ಅಮೆರಿಕ ವಿರುದ್ಧದ ಪ್ರತಿಭಟನೆ ಹತ್ತಿಕ್ಕಲು ಮತ್ತು ಹಾರ್ವರ್ಡ್ ವಿವಿಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಅಧ್ಯಕ್ಷ ಟ್ರಂಪ್ ಮುಂದಾಗಿದ್ದಾರೆ. ಇದರಿಂದ ಶೈಕ್ಷಣಿಕ ವಾತಾವರಣ ಕಲುಷಿತಗೊಂಡು ಅಮೆರಿಕ ಬೌದ್ಧಿಕ ಅಧಃಪತನದತ್ತ ಸಾಗುತ್ತಿದೆ.
ಕೇಂಬ್ರಿಡ್ಜ್‌ನ ಹಾರ್ವರ್ಡ್ ಯುನಿವರ್ಸಿಟಿ- ವಿಶ್ವದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದು. ಇಲ್ಲಿನ ಶೈಕ್ಷಣಿಕ ವಿಧಾನವು ಮುಕ್ತ ಚರ್ಚೆ, ಸ್ವತಂತ್ರ ಚಿಂತನೆ ಮತ್ತು ಆರೋಗ್ಯಕರ ಟೀಕೆಗೆ, ವಿಶ್ಲೇಷಣೆಗೆ ಒತ್ತು ನೀಡುತ್ತದೆ. ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಜಾಗತಿಕ ಮನ್ನಣೆಗೆ ಹೆಸರಾಗಿದೆ. ಇದು ಇತರ ದೇಶಗಳ ಶಿಕ್ಷಣ ವ್ಯವಸ್ಥೆಗಿಂತ ಭಿನ್ನವಾಗಿದೆ. ಜೊತೆಗೆ ಹಾರ್ವರ್ಡ್ ವಿವಿಯಲ್ಲಿ ಓದುವುದಕ್ಕೆ ಹೆಚ್ಚು ಹಣ ಮತ್ತು ಬುದ್ಧಿವಂತಿಕೆಯೂ ಬೇಕಾಗುತ್ತದೆ. ಇಲ್ಲಿ ಓದುವುದು ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ. ಇಲ್ಲಿ ಪದವಿ ಪಡೆದವರು ಪ್ರಪಂಚದ ನಾನಾ ಭಾಗಗಳಲ್ಲಿ, ನಾನಾ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಹಾರ್ವರ್ಡ್ ಯುನಿವರ್ಸಿಟಿ ಮೇಲೆ ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣ್ಣು ಬಿದ್ದಿದೆ. ದಿನಕ್ಕೊಂದು ನೋಟಿಸ್ ನೀಡಿ ಸಮಸ್ಯೆ ಸೃಷ್ಟಿಸುವ ಮೂಲಕ ಸರ್ಕಾರ ಮತ್ತು ವಿವಿ ಆಡಳಿತ ಮಂಡಳಿಯ ನಡುವಿನ ಸಂಘರ್ಷ ಮುಗಿಲು ಮುಟ್ಟಿದೆ.
ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯ ಎಡಪಂಥದ ಒಲವುಳ್ಳ ಸಂಸ್ಥೆ. ಹಾಗಾಗಿ ಇಲ್ಲಿಯ ಹೆಚ್ಚಿನಪಾಲು ವಿದ್ಯಾರ್ಥಿಗಳು ಜಾತ್ಯತೀತವಾದಿಗಳು. ಟ್ರಂಪ್ ತಳೆದ ನಿಲುವಿನಿಂದಾಗಿ ಇಸ್ರೇಲ್-ಹಮಾಸ್ ನಡುವಿನ ಯುದ್ಧದಲ್ಲಿ ಗಾಜಾ ಪ್ರದೇಶದಲ್ಲಿ ಮಾರಣಹೋಮ ನಡೆದಿದೆ ಎಂಬುದು ಅವರ ವಾದ. ಈ ಹಿನ್ನೆಲೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಅಮೆರಿಕಾದ ವಿರುದ್ಧ ಪ್ರತಿಭಟನೆ ನಡೆಸಿ, ಸ್ಲೋಗನ್ ಕೂಗಿದ್ದಾರೆ. ಈ ಕಾರಣಗಳೇ ಈಗ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳ ನಡುವಿನ ಸಂಘರ್ಷವನ್ನು ಹೆಚ್ಚಿಸಿವೆ.
