ಮುಸ್ಲಿಂ ಸಮುದಾಯ ಎಂಬ ಒಂದೇ ಕಾರಣಕ್ಕೆ ಹಲವಾರು ವರ್ಷಗಳಿಂದ ವಾಸವಾಗಿರುವ ಸ್ಥಳೀಯರ ಮನೆಗಳನ್ನು ಕೂಡ ಬುಲ್ಡೋಜರ್‌ಗಳಿಂದ ಕೆಡವಲಾಗಿದೆ. ತಾನು ದೊಡ್ಡ ಕಾರ್ಯಾಚರಣೆ ನಡೆಸಿರುವುದಾಗಿ ಹೇಳಿಕೊಂಡಿರುವ ಗುಜರಾತ್ ಸರ್ಕಾರ ಸತ್ಯಾಂಶಗಳನ್ನು ಪರಿಶೀಲಿಸದೆ ವಾಸವಿದ್ದ ಮನೆಗಳನ್ನು ಧ್ವಂಸ ಮಾಡಿದೆ.
ಕೆಲ ದಿನಗಳ ಹಿಂದೆ ಗುಜರಾತ್‌ನ ಅಹಮದಾಬಾದ್‌ನ ನಗರದ ಚಂದೋಲಾ, ಸಿಯಾಸತ್‌ನಗರ ಮತ್ತು ಬಂಗಾಳಿ ವಾಸ್ ಪ್ರದೇಶಗಳಲ್ಲಿ ಸ್ಥಳೀಯ ಪಾಲಿಕೆ ಅಕ್ರಮ ಬಾಂಗ್ಲಾದೇಶಿ ವಲಸಿಗರ ಕಾರ್ಯಾಚರಣೆಯ ಹೆಸರಿನಲ್ಲಿ 2,50,000 ಚದರ ಕಿ.ಮೀ.ಗಿಂತ ಹೆಚ್ಚಿನ ಪ್ರದೇಶದಲ್ಲಿದ್ದ 11 ಸಾವಿರಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ಮನೆಗಳನ್ನು ನೆಲಸಮಗೊಳಿಸಿದೆ. ಪಾಲಿಕೆಯ ಈ ನಿರ್ಧಾರದಿಂದ ಸಾವಿರಾರು ಬಡವರು ಸೂರು ಕಳೆದುಕೊಂಡು ಬೀದಿಯಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಏಪ್ರಿಲ್‌ನಲ್ಲೂ ಕೂಡ ಗುಜರಾತ್ ಸರ್ಕಾರ ಬಾಂಗ್ಲಾ ವಲಸಿಗರ ವಿರುದ್ಧ ಅತಿ ದೊಡ್ಡ ಬುಲ್ಡೋಜರ್ ಕಾರ್ಯಾಚರಣೆ ನಡೆಸಿರುವುದಾಗಿ ಹೇಳಿಕೊಂಡು ನೂರಾರು ಮುಸ್ಲಿಮರ ಸಣ್ಣಪುಟ್ಟ ಮನೆಗಳು ಹಾಗೂ ಗುಡಿಸಲುಗಳನ್ನು ಕೆಡವಿತ್ತು. ವಾಸ್ತವ ಏನಂದರೆ ಬಾಧಿತ ಕುಟುಂಬಗಳಲ್ಲಿ ಹೆಚ್ಚಾಗಿ ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದಿಂದ ವಲಸೆ ಬಂದ ಕಾರ್ಮಿಕರು, ಚಿಂದಿ ಆಯುವವರು ಆಗಿದ್ದರು.
