ಜಾತಿ ಅವಮಾನ, ಅಸ್ಪೃಶ್ಯತೆಯಂತಹ ಪ್ರಕರಣ ನಡೆದಾಗ ತಪ್ಪಿತಸ್ಥರನ್ನು ಒದ್ದು, ಬುದ್ಧಿಕಲಿಸಬೇಕಾದ ಪೊಲೀಸರು, ಅಧಿಕಾರಿಗಳು ಸಂಧಾನ, ಸಮಾಧಾನ ಎಂದು ಜಾತಿ ಅಸಮಾನತೆ ಆಚರಿಸುವ ಕೊಳಕರನ್ನು ಓಲೈಸುತ್ತಲೇ ಬಂದಿದ್ದಾರೆ. ಅಲ್ಲದೆ ಅಸ್ಪೃಶ್ಯತೆಯನ್ನು ಯಥಾ ಸ್ಥಿತಿಯಲ್ಲಿಡುವಂತೆ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಈವರೆಗೂ ಅಸ್ಪೃಶ್ಯತೆಯನ್ನು ಕಿತ್ತೊಗೆಯಲು ಸಾಧ್ಯವಾಗುತ್ತಿಲ್ಲ.
ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರುನಾಮಕರಣಗೊಳ್ಳಲು ಸಿದ್ದವಾಗಿರುವ ರಾಮನಗರ ಜಿಲ್ಲೆ. ಇದೇ ಜಿಲ್ಲೆಯ ಹಾರೋಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬನವಾಸಿ ಗ್ರಾಮದ ಮಾರಮ್ಮನ ಜಾತ್ರೆಯಲ್ಲಿ ಭಾಗವಹಿಸಲು ತಮಗೂ ಸಮಾನ ಅವಕಾಶ ನೀಡಬೇಕೆಂದು ಬೇಡಿಕೆ ಇಟ್ಟ ಬನವಾಸಿ ಗ್ರಾಮದ ದಲಿತರಿಗೆ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕಿದ್ದು, ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವುದನ್ನು ಸಾಬೀತುಪಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ, ದಲಿತರು ಹಾರೋಹಳ್ಳಿ ಪೊಲೀಸ್ ಠಾಣೆಗೆ ಏಳು ಮಂದಿ ಸವರ್ಣೀಯರ ವಿರುದ್ಧ ದೂರು ನೀಡಿ ಎರಡು ದಿನಗಳಾದರೂ ಈವರೆಗೂ ಪ್ರಕರಣ ದಾಖಲಿಸಿಕೊಂಡಿಲ್ಲವೆಂಬ ಆರೋಪವೂ ಕೇಳಿಬಂದಿತ್ತು.
ಇದೀಗ ಅಧಿಕಾರಿಗಳೆಲ್ಲರೂ ಸಭೆ ಸೇರಿಸಿ ಮೇಲ್ನೋಟಕ್ಕೆ ಶಾಂತಿ ಸಭೆಗಳನ್ನು ಸಡೆಸಿದ್ದಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಕೂಡ ಅಸ್ಪೃಶ್ಯತೆ ತಾಂಡವವಾಡುತ್ತಲೇ ಇದೆ. ಅಧಿಕಾರಿಗಳು ಶಾಂತಿಸಭೆ ನಡೆಸಿ ಕೈತೊಳೆದುಕೊಳ್ಳುತ್ತಲೇ ಇದ್ದಾರೆ. ಆದರೆ ಇದಕ್ಕೊಂದು ತಾರ್ಕಿಕ ಅಂತ್ಯ ಕಾಣುವುದಾದರೂ ಯಾವಾಗ?
