ್ಷದ ಪದವಿ (FYUP), ಪ್ರವೇಶ ಮತ್ತು ನಿರ್ಗಮನ ಆಯ್ಕೆಗಳು ಮತ್ತು ಕೋರ್ಸ್‌ಗಳ ಆಯ್ಕೆಯ ಕೆಫೆಟೇರಿಯಾ ವ್ಯವಸ್ಥೆಯ ವಿರುದ್ಧ 3 ವರ್ಷದ ಪದವಿ ಕಾರ್ಯಕ್ರಮವನ್ನು ಮುಂದುವರಿಸಲು ಪಿಇಪಿ ಶಿಫಾರಸ್ಸು ಮಾಡುತ್ತದೆ. ಎನ್‌ಇಪಿ ರೂಪಿಸಿದ 1 ವರ್ಷದ ಸ್ನಾತಕೊತ್ತರ ಪದವಿ ವಿರುದ್ಧ ಪಿಇಪಿ 2 ವರ್ಷದ ಸ್ನಾತಕೊತ್ತರ ಪದವಿ ಕಾರ್ಯಕ್ರಮದ ಪರವಾಗಿದೆ ಎಂದು ಅವರು ತಿಳಿಸಿದರು.
ಪ್ರಸ್ತುತ ಸೆಮಿಸ್ಟರ್ ಪರೀಕ್ಷಾ ವಿಧಾನ ಕೈಬೀಡಬೇಕು. ಸಾಧ್ಯವಾದಷ್ಟು ಮಟ್ಟಿಗೆ ವಾರ್ಷಿಕ ಪರೀಕ್ಷಾ ವಿಧಾನವನ್ನು ಪರಿಚಯಿಸಲು ಪಿಇಪಿ ಪ್ರಸ್ತಾಪಿಸುತ್ತದೆ. ಎನ್‌ಇಪಿ ಅನುಷ್ಠಾನದಿಂದ ರದ್ದಾಗಿರುವ M.Phil ಅನ್ನು ಒಂದು ಆಯ್ಕೆಯಾಗಿ ಮರುಸ್ಥಾಪಿಸಲು ಪಿಇಪಿ ಒಲವು ತೋರುತ್ತದೆ. ಕೇಂದ್ರ ಮತ್ತು ಅಧಿಕಾರಶಾಹಿ ನಿಯಂತ್ರಣ, ನಕಲಿ ಸ್ವಾಯತ್ತತೆ, ಶ್ರೇಣೀಕೃತ ಸ್ವಾಯತ್ತತೆ ಮತ್ತು ಎನ್‌ಇಪಿ ಪ್ರಸ್ತಾಪಿಸುವ ರಾಜಕೀಯ ಹಸ್ತಕ್ಷೇಪದ ವಿರುದ್ಧ ಶಿಕ್ಷಕರ ಶೈಕ್ಷಣಿಕ ಸಂಸ್ಥೆಗಳು ಮತ್ತು ಶೈಕ್ಷಣಿಕ ಸ್ವಾತಂತ್ರ್ಯದ ಅಡೆತಡೆಯಿಲ್ಲದ ಸ್ವಾಯತ್ತತೆಯನ್ನು ಪಿಇಪಿ ಇಷ್ಟಪಡುತ್ತದೆ ಎಂದು ತಿಳಿಸಿದರು.
