ವೆಸ್ಟ್ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ, ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಮೊದಲ ದಿನವೇ ಹಿಡಿತ ಸಾಧಿಸಿದರೆ, ಸ್ಪಿನ್ನರ್ ಆರ್. ಅಶ್ವಿನ್ ಒಂದೇ ಇನ್ನಿಂಗ್ಸ್ ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ.
5 ವಿಕೆಟ್ ಗೊಂಚಲು : ಜೇಮ್ಸ್ ಆ್ಯಂಡರ್‌ಸನ್ ಹಿಂದಿಕ್ಕಿದ ಅಶ್ವಿನ್
ಐಸಿಸಿ ಟೆಸ್ಟ್ ರ್‍ಯಾಂಕಿಂಗ್ ನಲ್ಲಿ ಅಗ್ರಸ್ಥಾನದಲ್ಲಿರುವ ಅಶ್ವಿನ್, ಈವರೆಗೆ ಒಟ್ಟು 33 ಬಾರಿ ಇನಿಂಗ್ಸ್‌ವೊಂದರಲ್ಲೇ ಐದು ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. ಆ ಮೂಲಕ ಹೆಚ್ಚು ಸಲ ಒಂದೇ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದಾರೆ.
32 ಸಲ ಈ ಸಾಧನೆ ಮಾಡಿದ್ದ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್‌ಸನ್ ಇದೀಗ 7ನೇ ಸ್ಥಾನಕ್ಕೆ ಜಾರಿದ್ದಾರೆ. ಶ್ರೀಲಂಕಾದ ನಿವೃತ್ತ ಬೌಲರ್ ಮುತ್ತಯ್ಯ ಮುರಳೀಧರನ್ 67 ಬಾರಿ ಪಡೆಯುವ ಮೂಲಕ ಈ ಸಾಧನೆಯ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾದ ನಿವೃತ್ತ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ 35 ಬಾರಿ ಈ ಸಾಧನೆ ಮಾಡಿ, ನಾಲ್ಕನೇ ಸ್ಥಾನದಲ್ಲಿದ್ದಾರೆ.
ತಂದೆ- ಮಗನನ್ನು ಔಟ್ ಮಾಡಿದ ವಿಶಿಷ್ಟ ದಾಖಲೆ
ಕ್ರಿಕೆಟ್‌ನಲ್ಲಿ ತಂದೆ ಮತ್ತು ಮಗನನ್ನು ಔಟ್ ಮಾಡಿದ ವಿಶಿಷ್ಟ ದಾಖಲೆಯ ಪಟ್ಟಿಗೂ ಆರ್. ಅಶ್ವಿನ್ ಸೇರ್ಪಡೆಗೊಂಡಿದ್ದಾರೆ.
12.4ನೇ ಓವರ್‍ನಲ್ಲಿ ಆಕರ್ಷಕ ಎಸೆತ ಎಸದೆ ಅಶ್ವಿನ್, ಎಡಗೈ ಬ್ಯಾಟರ್ ತಗ್‌ನರೇನ್ ಚಂದ್ರಪಾಲ್ ಅವರನ್ನು ಬೌಲ್ಡ್ ಮಾಡುವ ಮೂಲಕ ತಂದೆ- ಮಗನನ್ನು ಔಟ್ ಮಾಡಿದ ವಿಶ್ವದ ಐದನೇ ಬೌಲರ್ ಎನಿಸಿಕೊಂಡಿದ್ದಾರೆ. ತಗ್ನರೇನ್ ಚಂದ್ರಪಾಲ್ ವೆಸ್ಟ್‌ಇಂಡೀಸ್‌ನ ನಿವೃತ್ತ ಕ್ರಿಕೆಟಿಗ ಶಿವನರೇನ್ ಚಂದ್ರಪಾಲ್ ಅವರ ಮಗ.
700 ವಿಕೆಟ್ ಪಡೆದ ಭಾರತದ ಮೂರನೇ ಬೌಲರ್
ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ನ ಪ್ರಥಮ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಗಳಿಸಿದ ರವಿಚಂದ್ರನ್ ಅಶ್ವಿನ್, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 700 ವಿಕೆಟ್ ಗಳಿಸಿದ ಭಾರತದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಈ ಟೆಸ್ಟ್ ನಲ್ಲಿ ಮೂರನೇ ವಿಕೆಟ್ ರೂಪದಲ್ಲಿ ಅಲ್ಜರಿ ಜೋಸೆಫ್ (4) ಅವರನ್ನು ಔಟ್ ಮಾಡುವ ಮೂಲಕ 700 ವಿಕೆಟ್ ಸಾಧನೆ ಮಾಡಿದರು.
ತಮಿಳುನಾಡು ಮೂಲದ ಅಶ್ವಿನ್, ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಒಟ್ಟು ಈವರೆಗೆ 702 ವಿಕೆಟ್‌ಗಳನ್ನು ಪಡೆದಿದ್ದು, ಈ ಪಟ್ಟಿಯಲ್ಲಿ ಹರ್ಭಜನ್ ಸಿಂಗ್ ಅವರನ್ನು ಹಿಂದಕ್ಕಿ ಎರಡನೇ ಸ್ಥಾನಕ್ಕೇರಬೇಕಾದರೆ. ಕೇವಲ 6 ವಿಕೆಟ್‌ಗಳು ಬೇಕಿದೆ.
ಭಾರತದ ಪರ ಹರ್ಭಜನ್ ಸಿಂಗ್ 707 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದರೆ, ಅನಿಲ್ ಕುಂಬ್ಳೆ 953 ವಿಕೆಟ್‌ಗಳನ್ನು ಕಬಳಿಸಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.