ಕಾಶ್ಮೀರದ ಪಹಲ್ಗಾಮ್ ಘಟನೆ ನಡೆದ ನಂತರ ಗುಜರಾತ್‌ನಲ್ಲಿ 6,500ಕ್ಕೂ ಹೆಚ್ಚು ಜನರನ್ನು ಮುಸ್ಲಿಮರು ಎನ್ನುವ ಕಾರಣದಿಂದ ಅವರ ಪೌರತ್ವ ಸ್ಥಿತಿಯ ಪರಿಶೀಲನೆಗಾಗಿ ಬಂಧಿಸಲಾಗಿತ್ತು. ಆದಾದ ಕೆಲ ದಿನಗಳ ನಂತರ ಸಾವಿರಕ್ಕೂ ಹೆಚ್ಚು ಜನರನ್ನು ದಾಖಲೆರಹಿತ ವಲಸಿಗರೆಂದು ಆರೋಪಿಸಿ ಸೆರೆಮನೆಗೆ ತಳ್ಳಲಾಗಿತ್ತು. ಬಂಧಿತರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದರು. ಈಗಾಗಲೇ ಕಾರ್ಯಾಚರಣೆ ಸಂಬಂಧ ತುರ್ತು ವಿಚಾರಣೆ ನಡೆಸಬೇಕು ಎಂದು ಹಲವು ಅರ್ಜಿದಾರರು ಹೈಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ. ಮನೆಗಳನ್ನು ನಾಶಪಡಿಸಿರುವ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ ಎಂಬ ಒಂದೇ ಕಾರಣಕ್ಕೆ ಹಲವಾರು ವರ್ಷಗಳಿಂದ ವಾಸವಾಗಿರುವ ಸ್ಥಳೀಯರ ಮನೆಗಳನ್ನು ಕೂಡ ಬುಲ್ಡೋಜರ್‌ಗಳಿಂದ ಕೆಡವಲಾಗಿದೆ. ತಾನು ದೊಡ್ಡ ಕಾರ್ಯಾಚರಣೆ ನಡೆಸಿರುವುದಾಗಿ ಹೇಳಿಕೊಂಡಿರುವ ಗುಜರಾತ್ ಸರ್ಕಾರ ಸತ್ಯಾಂಶಗಳನ್ನು ಪರಿಶೀಲಿಸದೆ ಮುಸ್ಲಿಂ ಸಮುದಾಯದ ಮನೆಗಳನ್ನು ಮಾತ್ರ ಧ್ವಂಸ ಮಾಡಿದೆ.
ಭಾರತದ ಕಾನೂನಿನ ಪ್ರಕಾರ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನೆಲೆಗೊಂಡಿದ್ದರೆ ಸ್ಥಳೀಯ ಪುರಸಭೆ, ಮಹಾನಗರ ಪಾಲಿಕೆಯಂತಹ ಸಂಬಂಧಪಟ್ಟ ಪ್ರಾಧಿಕಾರಗಳು ನೋಟಿಸ್ ನೀಡಿ ನೆಸಮಗೊಳಿಸುವ ಕಾರ್ಯಾಚರಣೆ ಕೈಗೊಳ್ಳುತ್ತವೆ. ಅಕ್ರಮ ವಲಸಿಗ ಅಥವಾ ವಿದೇಶಿ ಸ್ಥಾನಮಾನವನ್ನು ಹೊಂದಿದ್ದಾನೆ ಎಂದು ನಿರ್ಧರಿಸಬೇಕಾದರೆ ವಿದೇಶಿಯರ ನ್ಯಾಯಮಂಡಳಿಯ ವ್ಯಾಪ್ತಿಗೆ ಬರುತ್ತದೆ. ಸ್ಥಳೀಯ ಅಥವಾ ರಾಜ್ಯ ಸರ್ಕಾರಗಳಿಗೆ ಈ ಕಾನೂನಿನ ಜಾರಿಗೊಳಿಸುವ ಅಧಿಕಾರವಿರುವುದಿಲ್ಲ. ಆದರೆ ಸರ್ಕಾರವು ಒಂದು ಸಮುದಾಯದ ವಿರುದ್ಧದ ದ್ವೇಷ ಹಾಗೂ ಅಪಪ್ರಚಾರದ ಉದ್ದೇಶದಿಂದ ಬುಲ್ಡೋಜರ್‌ಗಳಿಂದ ನೆಲಸಮಗೊಳಿಸಿದೆ.
ಇಂತಹ ವಲಸಿಗರು ಉದ್ಯೋಗ ಹಾಗೂ ಜೀವನ ರೂಪಿಸಿಕೊಳ್ಳುವ ಸಲುವಾಗಿ ದೇಶದ ವಿವಿಧ ರಾಜ್ಯಗಳಿಂದ ಅನ್ಯ ರಾಜ್ಯಗಳಿಗೆ ವಲಸೆ ಬರುತ್ತಾರೆ. ಇವರಲ್ಲಿ ಬಹುತೇಕರು ವಿವಿಧ ರೀತಿಯ ಕೆಲಸ ಕಾರ್ಯನಿರ್ವಹಿಸುತ್ತಾರೆ. ವಲಸಿಗರು ಕಡಿಮೆ ವೇತನಕ್ಕೆ ಕೆಲಸ ಮಾಡಲು ಸಿದ್ಧರಿರುತ್ತಾರೆ. ಮಾಲೀಕರು ಇವರಿಗೆ ಕಡಿಮೆ ಹಣ ನೀಡಿ ದುಪ್ಪಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ. ಸ್ಥಳೀಯರಾದರೆ ಹೆಚ್ಚು ಹಣ ಕೇಳುತ್ತಾರೆ. ಕೆಲಸದ ವಿಷಯದಲ್ಲೂ ಕೆಲವೊಮ್ಮೆ ಕಿರಿಕಿರಿ ಮಾಡುತ್ತಾರೆ. ಆದರೆ ವಲಸಿಗರು ನೀಡಿದಷ್ಟು ವೇತನಕ್ಕೆ ಕೆಲಸ ಮಾಡುತ್ತಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಂತೆ ಗುಜರಾತ್‌ನಲ್ಲೂ ಮುಸ್ಲಿಂ ಸಮುದಾಯದ ವಿರುದ್ದ ಮಾತ್ರ ಗುರಿ ಮಾಡಲಾಗುತ್ತಿದೆ.