ಎನ್‌ಇಪಿನಿಂದ ಶಿಕ್ಷಕರನ್ನು ‘ಸೌಲಭ್ಯಕಾರ’ ಎಂದು ಕರೆಯಲ್ಪಡುವ ಬದಲು ಶಿಕ್ಷಕರನ್ನು ಪೋಷಕರು ಮತ್ತು ಮಾರ್ಗದರ್ಶಕರಾಗಿ ನೋಡಲು ಪಿಇಪಿ ಬಯಸುತ್ತದೆ. ಎನ್‌ಇಪಿ ಪರಿಚಯಿಸಿದ ಆನ್‌ಲೈನ್ ಮತ್ತು ಹೈಬ್ರಿಡ್ ಬೋಧನಾ ವಿಧಾನದ ವಿರುದ್ಧ ಕಾಲದ ಪರೀಕ್ಷೆಯಲ್ಲಿ ಪಾಸಾದ ಔಪಚಾರಿಕ ತರಗತಿ ಬೋಧನಾ – ಕಲಿಕಾ ಪ್ರಕ್ರಿಯೆಯನ್ನು ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳಲು ಪಿಇಪಿ ಬಯಸುತ್ತದೆ. ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯನ್ನು ವಿಶ್ವವಿದ್ಯಾನಿಲಯಗಳು ನಿರ್ಧರಿಸಬೇಕು ಎಂದು ಪಿಇಪಿ ಶಿಫಾರಸ್ಸು ಮಾಡುತ್ತದೆ ಮತ್ತು CUET ಮತ್ತು NEET ನಂತಹ ಕೇಂದ್ರೀಕೃತ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳನ್ನು ವಿರೋಧಿಸುತ್ತದೆ ಎಂದರು.
ಮಾತೃಭಾಷೆಗಳು ಮತ್ತು ಇಂಗ್ಲಿಷ್ ಭಾಷೆಯನ್ನು ಉತ್ತೇಜಿಸಲು ಮತ್ತು ಭಾಷಾ ನೀತಿಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲು ಪಿಇಪಿ ಶಿಫಾರಸ್ಸು ಮಾಡುತ್ತದೆ. ಎನ್‌ಇಪಿ ಪ್ರಸ್ತಾಪಿಸಿದ ಅತಿಥಿ ಮತ್ತು ಗುತ್ತಿಗೆ ಶಿಕ್ಷಕರ ವಿರುದ್ಧ ಎಲ್ಲಾ ಹಂತಗಳಲ್ಲಿ ಖಾಯಂ ಶಿಕ್ಷಕರ ನೇಮಕಾತಿಗೆ ಪಿಇಪಿ ಒಲವು ತೋರುತ್ತದೆ. ಪ್ರಾಚೀನ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಹೆಸರಿನಲ್ಲಿ IKS (ಭಾರತೀಯ ಜ್ಞಾನ ವ್ಯವಸ್ಥೆ) ಪರಿಚಯವನ್ನು ಪಿಇಪಿ ವಿರೋಧಿಸುತ್ತದೆ. ಇದು ವಾಸ್ತವವಾಗಿ ಇತಿಹಾಸವನ್ನು ತಿರುಚಲು ಮತ್ತು ಹುಸಿ ವಿಜ್ಞಾನವನ್ನು ಬೆಳೆಸುವ ವಿನ್ಯಾಸವಾಗಿದೆ. ಸಂಶೋಧನಾ ಕ್ಷೇತ್ರವನ್ನು ಹಣಕಾಸು ಸಂಸ್ಥೆ ಅಥವಾ ಸರ್ಕಾರವು ನಿರ್ದೇಶಿಸಬಾರದು ಎಂದು ಪಿಇಪಿ ಬಯಸುತ್ತದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಮಾಜಿ ಉಪ ಕುಲಪತಿ ಪ್ರೊ. ಎ. ಮುರಿಗೆಪ್ಪ, ಫಾಲ್ಕನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ನಿರ್ದೇಶಕ ಡಾ. ಅಬ್ದುಲ್ ಸುಭಾನ್, ನಿವೃತ್ತ ವಿಜ್ಞಾನಿ ಶ್ರೀ. ಆರ್. ಎಲ್. ಮೌರ್ಯನ್, ಎಐಎಸ್‌ಇಸಿ ಕರ್ನಾಟಕ ಉಪಾಧ್ಯಕ್ಷ ಶ್ರೀ ವಿ.ಎನ್. ರಾಜಶೇಖರ್ ಉಪಸ್ಥಿತರಿದ್ದು ಕರಡು ಬಗ್ಗೆ ವಿವಿಧ ಮಾಹಿತಿ ನೀಡಿದರು.