ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿಗಳ ಗುತ್ತಿಗೆದಾರರಿಗೆ ಟೆಂಡರ್ ನಲ್ಲಿ ಮೀಸಲಾತಿ, ಎಸ್ ಸಿಪಿ, ಟಿಎಸ್ ಪಿ ಯೋಜನೆ ಸೇರಿ ಅನೇಕ ಯೋಜನೆಗಳ ಮೂಲಕ ಯಾರು ಮಾಡದಂತಹ ಕ್ರಾಂತಿಕಾರಿ ಕೆಲಸ ಮಾಡಿದ್ದಾರೆ.ಒಳಮೀಸಲಾತಿ ಜಾರಿಗು ಮುಂದಾಗಿದ್ದು ಸಾಮಾಜಿಕ ನ್ಯಾಯದ ಹರಿಕಾರಾಗಿದ್ದಾರೆ ಅವರೇ ನಮ್ಮ ಪಾಲಿಗೆ ಎರಡನೇ ಅಂಬೇಡ್ಕರ್ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಪುನರ್ ಉಚ್ಛರಿಸಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳಿಗೆ ಅನ್ಯಾಯ ಆಗದ ರೀತಿಯಲ್ಲಿ ಒಳಮೀಸಲಾತಿ ಜಾರಿಗೆ ಮುಂದಾಗಿದ್ದು, ದೇಶದಲ್ಲಿಯೇ ಜಾತಿಗಣತಿ ಕಾರ್ಯ ಕೈಗೊಂಡ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈಗಾಗಲೇ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಗಾಗಿ ಜಾತಿ ಜನಗಣತಿ ಸಮೀಕ್ಷೆ ಕೈಗೊಳ್ಳಲಾಗಿದೆ. ಆರಂಭದಲ್ಲಿ ತಾಂತ್ರಿಕ ದೋಷ, ಸಿಬ್ಬಂದಿಗೆ ಸೂಕ್ತ ತರಬೇತಿಯಿಲ್ಲದ ಕಾರಣದಿಂದ ವಿಳಂಬವಾಗಿತ್ತು. ಈಗ ಮೊಬೈಲ್ ಜಿಪಿಎಸ್ ಆಧಾರಿತ ಆ್ಯಪ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.
ಪರಿಶಿಷ್ಟ ಜಾತಿಯಲ್ಲಿರುವ 101 ಉಪಜಾತಿಯವರು ಸಮೀಕ್ಷೆಯಲ್ಲಿ ಭಾಗವಹಿಸಿ, ಉಪಜಾತಿ ಸೇರಿದಂತೆ ಎಲ್ಲ ವಿವರ ದಾಖಲಿಸಬೇಕು. ಇಂದೇ ಹುಟ್ಟಿದ ಮಗುವಿನಿಂದ ವಯಸ್ಸಾದ ಎಲ್ಲರೂ ಕೂಡ ಸಮೀಕ್ಷೆಯಲ್ಲಿ ಪಾಲ್ಗೊಂಡು ಅಗತ್ಯ ಮಾಹಿತಿ ಸಲ್ಲಿಸಬೇಕು’ ಎಂದು ಕೋರಿದರು.