ಪ್ರಪಂಚ ಆಧುನಿಕತೆಯೊಂದಿಗೆ ವೇಗವಾಗಿ ಬೆಳೆಯುತ್ತಿದ್ದರೂ, ಜನರ ಮನಸ್ಥಿತಿಗಳು ಮಾತ್ರ ಬೆಳೆಯದೇ ಹಾಗೆಯೇ ಮುದುಡಿಕೊಂಡಿವೆ. ಅದರಲ್ಲೂ ಜಾತಿ, ಅಸಮಾನತೆಯನ್ನು ಆಚರಿಸುವ ವರ್ಗವಂತೂ ಇನ್ನೂ ತಮ್ಮ ಮನಸ್ಸಿನೊಳಗಿನ ಜಾತಿಯೆಂಬ ಕೊಳಕನ್ನು ಅಪ್ಪಿಕೊಂಡು, ಆ ಕೊಳಕಿನೊಂದಿಗೆ ಇನ್ನೂ ಜೀವಿಸುತ್ತಿದ್ದಾರೆ.
ಜಾತಿ ಅವಮಾನ, ಅಸ್ಪೃಶ್ಯತೆಯಂತಹ ಪ್ರಕರಣ ನಡೆದಾಗ ತಪ್ಪಿತಸ್ಥರನ್ನು ಒದ್ದು, ಬುದ್ಧಿಕಲಿಸಬೇಕಾದ ಪೊಲೀಸರು, ಅಧಿಕಾರಿಗಳು ಸಂಧಾನ, ಸಮಾಧಾನ ಎಂದು ಜಾತಿ ಅಸಮಾನತೆ ಆಚರಿಸುವ ಕೊಳಕರನ್ನು ಓಲೈಸುತ್ತಲೇ ಬಂದಿದ್ದಾರೆ. ಅಲ್ಲದೆ ಅಸ್ಪೃಶ್ಯತೆಯನ್ನು ಯಥಾ ಸ್ಥಿತಿಯಲ್ಲಿಡುವಂತೆ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಈವರೆಗೂ ಅಸ್ಪೃಶ್ಯತೆಯನ್ನು ಕಿತ್ತೊಗೆಯಲು ಸಾಧ್ಯವಾಗುತ್ತಿಲ್ಲ.
ಸಂವಿಧಾನ, ಕಾನೂನು, ನ್ಯಾಯ, ವಿಶೇಷ ಕಾಯಿದೆಗಳು ಇದ್ದರೂ ಕೂಡ ಇಂಥದ್ದೊಂದು ವಿಷದ ಬೇರು ಆಳವಾಗಿ ಬೇರೂರಿರುವುದನ್ನು ನೋಡಿದರೆ, ಕಾನೂನುಗಳು ಎಷ್ಟರ ಮಟ್ಟಿಗೆ ಬಲಗೊಂಡಿವೆ ಎಂಬುದನ್ನು ತೋರಿಸುತ್ತಿದೆ.
ಬನವಾಸಿ ಗ್ರಾಮದ ಜಾತ್ರೆಯಲ್ಲಿ ತಮ್ಮನ್ನೂ ಸೇರಿಸಿಕೊಳ್ಳಿ, ತಮ್ಮನ್ನೂ ಎಲ್ಲರಂತೆ ಕಾಣಿ ಎಂದ ದಲಿತರಿಗೆ ನೀರು, ದಿನಸಿ ಪದಾರ್ಥ ನೀಡದಂತೆ ತಾಕೀತು ಮಾಡಿ ಜಾತಿ ಅಸಮಾನತೆ ಆಚರಿಸುವ ಕೆಲವು ಕೊಳಕರು ಸೇರಿಕೊಂಡು ದಲಿತರಿಗೆ ಬಹಿಷ್ಕಾರ ಹಾಕಿಸಿದ್ದರು. ಅದೂ ಕೂಡ ಒಬ್ಬ ದಲಿತನಿಂದಲೇ.