ಉತ್ತರ ಪ್ರದೇಶದಿಂದ ಆರಂಭ
ದೌರ್ಜನ್ಯದ ‘ಬುಲ್ಡೋಜರ್ ನ್ಯಾಯ’ವನ್ನು ಮೊದಲು ಆರಂಭಿಸಿದ್ದು, ಉತ್ತರ ಪ್ರದೇಶದ ಸರ್ಕಾರ. 2017ರಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಭೂಗತ ಪಾತಕಿಗಳು, ಹಿಂಸಾಚಾರ ಪ್ರಕರಣಗಳು ಸೇರಿದಂತೆ ವಿವಿಧ ಪ್ರಕರಣಗಳ ಆರೋಪಿಗಳ ಆಸ್ತಿಗಳನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸುವ ಪ್ರವೃತ್ತಿ ಆರಂಭಿಸಿತು. ಆದರೆ ಇದನ್ನು ಮುಸ್ಲಿಂ ಸಮುದಾಯದವರ ಮೇಲೆಯೆ ಬಹುತೇಕ ಪ್ರಯೋಗಿಸಲಾಯಿತು. ನಂತರದಲ್ಲಿ ಬುಲ್ಡೋಜರ್ ಕಾರ್ಯಾಚರಣೆಯನ್ನು ಬಿಜೆಪಿ ಪಕ್ಷದ ಇತರ ರಾಜ್ಯ ಸರ್ಕಾರಗಳು ಒಂದು ಅಸ್ತ್ರವನ್ನಾಗಿ ಮಾಡಿಕೊಂಡವು. ಅಂಕಿಅಂಶಗಳ ಅನ್ವಯ ಬಿಜೆಪಿ ಆಡಳಿತದ ರಾಜ್ಯಗಳು ಕಳೆದ 8 ವರ್ಷಗಳಿಂದ ಬಹುತೇಕ ಮುಸ್ಲಿಮರಿಗೆ ಸೇರಿದ ನೂರಾರು ಕಟ್ಟಡಗಳನ್ನು ನೆಲಸಮಗೊಳಿಸಿವೆ. ನೆಲಸಮ ಕಾರ್ಯಾಚರಣೆಗಳಿಗೆ ಮುನ್ನ ಮುಸ್ಲಿಂ ಸಮುದಾಯದಿಂದ ಸರ್ಕಾರದ ವಿರುದ್ಧ ಪ್ರತಿಭಟನೆಗಳು, ಪೊಲೀಸರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿದ್ದವು. ಇವರ ವಿರುದ್ಧ ಸೇಡಿನ ಕ್ರಮವಾಗಿ ಅಮಾಯಕರ ಮನೆಗಳನ್ನು ಕಟ್ಟಡಗಳನ್ನು ನಾಶಗೊಳಿಸಲಾಗಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ‘ಬಲಿಷ್ಠರು’ ಬೆತ್ತಲಾಗುವ ಕಾಲ
ಬಿಜೆಪಿಯು ವಿವಿಧ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮುಸ್ಲಿಂ ಸಮುದಾಯದ ಜನರು ಸರ್ಕಾರದ ನೀತಿಯ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಅವರನ್ನು ಅಪರಾಧಿಯನ್ನಾಗಿಸಿ ಅವರಿಗೆ ಸಂಬಂಧಿಸಿದ ಕಟ್ಟಡಗಳನ್ನು ಧ್ವಂಸಗೊಳಿಸುವ ಸಂವಿಧಾನ ವಿರೋಧಿ ಕಾನೂನು ಜಾರಿಗೊಂಡಿದೆ. ಇಲ್ಲಿ ಸರ್ಕಾರವೇ ಆರೋಪಿಯ ಅಪರಾಧವನ್ನು ನಿರ್ಧರಿಸಿ ಶಿಕ್ಷೆಯನ್ನು ನೀಡುತ್ತಿದೆ. ಅಲ್ಪಸಂಖ್ಯಾತರಿಗೆ ಆಳುವ ಸರ್ಕಾರದ ಜನವಿರೋಧಿ ನೀತಿಯನ್ನು ಪ್ರಶ್ನಿಸುವ ಯಾವ ಅಧಿಕಾರವಿಲ್ಲ ಎನ್ನುವ ಸೂಚನೆಯನ್ನು