ತೀರಾ ಹಿಂದುಳಿದಿರುವ ಮಾದಿಗ ಸಮುದಾಯಕ್ಕೆ ಈ ಬಾರಿ ಒಳ ಮೀಸಲಾತಿ ಜಾರಿಯಾಗುವುದು ಖಚಿತ. ಸತತ 30 ವರ್ಷಗಳಿಂದ ನಡೆಸಿರುವ ಹೋರಾಟಕ್ಕೆ ಫಲ ಸಿಗಲಿದೆ ಎಂದು ಮಾಜಿ ಸಚಿವ ಎಚ್ ಆಂಜನೇಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಜಯಪುರ ನಗರದ ಪ್ರವಾಸಿಮಂದಿರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಆಂಧ್ರದಲ್ಲಿ ತೀವ್ರ ಹೋರಾಟದ ಮೂಲಕ ಒಳ ಮೀಸಲಾತಿ ಪಡೆದುಕೊಂಡಿದ್ದಾರೆ. ಇದೀಗ ಸುಪ್ರೀಂ ಕೋರ್ಟ್ ಆದೇಶ ಬಂದಮೇಲೆ ನಮ್ಮ ರಾಜ್ಯದಲ್ಲೂ ಒಳಮೀಸಲಾತಿ ಕೊಡುವ ಕೆಲಸ ಆಗಲಿದೆ. ಸದಾಶಿವ ಆಯೋಗದ ವರದಿ ಹಾಗೂ ಮಾಧುಸ್ವಾಮಿ ನೇತೃತ್ವದಲ್ಲಿ ಬೊಮ್ಮಾಯಿ ಸರ್ಕಾರವಿದ್ದಾಗ ಅವರು ಶಿಫಾರಸು ಮಾಡಿದ್ದರು. ಆದರೆ ಆದು ಆಗಿರಲಿಲ್ಲ. ಇದೀಗ ಒಳ ಮೀಸಲಾತಿ ಅನುಷ್ಠಾನಕ್ಕೆ ತರುವ ಕೆಲಸ ಸಿದ್ದರಾಮಯ್ಯನವರ ಮುಂದಿದೆ. ಸಿಎಂ ಜೂನ್ ತಿಂಗಳ ಒಳಗಾಗಿ ಈ ಕೆಲಸ ಮಾಡಲಿದ್ದು, ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಸಿಗಲಿದೆ” ಎಂದರು.
“ಮೈಸೂರು ಹಾಗೂ ಬೆಂಗಳೂರು ವಿಭಾಗದಲ್ಲಿ ಆದಿ ಕರ್ನಾಟಕ ಸಮುದಾಯದ ಜನರು ಮಾದಿಗ ಸೌಲಭ್ಯಕ್ಕೆ ಮುಂದಾಗಿದ್ದು, ಅದು ಗೊಂದಲ ಮೂಡಿಸಿದೆ. ಒಳ ಮೀಸಲಾತಿ ಕುರಿತು ಸಮೀಕ್ಷೆ ಸಮಯ ವಿಸ್ತರಣೆಯಾಗಿದ್ದು, ಎಲ್ಲರನ್ನೂ ನೋಂದಾಯಿಸುವ ಕೆಲಸ ನಡೆಯುತ್ತಿದೆ. ಯಾರೊಬ್ಬರೂ ಈ ಸಮೀಕ್ಷೆಯಿಂದ ಹೊರಗುಳಿಯಬಾರದು. ಸಮೀಕ್ಷೆ ಮುಗಿಯುವವರೆಗೂ ಸಮಾಜದ ಮುಖಂಡರು ಕಾರ್ಯಕ್ರಮಗಳನ್ನು ಮಾಡಬಾರದು. ಎಲ್ಲರೂ ಊರಲ್ಲೇ ಇದ್ದು, ಎಲ್ಲರನ್ನೂ ನೋಂದಾಯಿಸಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿ: ವಿಜಯಪುರ | ಕೇಂದ್ರದ ಅಸಹಕಾರದ ನಡುವೆ ರಾಜ್ಯ ಸರ್ಕಾರ ಉತ್ತಮ ಆಡಳಿತ: ಕೆಪಿಸಿಸಿ ವಕ್ತಾರ ಗಣಿಹಾರ
“ಒಳಮೀಸಲಾತಿ ಅನುಷ್ಠಾನ ಆದ ಮೇಲೆಯೇ ಹೊಸ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಕಳೆದ ವರ್ಷ ಅಕ್ಟೋಬರ್ 10 ರಿಂದ ಹೊಸ ಹುದ್ದೆಗಳ ಭರ್ತಿಯನ್ನು ನಿಲ್ಲಿಸಲಾಗಿದೆ. ಈ ಬಾರಿ ಜೂನ್‌ನಲ್ಲಿ ಒಳಮೀಸಲಾತಿ ಸೌಲಭ್ಯ ಅನುಷ್ಠಾನ ಆಗಲೇಬೇಕು. ಅದನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಮೇಶ ಆಸಂಗಿ, ಸುಭಾಷ ಕಾಲೇಬಾಗ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.