ʼಬನವಾಸಿ ಗ್ರಾಮದ ಅಂಗಡಿಗಳಲ್ಲಿ ದಲಿತರಿಗೆ ಸಾಮಾನು ಮಾರಾಟ ಮಾಡಬಾರದು, ಡೇರಿಗಳಲ್ಲಿ ಹಾಲು ಹಾಕಿಸಿಕೊಳ್ಳಬಾರದು ಮತ್ತು ನೀಡಬಾರದು, ಶುದ್ಧ ಕುಡಿಯುವ ನೀರು ಮುಟ್ಟಲು ಬಿಡಬಾರದು ಹಾಗೂ ಕೃಷಿ ಕೆಲಸಗಳಿಗೆ ದಲಿತರನ್ನು ಕರೆಯಬಾರದು ಎಂಬ ಷರತ್ತು ಹಾಕಿದ್ದು, ಈ ನಿಯಮವನ್ನು ಉಲ್ಲಂಘಿಸಿದರೆ ಅಂಥವರು ₹10,000 ದಂಡ ಕಟ್ಟಬೇಕುʼ ಎಂದು ದಲಿತ ವ್ಯಕ್ತಿಯಿಂದಲೇ ಗ್ರಾಮದಲ್ಲಿ ಡಂಗೂರ ಸಾರಿಸಿದ್ದಾರೆ.
ಮೇ 18ರಂದು ಈ ಘಟನೆ ನಡೆದಿದ್ದು, ತಹಶೀಲ್ದಾರ್ ಮತ್ತು ಪೊಲೀಸರಿಗೆ ದಲಿತರು ದೂರು ನೀಡಿದ್ದರೂ ಪ್ರಕರಣ ದಾಖಲಾಗಿಲ್ಲ. ವಿಷಯ ತಿಳಿದ ಕೂಡಲೇ ಸಮಾಜ ಕಲ್ಯಾಣ ಇಲಾಖೆಯ ಕನಕಪುರ ತಾಲೂಕಿನ ಸಹಾಯಕ ನಿರ್ದೇಶಕರು ಗ್ರಾಮಕ್ಕೆ ಭೇಟಿ ನೀಡಿ ದಲಿತರ ಅಹವಾಲು ಆಲಿಸಿದ್ದಾರೆ. ಬಳಿಕ ಮೇ 21ರಂದು ತಹಶೀಲ್ದಾರ್, EO, PWD ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಪೊಲೀಸರು ಸೇರಿದಂತೆ ಅಧಿಕಾರಿಗಳೆಲ್ಲರೂ ಸೇರಿ ಶಾಂತಿ ಸಭೆ ನಡೆಸಿದ್ದಾರೆ. ಆದರೂ ಯಾವುದೇ ರೀತಿಯ ಪ್ರಕರಣ ದಾಖಲಿಸಿಕೊಂಡಿಲ್ಲ. ಆರೋಪಿಗಳಿಗೆ ಶಿಕ್ಷೆಯಾಗುವುದೂ ಇಲ್ಲ. ಹೀಗಿರುವಾಗ ಅಸ್ಪೃಶ್ಯತೆಯನ್ನು ಬೇರುಸಹಿತ ಕಿತ್ತೊಗೆಯಲು ಸಾಧ್ಯವೇ?.
