- ಇನ್ನು 15 ದಿನದಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದ ಬೆಂವಿವಿ ಕುಲಪತಿ
- ವಿಶ್ವವಿದ್ಯಾಲಯದ ಸುಮಾರು 52 ವಿಭಾಗದ 3 ಸಾವಿರ ವಿದ್ಯಾರ್ಥಿಗಳು ತರಗತಿಗೆ ಗೈರು
ಬೆಂಗಳೂರು ವಿಶ್ವವಿದ್ಯಾಲಯ ‘ನ್ಯಾಕ್ ಎ ಡಬಲ್ ಪ್ಲಸ್’ ಪಡೆದಿದ್ದರೂ ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಮೂಲ ಸೌಕರ್ಯಗಳನ್ನು ಒದಗಿಸದೇ, ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುವ ಹಾಗೂ ವಿದ್ಯಾರ್ಥಿ ಸಮೂಹವನ್ನು ದುರ್ಬಳಕೆ ಮಾಡಿಕೊಳ್ಳುತ್ತಾ ಮೋಸ ಮಾಡುತ್ತಿದೆ ಎಂದು ಬೆಂವಿವಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳಿಗೆ ನೀಡಬೇಕಾದ ಮೂಲ ಸೌಕರ್ಯಗಳ ಜತೆಗೆ ಇನ್ನೂ ಹಲವಾರು ಸೌಕರ್ಯಗಳನ್ನು ಒದಗಿಸುವ ಪ್ರಯತ್ನ ಮಾಡದೇ, ಆಡಳಿತಾಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ ಎಂದು ಆರೋಪಿಸಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟ ಬೆಂವಿವಿಯ ಜ್ಞಾನಭಾರತಿ ಆವರಣದಲ್ಲಿ ವಿದ್ಯಾರ್ಥಿಗಳು ಜುಲೈ 11ರಂದು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸುಮಾರು 52 ವಿಭಾಗದ 3 ಸಾವಿರ ವಿದ್ಯಾರ್ಥಿಗಳು ತರಗತಿಗಳಿಗೆ ಗೈರು ಹಾಜರಾಗಿದ್ದರು.
ವಿದ್ಯಾರ್ಥಿಗಳ ಬೇಡಿಕೆಗಳೇನು?
ಗ್ರಂಥಾಲಯದಲ್ಲಿ ಪುಸ್ತಕ, ಉತ್ತಮ ಹಾಸ್ಟೆಲ್ ವ್ಯವಸ್ಥೆ, ಸ್ಮಾರ್ಟ್ ಕ್ಲಾಸ್, ಸ್ಕಿಲ್ ಡೆವಲಪ್‌ಮೆಂಟ್ ಕ್ಲಾಸ್, ಉತ್ತಮ ಲ್ಯಾಬ್, ಸ್ವಿಮ್ಮಿಂಗ್ ಪೂಲ್ ದುರಸ್ತಿ, ಗುಣಮಟ್ಟದ ಶೌಚಾಲಯಗಳು, ಇಂಟರ್ನೆಟ್ ಅನುಕೂಲ, ಸ್ಪೋಕನ್ ಇಂಗ್ಲಿಷ್ ತರಗತಿಗಳು, ಕಂಪ್ಯೂಟರ್ ಕ್ಲಾಸ್, 24×7 ಗ್ರಂಥಾಲಯಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ಸೆಂಟರ್, ಉತ್ತಮ ಕ್ಯಾಂಟೀನ್ ವ್ಯವಸ್ಥೆ, ಸ್ಮಾರ್ಟ್ ಬೋರ್ಡ್, ಉತ್ತಮ ಲ್ಯಾಬ್ ಮತ್ತು ಉಪಕರಣಗಳು, ಕುಡಿಯಲು ಶುದ್ಧ ನೀರಿನ ವ್ಯವಸ್ಥೆ, ಸುಸಜ್ಜಿತ ಹೊರ ಕ್ರೀಡಾಂಗಣ ಹಾಗೂ ಒಳ ಕ್ರೀಡಾಂಗಣ ವ್ಯವಸ್ಥೆ ಮತ್ತು ಕ್ರೀಡಾ ಉಪಕರಣಗಳು ಉತ್ತಮ ದೈಹಿಕ ವ್ಯಾಯಾಮ ಶಾಲೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತಿಲಕನಗರದ ಎಂ.ಎಸ್ ಕಟ್ಟಡದ ದುರಸ್ಥಿ ಕಾಮಗಾರಿಗೆ ಸೂಚನೆ
“ಎಲ್ಲ ವಿದ್ಯಾರ್ಥಿಗಳಿಗೆ ಲಾಪ್‌ಟಾಪ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಇನ್ನು ಮೂರು ದಿನದಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವುದು. ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ನೀಡಲಾಗುವುದು ಹಾಗೂ ಇನ್ನೂ ಹದಿನೈದು ದಿನದೊಳಗೆ ವಿವಿಯಲ್ಲಿರುವ ಸಮಸ್ಯೆ ಬಗೆಹರಿಸಲಾಗುವುದು ಎಂದು ಕುಲಪತಿ ಭರವಸೆ ನೀಡಿದ್ದಾರೆ” ಎಂದು ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ಅವರು ಈ ದಿನ.ಕಾಮ್‌ಗೆ ತಿಳಿಸಿದರು.