ಅಮೆರಿಕ ವಿರುದ್ಧದ ಪ್ರತಿಭಟನೆ ಹತ್ತಿಕ್ಕಲು ಮತ್ತು ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆ ಎಂದು ಹೆಸರು ಗಳಿಸಿರುವ ಹಾರ್ವರ್ಡ್ ವಿವಿಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಅಧ್ಯಕ್ಷ ಟ್ರಂಪ್ ಮುಂದಾಗಿದ್ದಾರೆ. ಆ ನಿಟ್ಟಿನಲ್ಲಿ ಬೇಕೆಂತಲೇ ವಿಶ್ವವಿದ್ಯಾಲಯಕ್ಕೆ ಕೆಲವು ಸೂಚನೆಗಳನ್ನು ಕೊಡಲಾಗಿದೆ.
ಇದನ್ನು ಓದಿದ್ದೀರಾ?: ಟ್ರಂಪ್ ‘ಅವರದ್ದು ಅವರು ನೋಡಿಕೊಳ್ಳುತ್ತಾರೆ’ ಅಂದರೂ, ಮೋದಿ ಸುಮ್ಮನಿರುವುದೇಕೆ?
ಅಂತಾರಾಷ್ಟ್ರೀಯ ವಿದ್ಯಾರ್ಥಿ ವೀಸಾ ಹೊಂದಿರುವವರು ನಡೆಸುತ್ತಿರುವ ‘ಕಾನೂನುಬಾಹಿರ ಮತ್ತು ಹಿಂಸಾತ್ಮಕ’ ಚಟುವಟಿಕೆಗಳ ಕುರಿತ ಮಾಹಿತಿಯನ್ನು ಏಪ್ರಿಲ್ 30ರ ಒಳಗಾಗಿ ಸಲ್ಲಿಸುವಂತೆ ಅಮೆರಿಕ ಗೃಹ ಇಲಾಖೆಯು ಈಚೆಗೆ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಸೂಚಿಸಿತ್ತು. ಸರ್ಕಾರ ನೀಡಿದ್ದ ಸೂಚನೆಗಳನ್ನು ವಿಶ್ವವಿದ್ಯಾಲಯ ತಿರಸ್ಕರಿಸಿತ್ತು.
ಇದಕ್ಕೆ ಪ್ರತಿಯಾಗಿ ಟ್ರಂಪ್ ಸರ್ಕಾರ, ವಿಶ್ವವಿದ್ಯಾಲಯಕ್ಕೆ 2.7 ಮಿಲಿಯನ್ ಡಾಲರ್‌ಗೂ(ಅಂದಾಜು ₹23 ಕೋಟಿ) ಅಧಿಕ ಅನುದಾನ ನೀಡುವುದನ್ನು ಸರ್ಕಾರ ರದ್ದು ಮಾಡಿದೆ. ವಿವಿ ಕಡೆಯಿಂದ ಇದೇ ಉದ್ಧಟತನ ಮುಂದುವರೆದರೆ, ವಿವಿಗೆ ನೀಡಿರುವ ತೆರಿಗೆ ವಿನಾಯಿತಿ ಸೌಲಭ್ಯವನ್ನು ಕೂಡ ಹಿಂಪಡೆಯುವುದಾಗಿ ಟ್ರಂಪ್ ಸರ್ಕಾರ ಎಚ್ಚರಿಸಿದೆ.
ಹಾಗೆಯೇ, ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಪ್ರವೇಶಿಸುವ ಹಕ್ಕನ್ನು ನೀಡಲಾಗಿತ್ತು. ಆದರೆ ಈಗ ಟ್ರಂಪ್ ಆಡಳಿತವು ವಿಶ್ವವಿದ್ಯಾಲಯದಿಂದ ಆ ಹಕ್ಕನ್ನು ಕಸಿದುಕೊಂಡಿದೆ.