ಹಾರೋಹಳ್ಳಿ ತಹಶೀಲ್ದಾರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಊರಿನಲ್ಲಿ ಜಾತ್ರೆ ಮಾಡುವ ವಿಚಾರವಾಗಿ ನಡೆಸಿದ ಸಭೆಯಲ್ಲಿ ಹಬ್ಬ ಮಾಡಲು ನಮಗೂ ಅವಕಾಶ ಕೊಡಿ ಎಂದಿದ್ದಕ್ಕೆ ಜಾತಿನಿಂದನೆಯಾಗಿದೆಯೆಂದು ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ, ಅಸ್ಪೃಶ್ಯತೆ ಆಚರಣೆ ನಡೆದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ. ಊರಿನಲ್ಲಿ ಶಾಂತಿಸಭೆ ನಡೆದಿದೆ. ಈಗ ಎಲ್ಲರೂ ಒಟ್ಟಾಗಿ ಹಬ್ಬ ಮಾಡಲು ಒಪ್ಪಿಕೊಂಡಿದ್ದಾರೆ” ಎಂದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಊರಿನ ಹಬ್ಬ ಮಾಡುವ ವಿಚಾರವಾಗಿ ನಡೆಸಿದ್ದ ಪೂರ್ವಭಾವಿ ಸಭೆಯಲ್ಲಿ ಜಾತಿನಿಂದನೆ ಮಾಡಿದ್ದರೆಂದು ತಿಳಿದುಬಂದಿತ್ತು. ಇದೀಗ ಊರಿನ ಎಲ್ಲ ಸಮುದಾಯಗಳನ್ನೂ ಒಟ್ಟಿಗೆ ಸೇರಿಸಿ ಶಾಂತಿಸಭೆ ನಡೆಸಿದ್ದೇವೆ. ಈಗ ಎಲ್ಲರೂ ಒಟ್ಟಿಗೆ ಸೇರಿ ಜಾತ್ರೆ ಮಾಡಲು ಒಪ್ಪಿಕೊಂಡಿದ್ದಾರೆ” ಎಂದು ಹೇಳಿದರು.
ಬನವಾಸಿಯ ದಲಿತ ನಿವಾಸಿ, ವಕೀಲ ಗೋಪಾಲ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹಬ್ಬ ಆಚರಣೆ ಕುರಿತು ಬನವಾಸಿ, ಜುಟ್ಟೇಗೌಡನ ವಲಸೆ ಹಾಗೂ ವಡೇರಹಳ್ಳಿ ಗ್ರಾಮದ ಮುಖಂಡರ ಸಭೆ ನಡೆದಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಸವರ್ಣೀಯ ಮುಖಂಡರು, ‘ಹಿಂದಿನಿಂದ ನಡೆದುಕೊಂಡು ಬಂದಿರುವಂತೆ ದಲಿತರು ಹಬ್ಬದಲ್ಲಿ ಭಾಗವಹಿಸಬಾರದು. ನಿಮ್ಮ ತಾತ, ಅಪ್ಪಂದಿರ ಕಾಲದಲ್ಲಿ ಹೇಗಿತ್ತೋ ಹಾಗೆಯೇ ಈಗಲೂ ನಡೆಯುತ್ತದೆಂದು ತಾಕೀತು ಮಾಡಿದ್ದರು. ಅದಕ್ಕೆ ಆಕ್ಷೇಪಿಸಿ ‘ಹೀಗೆ ಹೇಳುವುದು ಕಾನೂನಿಗೆ ವಿರುದ್ಧವಾಗುತ್ತದೆ. ನಾವೂ ಕೂಡ ನಿಮ್ಮೊಂದಿಗೆ ಸಾಮರಸ್ಯದಿಂದ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಿ’ ಅಂತ ಕೇಳಿದೆವು. ಇದರಿಂದ ಕೆರಳಿದ ಸವರ್ಣೀಯರು, ‘ಮಾದಿಗ ನನ್ನ ಮಕ್ಕಳಾ, ನಮಗೆ ಎದುರು ಮಾತನಾಡುತ್ತೀರಾ’ ಎಂದು ಜಾತಿನಿಂದನೆ ಮಾಡಿದರು. ಬಳಿಕ ನಾವೆಲ್ಲರೂ ಸಭೆಯಿಂದ ಹೊರಬಂದೆವು” ಎಂದು ಹೇಳಿದರು.
