ಆಪರೇಷನ್ ಸಿಂಧೂರ ಬಳಿಕ ಮಧ್ಯಪ್ರದೇಶದ ಇಬ್ಬರ ಸಚಿವರು ವಿವಾದಾದ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಬಿಜೆಪಿ ಸಚಿವ ವಿಜಯ್ ಶಾ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದರೆ ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ ಸೇನೆಗೆ ಅವಮಾನ ಮಾಡುವ ಹೇಳಿಕೆ ನೀಡಿದ್ದಾರೆ. ಇವುಗಳ ವಿರುದ್ಧವಾಗಿ ನಾಗರಿಕರ ಗುಂಪೊಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದೆ.
ಮಧ್ಯಪ್ರದೇಶದ ಇಬ್ಬರು ಸಚಿವರು ಸೇನೆಗೆ ಅವಮಾನ ಮಾಡಿದ್ದಾರೆ. ಇದು ವಿಷಾದನೀಯ, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಮುರ್ಮು ಅವರಿಗೆ ನಾಗರಿಕರ ಗುಂಪು ಒತ್ತಾಯಿಸಿದೆ. ಮಧ್ಯಪ್ರದೇಶ ಸಚಿವ ವಿಜಯ್ ಶಾ ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ಅವಹೇಳನಕಾರಿಯಾಗಿ ನೀಡಿರುವ ಹೇಳಿಕೆ ಮತ್ತು ಸೇನೆ, ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿ ಪಾದಗಳಿಗೆ ನಮಸ್ಕರಿಸುತ್ತದೆ ಎಂಬ ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ ಅವರ ಹೇಳಿಕೆಯನ್ನು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ, ಖಂಡಿಸಲಾಗಿದೆ.
ಇದನ್ನು ಓದಿದ್ದೀರಾ? ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನೇ ಕಳುಹಿಸಿದ್ದೆವು: ಸಚಿವ ವಿಜಯ್ ಶಾ ವಿವಾದಾತ್ಮಕ ಹೇಳಿಕೆ
ಮಾಜಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ವಿಷ್ಣು ಭಾಗವತ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ವಪ್ಪಲ ಬಾಲಚಂದ್ರನ್ ಸೇರಿದಂತೆ ಇತರರು ಈ ಪತ್ರವನ್ನು ಬರೆದಿದ್ದಾರೆ. ಈ ಅವಮಾನಕಾರಿ ಹೇಳಿಕೆಗೆ ಪ್ರತಿಕ್ರಿಯಿಸುವುದನ್ನು ನಿರ್ಬಂಧಿಸಲಾಗಿದೆ. ಆದ್ದರಿಂದ ತಮಗೆ ಪತ್ರ ಬರೆಯುತ್ತಿರುವುದಾಗಿ ರಾಷ್ಟ್ರಪತಿಗಳಿಗೆ ನಾಗರಿಕರ ತಂಡ ಈ ಪತ್ರದ ಮೂಲಕ ತಿಳಿಸಿದೆ.
ರಾಷ್ಟ್ರೀಯ ಏಕತೆಯ ಹಿತದೃಷ್ಟಿಯಿಂದ ಇಂತಹ ಸಮಸ್ಯೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ರಾಷ್ಟ್ರಪತಿಗಳನ್ನು ಒತ್ತಾಯಿಸಿದ್ದಾರೆ. ಇಬ್ಬರು ಸಚಿವರ ಅವಹೇಳನಕಾರಿ ಹೇಳಿಕೆಗಳು ನಮ್ಮ ಸೇನೆಯ ಸಿಬ್ಬಂದಿಯ ನೈತಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇದರಿಂದಾಗಿ ರಾಷ್ಟ್ರೀಯ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆ ದುರ್ಬಲಗೊಳ್ಳುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ ಅವರು ಇಡೀ ದೇಶ, ದೇಶದ ಸೇನೆ ಮತ್ತು ಯೋಧರು ಆಪರೇಷನ್ ಸಿಂಧೂರ ನಡೆಸಿದ ಮೋದಿ ಅವರ ಪಾದಗಳಿಗೆ ನಮಸ್ಕರಿಸಬೇಕು ಎಂದು ಹೇಳಿದ್ದರು. ಇನ್ನೊಂದೆಡೆ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕಾರಣರಾದವರನ್ನು ಎದುರಿಸಲು “ತಮ್ಮ ಸಮುದಾಯದಿಂದ ಒಬ್ಬ ಸಹೋದರಿಯನ್ನು (ಕರ್ನಲ್ ಖುರೇಷಿ)” ಕಳುಹಿಸುವ ಸಾಂಕೇತಿಕ ಹೆಜ್ಜೆಯನ್ನು ಪ್ರಧಾನಿ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ಸಚಿವ ವಿಜಯ್ ಶಾ ಹೇಳಿದ್ದರು. ಈ ಎರಡೂ ಹೇಳಿಕೆಗಳು ತೀವ್ರ ವಿವಾದಕ್ಕೆ ಕಾರಣವಾಗಿದೆ.