‘ಹಾರ್ವರ್ಡ್ ಇನ್ನು ಮುಂದೆ ವಿದೇಶಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಪ್ರಸ್ತುತ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ವರ್ಗಾವಣೆಯಾಗಬೇಕಾಗುತ್ತದೆ ಅಥವಾ ಅವರ ಕಾನೂನು ಸ್ಥಾನಮಾನವನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಯುಎಸ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ(DHS) ಹೇಳಿಕೆಯಲ್ಲಿ ತಿಳಿಸಿದೆ. ಹಾರ್ವರ್ಡ್‌ನ ವಿದ್ಯಾರ್ಥಿ ಮತ್ತು ವಿನಿಮಯ ಸಂದರ್ಶಕ ಕಾರ್ಯಕ್ರಮ(SEVP) ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಮ್ ಆದೇಶಿಸಿದ್ದಾರೆ.
ಇದರಿಂದಾಗಿ ಹಾರ್ವರ್ಡ್ ವಿವಿಯಲ್ಲಿ ಕಲಿಕೆಗೆ ಬಂದಿದ್ದ ವಿಶ್ವದಾದ್ಯಂತ ಸುಮಾರು 6,800 ವಿದ್ಯಾರ್ಥಿಗಳು ಅನಿಶ್ಚಿತತೆ ಎದುರಿಸುತ್ತಿದ್ದಾರೆ. ಈ ವಿವಿಯಲ್ಲಿ ಚೀನಾದ ವಿದ್ಯಾರ್ಥಿಗಳ ಸಂಖ್ಯೆ ಅತಿ ಹೆಚ್ಚಾಗಿದೆ. ನಂತರದ ಸ್ಥಾನಗಳಲ್ಲಿ ಕೆನಡಾ, ಭಾರತ, ದಕ್ಷಿಣ ಕೊರಿಯಾ, ಬ್ರಿಟನ್, ಜರ್ಮನಿ, ಆಸ್ಟ್ರೇಲಿಯಾ, ಸಿಂಗಪೂರ್ ಮತ್ತು ಜಪಾನ್ ದೇಶಗಳ ವಿದ್ಯಾರ್ಥಿಗಳಿದ್ದಾರೆ. ಹಾರ್ವರ್ಡ್ ವಿವಿಯ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಒಟ್ಟು ದಾಖಲಾತಿಯಲ್ಲಿ 27.2% ರಷ್ಟಿದ್ದಾರೆ. ಟ್ರಂಪ್ ಸರ್ಕಾರದ ಈ ನಿರ್ಧಾರದ ನಂತರ, ಅನೇಕ ವಿದ್ಯಾರ್ಥಿಗಳ ಅಧ್ಯಯನ, ವೀಸಾ ಮತ್ತು ಇಂಟರ್ನ್‌ಶಿಪ್ ಅಪಾಯದಲ್ಲಿದೆ.

ಟ್ರಂಪ್ ಸರ್ಕಾರದ ಈ ನಿರ್ಧಾರವು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವ ಕನಸು ಕಾಣುತ್ತಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳ ಭರವಸೆಯನ್ನೂ ಬರಿದು ಮಾಡಿದೆ.
ಈ ನಿರ್ಧಾರವು ಹಾರ್ವರ್ಡ್ ವಿವಿಯ ಪ್ರತಿಷ್ಠೆಯನ್ನು ಕುಗ್ಗಿಸಲಿದ್ದು, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ. ಈ ನಿರ್ಧಾರವು ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲದೆ ವಿಶ್ವವಿದ್ಯಾಲಯದ ಶಿಕ್ಷಕರಲ್ಲಿಯೂ ತೀವ್ರ ಕಳವಳವನ್ನು ಉಂಟುಮಾಡಿದೆ. ಹಾರ್ವರ್ಡ್‌ನಲ್ಲಿ ಬೋಧಿಸುವ ಶಿಕ್ಷಕರು, ವಿದೇಶಿ ವಿದ್ಯಾರ್ಥಿಗಳು ಹೊರಹೋಗುವುದರಿಂದ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಆರೋಪಿಸಿದ್ದಾರೆ.