ಸಭೆ ಮುಗಿದ ಬಳಿಕ ಮೂರು ಗ್ರಾಮಗಳ ಸವರ್ಣೀಯ ಮುಖಂಡರು, ಬನವಾಸಿಯ 12 ದಲಿತ ಕುಟುಂಬಗಳ ಪೈಕಿ 11 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಬಳಿಕ ದಲಿತರು, ಅದೇ ಗ್ರಾಮದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವಿಕುಮಾರ್ ಸೇರಿದಂತೆ 7 ಮಂದಿ ಸವರ್ಣೀಯ ಮುಖಂಡರ ವಿರುದ್ಧ ತಹಶೀಲ್ದಾರ್ ಮತ್ತು ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಕೂಡ ಅಧಿಕಾರಿಗಳು ಈವರೆಗೆ ಎಫ್‌ಐಆರ್ ದಾಖಲಿಸಿಲ್ಲ. ಅಧಿಕಾರಿಗಳ ಸಮ್ಮುಖದಲ್ಲಿ ಶಾಂತಿಸಭೆ ನಡೆದಿದೆ. ಎಲ್ಲರೂ ಒಟ್ಟಾಗಿ ಸೇರಿ ಊರಿನ ಹಬ್ಬ ಮಾಡುವಂತೆ ಸವರ್ಣೀಯರ ಮನವೊಲಿಸಿದ್ದಾರೆ.
ಊರಿನ ಇನ್ನೊಂದು ದಲಿತ ಕುಟುಂಬ ಪೂರ್ತಿಯಾಗಿ ಸವರ್ಣೀಯರೊಟ್ಟಿಗೆ ಇದ್ದಾರೆ. ಅವರ ಮನೆ ಕೆಲಸಗಳಿಗೆ ಹೋಗುವುದು, ಹಣಕಾಸು ಬೇಕೆಂದರೆ ತೆಗೆದುಕೊಳ್ಳುವುದು ಸೇರಿದಂತೆ ಅವರು ಹೇಳಿದ ಕೆಲಸ ಮಾಡಿಕೊಂಡು ಇದ್ದಾರೆ. ಊರಿಂದ ನಮಗೆ ಬಹಿಷ್ಕಾರ ಹಾಕಿದಾಗ ಇವರೇ ಸಾರಿದ್ದಾರೆ. ಯಾಕೆ ಹೀಗೆ ಮಾಡಿದೆಯೆಂದು ಕೇಳಿದರೆ, ಅವರೆಲ್ಲ ಹೀಗೆ ಹೇಳಿಕೊಟ್ಟರು ಅದಕ್ಕೆ ಹಾಗೆ ಮಾಡಿದೆ ಅಂದು, ಬಳಿಕ ಪೊಲೀಸರು ಬಂದು ಕೇಳಿದಾಗ ನಾನೇನೂ ಹೇಳೇ ಇಲ್ಲ. ನನಗ್ಯಾರೂ ಹೇಳಿಕೊಡಲಿಲ್ಲವೆಂದು ಉಲ್ಟಾ ಹೊಡೆದನೆಂದು ಗೋಪಾಲ್ ಅವರು ಬೇಸರ ವ್ಯಕ್ತಪಡಿಸಿದರು.
“ಈಗಲೂ ಕೂಡ ದೂರು ನೀಡಿರುವುದು ಅಲ್ಲೇ ಇದೆ. ಬಂದು ವಾಸ್ ತೆಗೆದುಕೊಳ್ಳಿ ಅಂತ ಪೊಲೀಸರು ಕರೆ ಮಾಡುತ್ತಲೇ ಇದ್ದಾರೆ. ʼಅಸ್ಪೃಶ್ಯತೆ ಆಚರಣೆ ವಿರುದ್ಧ ನೀಡಿದ ದೂರು ಪ್ರತಿಯನ್ನು ಹಾಗೆಯೇ ಇಟ್ಟುಕೊಳ್ಳುವಂತಿಲ್ಲ. ಒಂದು ಎಫ್‌ಐಆರ್ ಹಾಕಬೇಕು, ಇಲ್ಲವೇ ಇತ್ಯರ್ಥ ಮಾಡಬೇಕು. ಇದೀಗ ಶಾಂತಿಸಭೆಗಳಾಗಿದೆಯಲ್ಲ ಕೇಸ್ ಹಿಂಪಡೆಯಿರಿʼ ಎಂದು ಪೊಲೀಸರು ಕರೆಯುತ್ತಿದ್ದಾರೆ. ಅಸ್ಪೃಶ್ಯತೆ ವಿರುದ್ಧ ನೀಡಿದ ದೂರುಗಳನ್ನು ಹೀಗೆ ರಾಜೀ ಮಾಡಿ ಕಳುಹಿಸಿದರೆ, ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಯಾವಾಗ?, ಜಾತಿ ದೌರ್ಜನ್ಯದಂತಹ ಅನಿಷ್ಟಪದ್ದತಿಯನ್ನು ಕಿತ್ತೊಗೆಯುವುದು ಯಾವಾಗ?” ಎಂದಿದ್ದಾರೆ.