ಬಲವಂತವಾಗಿ ನೀಡಲಾಗುತ್ತಿದೆ. ಮುಸ್ಲಿಂ ಸಮುದಾಯವನ್ನು ಮಾತ್ರ ಗುರಿ ಮಾಡಿರುವ ಬಿಜೆಪಿ ಸರ್ಕಾರಗಳು ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳ ಆಸ್ತಿಪಾಸ್ತಿಗಳನ್ನು ಮುಟ್ಟುತ್ತಿಲ್ಲ. ಧರ್ಮದ ಅಮಲನ್ನು ಮೈ-ಮನಗಳಿಗೇರಿಸಿಕೊಂಡು ಆಳುವವರು ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಒಂದು ಸಮುದಾಯದವರ ಆಸ್ತಿಗಳ ಮೇಲೆ ಮಾತ್ರ ಬುಲ್ಡೋಜರ್‌ಗಳನ್ನು ಹರಿಸಿ ಅವರ ಬದುಕನ್ನು ಸರ್ವ ನಾಶಮಾಡುತ್ತಿದ್ದಾರೆ.
ಈ ರೀತಿ ದೌರ್ಜನ್ಯ ನಡೆಸುತ್ತಿರುವ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳು ಬಹಳಷ್ಟು ಬಾರಿ ಛೀಮಾರಿ ಹಾಕಿವೆ ಹಾಗೂ ಎಚ್ಚರಿಕೆ ನೀಡಿವೆ. ಆದರೂ ಬಿಜೆಪಿ ನಾಯಕರು ಪಾಠ ಕಲಿತಿಲ್ಲ. ಆದರೆ ಬಹಿರಂಗವಾಗಿ ಸಮರ್ಥನೆ ಮಾಡಿಕೊಳ್ಳುತ್ತಾರೆ. ಕಾನೂನು ಉಲ್ಲಂಘಿಸುವವರಿಗೆ ಖಂಡಿತಾ ಶಿಕ್ಷೆಯಾಗಬೇಕು. ಪ್ರಕರಣಗಳ ವಿಚಾರಣೆ ನಡೆಸಿ ತಪ್ಪಿತಸ್ಥರು ಯಾರೆಂದು ತೀರ್ಮಾನ ಮಾಡಿ ಶಿಕ್ಷೆ ವಿಧಿಸಬೇಕಾಗಿರುವುದು ನ್ಯಾಯಾಲಯವೇ ಹೊರತು ಸರ್ಕಾರವಲ್ಲ. ಆದರೆ ಬಿಜೆಪಿ ಸರ್ಕಾರ ತನ್ನ ವಿರುದ್ಧ ಇರುವವರನ್ನು ಹಾಗೂ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ತೀರಿಸಿಕೊಳ್ಳಲು ಬುಲ್ಡೋಜರ್ ಕಾರ್ಯಾಚರಣೆ ಮಾಡುತ್ತಿದೆ. ಇಂತಹ ಕಾರ್ಯಾಚರಣೆಗಳು ಸಂವಿಧಾನದ ಮೂಲಸಿದ್ಧಾಂತಗಳಾದ ಸಮಾನತೆ, ನ್ಯಾಯ ಮತ್ತು ಹಕ್ಕುಗಳಿಂದ ವಂಚಿತರನ್ನಾಗಿ ಮಾಡುತ್ತವೆ. ಹೀಗಾಗಿ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಶಾಶ್ವತ ಪರಿಹಾರ ದೊರಕಿಸಿಕೊಡಬೇಕಿದೆ.
ಇದು ಮೊದಲಿಗೆ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಚಾಲ್ತಿಗೆ ಬಂತು. ಈಗ ಗುಜರಾತ್‌ನಲ್ಲಿ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ‘ಬುಲ್ಡೋಜರ್ ನ್ಯಾಯ’ವೇ ಬಿಜೆಪಿಯ ‘ಮಾದರಿ ನ್ಯಾಯ’ವಾಗಿ ಚಾಲ್ತಿಗೆ ಬಂದರೂ ಆಶ್ಚರ್ಯವಿಲ್ಲ.