ಅಷ್ಟೇ ಅಲ್ಲ, ಹಾರ್ವರ್ಡ್ ವಿಶ್ವವಿದ್ಯಾಲಯ ಈ ಅನುದಾನ ಸ್ಥಗಿತ ವಿರೋಧಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ಈ ಕ್ರಮವು ವಿಶ್ವವಿದ್ಯಾಲಯದ ಆಡಳಿತ ಮತ್ತು ಶೈಕ್ಷಣಿಕ ಸ್ವಾತಂತ್ರ್ಯದ ಮೇಲೆ ರಾಜಕೀಯ ಒತ್ತಡ ಹೇರಲು ತೆಗೆದುಕೊಂಡಿರುವ ಪ್ರಯತ್ನವಾಗಿದೆ ಎಂದು ಆರೋಪಿಸಿದೆ. ಇದರಿಂದಾಗಿ ಟ್ರಂಪ್ ಆಡಳಿತ ಮತ್ತು ಹಾರ್ವರ್ಡ್ ವಿವಿ ನಡುವಿನ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.
ಟ್ರಂಪ್ ಆಡಳಿತದ ಈ ನಿರ್ಧಾರವನ್ನು ಯುನಿವರ್ಸಿಟಿಯ ದಕ್ಷಿಣ ಏಷ್ಯಾದ ವಿದ್ಯಾರ್ಥಿ ಸಂಘ ಬಲವಾಗಿ ಖಂಡಿಸಿದೆ. ಇದು ‘ಅನಗತ್ಯ ನಿರ್ಧಾರ’ ಮತ್ತು ವಿವಿ ಮೇಲಿನ ‘ಘೋರ ದಾಳಿ’ ಎಂದಿದೆ. ಯುನಿವರ್ಸಿಟಿಯ ಆಡಳಿತ ತನ್ನ ಅಂತಾರಾಷ್ಟ್ರೀಯ ವಿದ್ಯಾರ್ಥಿ ಸಮುದಾಯಕ್ಕೆ ದೃಢವಾದ ಬೆಂಬಲ ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿದೆ.
ಇದನ್ನು ಓದಿದ್ದೀರಾ?: ಎಲ್ಲ ಸುಂಕ ರದ್ದುಗೊಳಿಸಲು ಭಾರತ ಒಪ್ಪಿದೆ ಎಂದ ಟ್ರಂಪ್, ಮತ್ತೆ ಶರಣಾದರೇ ಮೋದಿ?
‘ನಮ್ಮಲ್ಲಿ ಅನೇಕರು ಇಲ್ಲಿಗೆ ತಲುಪಲು ನಮ್ಮ ಜೀವನದುದ್ದಕ್ಕೂ ಶ್ರಮಿಸಿದ್ದೇವೆ. ಈಗ ನಾವು ವರ್ಗಾವಣೆ ಮತ್ತು ವೀಸಾ ಬಗ್ಗೆ ಚಿಂತಿತರಾಗಿದ್ದೇವೆ’ ಎಂದು ಆಸ್ಟ್ರಿಯಾದ ವಿದ್ಯಾರ್ಥಿ ಕಾರ್ಲ್ ಮೊಲ್ಡೆನ್ ಹೇಳಿದರೆ, ‘ಈ ನಿರ್ಧಾರವು ಪ್ರತಿಯೊಂದು ಹಂತದಲ್ಲೂ ಭಯಾನಕವಾಗಿದೆ’ ಎಂದು ಅರ್ಥಶಾಸ್ತ್ರ ಪ್ರಾಧ್ಯಾಪಕ ಜೇಸನ್ ಫರ್ಮನ್ ವಿಷಾದ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಲ್ಲದೆ ಹಾರ್ವರ್ಡ್ ಅನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂಬುದು ಎಲ್ಲ ಪ್ರಾಧ್ಯಾಪಕರ ಅಭಿಪ್ರಾಯವಾಗಿದೆ.
ಇನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ಈ ಆದೇಶವನ್ನು ‘ಕಾನೂನುಬಾಹಿರ’ವೆಂದು ಕರೆದು, ವಿದ್ಯಾರ್ಥಿಗಳಿಗೆ ಬೆಂಬಲಕ್ಕೆ ನಿಂತಿದ್ದಾರೆ. ಮುಂದೆ ಏನಾಗಬಹುದು ಎಂಬುದು ನ್ಯಾಯಾಲಯದ ಮಧ್ಯಸ್ಥಿಕೆ ಮತ್ತು ಟ್ರಂಪ್ ಸರ್ಕಾರದ ನಡೆ ಮೇಲೆ ಅವಲಂಬಿತವಾಗಿದೆ.
”ವಿಶ್ವದ ಪ್ರಖ್ಯಾತ ವಿಶ್ವವಿದ್ಯಾಲಯಗಳಲ್ಲಿ ಅಮೆರಿಕಾದ ಹಾರ್ವರ್ಡ್ ವಿವಿಯೂ ಒಂದು. 1936ರಲ್ಲಿ ಆರಂಭವಾದ ಈ ವಿವಿಯು ಇಂದಿಗೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆ. ಅಲ್ಲಿಯ ವಾತಾವರಣ ‘ವಿಶ್ವವಿದ್ಯಾಲಯ’ ಹೆಸರಿಗೆ ನ್ಯಾಯ ಒದಗಿಸಿದೆ. ಈಗ ಅಮೆರಿಕ ಅಧ್ಯಕ್ಷ ಟ್ರಂಪ್ ಮಹಾಶಯರು, ಈ ವಿವಿಗೆ ಬೇರೆ ದೇಶದ ವಿದ್ಯಾರ್ಥಿಗಳು ಇಲ್ಲಿಗೆ ಬರಬೇಕಿಲ್ಲ ಎಂದು ಹೇಳಿದ್ದಾರೆ. ಯಾವುದೋ ಕಾರಣ ಹುಡುಕಿ ವಿವಿ ಮೇಲೆ ದಂಡ ವಿಧಿಸಿದ್ದಾರೆ. ನಮ್ಮ ಪ್ರಧಾನಿಗಳೂ ಕೆಲವು ವರ್ಷಗಳ ಹಿಂದೆ ‘ನಮಗೆ ಹಾರ್ವರ್ಡ್ ಪದವೀಧರರು ಬೇಡ, ಹಾರ್ಡ್ ವರ್ಕಿಂಗ್ ಜನ ಬೇಕು’ ಎಂದು ವ್ಯಂಗ್ಯವಾಗಿ ಹೇಳಿದ್ದರು. ಬೌದ್ದಿಕ ಅಧಃಪತನ ಮತ್ತು ಮಾನವಿಕಗಳ ನಾಶ- ಈ ಶತಮಾನದ ಬಹುದೊಡ್ಡ ಬೆಳವಣಿಗೆ” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಿಸಿರುವುದು ಸೂಕ್ತವಾಗಿಯೇ ಇದೆ.

ಒಟ್ಟಿನಲ್ಲಿ, ಅಮೆರಿಕ ಎಂಬ ಬುದ್ಧಿವಂತರ ದೇಶ ಡೊನಾಲ್ಡ್ ಟ್ರಂಪ್ ಎಂಬ ಹುಚ್ಚನನ್ನು, ವ್ಯಾಪಾರಿಯನ್ನು ಆಯ್ಕೆ ಮಾಡಿಕೊಂಡು, ಪ್ರತಿ ಹಂತದಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಮಾನಕ್ಕೀಡಾಗುತ್ತಿದೆ. ಅಮೆರಿಕದವರ ಸ್ಥಿತಿಯೇ ಹೀಗಾದರೆ, ಭಾರತದ ಪ್ರಧಾನಿ ಮೋದಿಯವರು, ಭಾರತೀಯ ವಿದ್ಯಾರ್ಥಿಗಳ ಪರ ದನಿ ಎತ್ತುವುದು, ನ್ಯಾಯ ಒದಗಿಸುವುದು ಸಾಧ್ಯವೇ?

ಲೇಖಕ, ಪತ್ರಕರ್ತ