ʼಘಟನೆ ಕುರಿತು ಸಂಬಂಧಪಟ್ಟವರು ಬಂದು ಹಾರೋಹಳ್ಳಿ ಠಾಣೆಗೆ ದೂರು ಕೊಟ್ಟರೆ ತಕ್ಷಣ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಸಂತ್ರಸ್ತರು ಬಂದು ದೂರನ್ನೇ ನೀಡದಿದ್ದರೆ ನಾವು ಪ್ರಕರಣ ದಾಖಲಿಸಿಕೊಳ್ಳುವುದಾದರೂ ಹೇಗೆ?ʼ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಶ್ರೀನಿವಾಸ ಗೌಡ ಒಂದು ಕಡೆ ಹೇಳುತ್ತಾರೆ. ಆದರೆ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದವರ ವಿರುದ್ಧ ದೂರು ಕೊಟ್ಟರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಇದೇ ಮೇ 15ರಂದು ದಲಿತ ಯುವಕರಿಬ್ಬರ ಜತೆಗೆ ಜಗಳ ತೆಗೆದ ಸವರ್ಣೀಯ ಯುವಕರ ಗುಂಪೊಂದು ಲಾಂಗ್ ಮತ್ತು ರಾಡುಗಳಿಂದ ಹಲ್ಲೆ ಮಾಡಿರುವ ಘಟನೆ ತಾಲೂಕಿನ ದೇವರಹಳ್ಳಿಯಲ್ಲಿ ನಡೆದಿತ್ತು. ಈ ಘಟನೆಯಲ್ಲಿ ನಾಗರಾಜ್ ಎಂಬವರ ಕೈ ಮತ್ತು ಅಂಜನ್ ಎಂಬುವರ ಕುತ್ತಿಗೆಗೆ ಲಾಂಗ್ ಏಟು ಬಿದ್ದಿದ್ದು, ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ದೊಡ್ಡಮರಳವಾಡಿಯ ಪವನ್ ಹರ್ಷ ಚಿಕ್ಕಮರಳವಾಡಿಯ ಹರೀಶ್ ಪುನೀತ್ ಗಣೇಶ್ ಹಾಗೂ ಇತರ ಮೂವರ ವಿರುದ್ಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿದ್ದೀರಾ? ಕೊಪ್ಪಳ | ಅಳಿಯದ ಅಸ್ಪೃಶ್ಯತೆ, ದೌರ್ಜನ್ಯ ಪ್ರಕರಣಗಳು; ಕ್ರಮ ಕೈಗೊಳ್ಳಬೇಕಾದವರಾರು?