ಒಳಮೀಸಲಾತಿ ಕಲ್ಪಿಸಬೇಕೆಂದು 30-35 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರಲಾಗಿದೆ. ಹೋರಾಟ ಒಂದೆಡೆಯಾದರೆ, ಸಮೀಕ್ಷೆಯಲ್ಲಿ ಸ್ವಯಂಪ್ರೇರಣೆಯಿಂದ ಪಾಲ್ಗೊಂಡು ನಮ್ಮ ವಿವರ ದಾಖಲಿಸುವುದು ಕೂಡ ಅಷ್ಟೇ ಮುಖ್ಯ. ಎಲ್ಲ ಮಾದಿಗರು ಸಮೀಕ್ಷೆಯಲ್ಲಿ ಮಾದಿಗರೆಂದು ನಮೂದಿಸಬೇಕು. ಮಾದಿಗ ಸಂಘಟನೆಗಳವರು, ಮುಖಂಡರು ಈ ಕುರಿತು ಮಾದಿಗರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಇ-ಟೆಂಡರ್ ನಲ್ಲಿ ಅವ್ಯವಹಾರ;ಪಿಡಿಒ ಅಮಾನತಿಗೆ ಆಗ್ರಹ
ಒಳಮೀಸಲಾತಿ ಜಾರಿಗೆ ಇದ್ದ ಅಡೆತಡೆಗೆ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ಜತೆಗೆ ಒಳಮೀಸಲಾತಿ ಜಾರಿಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಲಾಗಿತ್ತು. ಅದರಂತೆ ಈಗ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.ರಾಜ್ಯ ಸರ್ಕಾರ ಕಳೆದ ಅಕ್ಟೋಬರ್ ತಿಂಗಳಲ್ಲಿ ಜರುಗಿದ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿ ಆಗುವರೆಗೂ ಯಾವುದೇ ಕಾರಣಕ್ಕೂ ಹುದ್ದೆಗಳನ್ನು ನೇಮಕಾತಿ ಮಾಡೋದಿಲ್ಲ ಎಂದು ಆದೇಶವನ್ನು ಹೊರಡಿಸದೆ. ಅಲ್ಲದೇ ಬಡ್ತಿಯನ್ನು ಸಹ ನೀಡಿಲ್ಲ. ಸರ್ಕಾರ ಜಾತಿಗಣತಿ ಮಾಡುವುದು ಮಾತ್ರವಲ್ಲದೇ ಸರ್ಕಾರಿ ನೌಕರರ ಗಣತಿಯನ್ನೂ ಮಾಡುತ್ತಿದೆ. ಇಲ್ಲಿಯೂ ಪರಿಶಿಷ್ಟ ಜಾತಿಯ ಸರ್ಕಾರಿ ನೌಕರರ ಅಂಕಿಯನ್ನು ತಿಳಿಯುವ ಕೆಲಸ ಮಾಡುತ್ತಿದ್ದು, ಭವಿಷ್ಯದಲ್ಲಿ ಒಳಮೀಸಲಾತಿಗೆ ಸರ್ಕಾರಿ ನೌಕರರ ಅಂಕಿ ಅಂಶ ಸಹಕಾರ ಮಾಡಲಾಗುವುದು ಎಂದು ತಿಳಿಸಿದರು.
ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರ ಏಕ ಸದಸ್ಯ ಆಯೋಗದಿಂದ ನ್ಯಾಯ ಸಿಗುವ ವಿಶ್ವಾಸ ಇದೆ. ಪರಿಶಿಷ್ಟ ಜಾತಿಯಲ್ಲಿರುವ ಅನೇಕ ಜಾತಿಗಳು ರಾಜಕೀಯ, ಶೈಕ್ಷಣಿಕವಾಗಿ ಬಹಳ ಹಿಂದುಳಿದಿವೆ. ಸಮೀಕ್ಷೆ ಪೂರ್ಣಗೊಂಡ ನಂತರ ಒಳಮೀಸಲಾತಿಯನ್ನು ಸರ್ಕಾರ ಜಾರಿಗೆ ತರುವ ವಿಶ್ವಾಸವಿದೆ. ಆಗ ವಂಚಿತರಿಗೆ ನ್ಯಾಯ ದೊರಕಲಿದೆ ಎಂದು ಹೇಳಿದರು.
ಬೇಡ ಜಂಗಮರು ಪರಿಶಿಷ್ಟ ಜಾತಿಗೆ ನಮೂದಿಸಿಕೊಳ್ಳುತ್ತಿದ್ದು, ಜಂಗಮರೂ ಸಹ ಬೇಡರ ಜಂಗಮರೆಂದೇ ಹೇಳಿಕೊಳ್ಳುವ ಮೂಲಕ ಮೀಸಲಾತಿಯ ಲಾಭ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದರು.ಪರಿಶಿಷ್ಟ ಜಾತಿ ಪಟ್ಟಿಯಿಂದ ಬೇಡರ ಜಂಗಮರನ್ನು ಕೈ ಬಿಡುವಂತೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎ.ವಸಂತಕುಮಾರ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಿ, ಅಂಬಣ್ಣ ಆರೋಲಿಕರ್, ಪಾಲಿಕೆ ಸದಸ್ಯ ಜಯಣ್ಣ, ನರಸಿಂಹಲು ಮಾಡಗಿರಿ, ರಾಮಣ್ಣ ಇರಬಗೇರಾ, ಬಾಲಸ್ವಾಮಿ ಕೊಡ್ಲಿ ಉಪಸ್ಥಿತರಿದ್ದರು.
