ಪ್ರೀತಿಸುತ್ತಿದ್ದ ಯುವಕನ ಜೊತೆ ಯುವತಿ ಊರು ತೊರೆದಿದ್ದು, ಮರ್ಯಾದೆ ಹೋಯಿತೆಂದು ನೊಂದ ಯುವತಿಯ ಕುಟುಂಬಸ್ಥರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಬೂದನೂರು ನಿವಾಸಿಗಳಾದ ಮಹದೇವಸ್ವಾಮಿ, ಅವರ ಪತ್ನಿ ಮಂಜುಳಾ ಹಾಗೂ ಪುತ್ರಿ ಹರ್ಷಿತಾ ಮೃತ ದುರ್ದೈವಿಗಳು. ಮೂವರೂ ಕೆರೆಗೆ ಹಾರಿ ಮೃತಪಟ್ಟಿದ್ದಾರೆ.
ಮಹದೇವಸ್ವಾಮಿ ಹಿರಿಯ ಪುತ್ರಿ ಅರ್ಪಿತಾ ತನ್ನ ಪ್ರೇಮಿಯೊಂದಿಗೆ ಊರು ತೊರೆದು ಹೋಗಿದ್ದರು. ಮಗಳು ಊರು ತೊರೆದಿದ್ದರಿಂದ ಊರಿನಲ್ಲಿ ಮರ್ಯಾದೆ ಇರುವುದಿಲ್ಲವೆಂದು ಮಹದೇವಸ್ವಾಮಿ ಕುಟುಂಬ ಆತಂಕಗೊಂಡು ನೊಂದಿದ್ದರು. ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಮೂವರೂ ಕೆರೆಗೆ ಹಾರಿ ಸಾವನ್ನಪ್ಪಿದ್ದಾರೆ. ಅವರ ಬೈಕ್ ಮತ್ತು ಚಪ್ಪಲಿಗಳು ಕೆರೆಯ ಏರಿ ಮೇಲೆ ಪತ್ತೆಯಾಗಿದ್ದು, ಅನುಮಾನಗೊಂಡ ಗ್ರಾಮಸ್ಥರು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕೆರೆಯಲ್ಲಿ ಶೋಧ ನಡೆಸಿದ್ದು, ಮೂವರ ಮೃತದೇಹಗಳು ಪತ್ತೆಯಾಗಿವೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಎಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.