ದೇವರಹಳ್ಳಿಯಲ್ಲಿ ಮೇ 15ರಂದು ಗ್ರಾಮದೇವತೆ ಜಾತ್ರೆ ನಡೆದಿತ್ತು. ಜಾತ್ರೆ ಮುಗಿಸಿ ಸಂಜೆ 6.30ರ ಸುಮಾರಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ದಲಿತ ಯುವಕರ ಜತೆ ಆರೋಪಿಗಳು ಜಗಳ ತೆಗೆದಾಗ ಗ್ರಾಮದ ಮುಖಂಡರು ಸಮಾಧಾನಪಡಿಸಿ ಕಳಿಸಿದ್ದರು. ಜಾತ್ರೆ ಸಲುವಾಗಿ ಊರಿಗೆ ಬಂದಿದ್ದ ನಾಗರಾಜ್ ಮತ್ತು ಅಂಜನ್ ಅದೇ ದಿನ ರಾತ್ರಿ 7.30ರ ಸುಮಾರಿಗೆ ಬೆಂಗಳೂರಿಗೆ ಕಾರಿನಲ್ಲಿ ಹೋಗುವಾಗ ಆರೋಪಿಗಳು ಮರಳವಾಡಿ ಬಳಿ ಅಡ್ಡ ಹಾಕಿದ್ದರು. ಕಾರಿನ ಗಾಜು ಒಡೆದು ಜಖಂಗೊಳಿಸಿದ್ದರು. ಲಾಂಗ್ ಚಾಕು ಹಾಗೂ ಕಬ್ಬಿಣದ ರಾಡುಗಳಿಂದ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದರು. ವಾರಕ್ಕೆ ಎರಡು ಅಸ್ಪೃಶ್ಯತೆ ಆಚರಣೆಗಳು ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಶಾಂತಿ ಸಂಧಾನ ಸಭೆಗಳಲ್ಲಿ ಬ್ಯುಸಿಯಾಗಿದ್ದಾರೆ.
ಜಾತಿವಿನಾಶ ಮಾಡುವಲ್ಲಿ ಪಾತ್ರವಹಿಸಬೇಕಾದ ಅಧಿಕಾರಿಗಳೇ ವಿಷಯಗಳು ಗೊತ್ತಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳದೆ, ಜಾಗೃತಿ ಮೂಡಿಸದೆ, ಮೇಲ್ನೋಟಕ್ಕೆ ಊರುಗಳಿಗೆ ಭೇಟಿ ನೀಡಿ, ಶಾಂತಿಸಭೆ, ಸಂಧಾನ, ರಾಜಿ ಮಾತುಕತೆ ಎನ್ನುತ್ತ ಅಸ್ಪೃಶ್ಯತೆಯನ್ನು ಜೀವಂತಿಕೆಯಿಂದ ಇಡುತ್ತಿದ್ದಾರೆ. ಕಾನೂನುಗಳನ್ನು ಸಮರ್ಪಕವಾಗಿ ಬಳಸದೆ ಮೂಲೆಗೆ ಸರಿಸುತ್ತಿದ್ದಾರೆ. ತಳಸಮುದಾಯಗಳನ್ನು ಮತ್ತೆ ಮತ್ತೆ ನಿಂದನೆಗೆ ಗುರಿ ಮಾಡುತ್ತಲೇ ಇದ್ದಾರೆ. ಎಲ್ಲಿಯವರೆಗೂ ಕಠಿಣ ಕಾನೂನು ಕ್ರಮಗಳಾಗಿ ಆರೋಪಿಗಳು ಶಿಕ್ಷೆ ಅನುಭವಿಸುವುದಿಲ್ಲವೋ ಅಲ್ಲಿಯವರೆಗೂ ಇಂಥ ಪ್ರಕರಣಗಳು ಮುನ್ನಲೆಗೆ ಬರುತ್ತಲೇ ಇರುತ್ತವೆ, ಅಧಿಕಾರಿಗಳು ಧಾವಿಸುತ್ತಲೇ ಇರುತ್ತಾರೆ. ಇಂಥ ಘಟನೆಗಳು ಕಸಿ ಮಾಡಿದ ಕಾಂಡಗಳು ಚಿಗುರೊಡೆಯುವಂತೆ ಹೆಮ್ಮರವಾಗಿ ಬೆಳೆಯುತ್ತಲೇ ಇರುತ್ತವೆ.
ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕಿನ ಅಂಥರವಲ್ಲಿಯಲ್ಲಿ ಕೂಡ ದಲಿತರನ್ನು ಹಬ್ಬದಿಂದ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ ಇದರ ಬಗ್ಗೆ ಪ್ರಕಟಿಸಿ