ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ಇತ್ತೀಚೆಗೆ ಚಿತ್ತಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆಯನ್ನು ಖಂಡಿಸಿ, ಘಟನೆ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಬಿಜೆಪಿ ನಾಯಕರು ‘ಕಲಬುರಗಿ ಚಲೋ’ ನಡೆಸಿದ್ದಾರೆ.
ಶನಿವಾರ, ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿಗರು, “ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಈ ದುರ್ವರ್ತನೆ ತೋರಿದ್ದಾರೆ. ಪ್ರಿಯಾಂಕ್ ಖರ್ಗೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಮೇ 21ರಂದು ಬಿಜೆಪಿ ಆಯೋಜಿಸಿದ್ದ ತಿರಂಗಾ ಯಾತ್ರೆಯ ಸಂದರ್ಭದಲ್ಲಿ ಚಿತ್ತಾಪುರಕ್ಕೆ ತೆರಳಿದ್ದ ಛಲವಾದಿ ನಾರಾಯಣ ಸ್ವಾಮಿ ಅವರಿಗೆ ದಿಗ್ಭಂದನ ಹಾಕಿರುವುದು ಅಕ್ಷಮ್ಯ” ಎಂದು ಬಿಜೆಪಿಗರು ಹೇಳಿದ್ದಾರೆ.
ಪ್ರಿಯಾಂಕ್ ಅವರ ಬಗ್ಗೆ ನಾಯಿ ಎಂಬ ಪದ ಬಳಕೆ ಮಾಡಿದ್ದರು. ಇದರಿಂದ ಕೆರಳಿದ್ದ ಪ್ರಿಯಾಂಕ್ ಖರ್ಗೆ ಬೆಂಬಲಿಗರು ನಾರಾಯಣ ಸ್ವಾಮಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ನಾರಾಯಣ ಸ್ವಾಮಿ ಕಾರಿಗೆ ನೀಲಿ ಬಣ್ಣ ಎರಚಿದ್ದರು. ಅಷ್ಟೇ ಅಲ್ಲದೆ 4 ಗಂಟೆಗಳ ಕಾಲ ದಿಗ್ಭಂಧನ ಹಾಕಿದ್ದರು ಎಂದು ಆರೋಪಿಸಲಾಗಿದೆ.
“ನಮ್ಮ ಸರ್ಕಾರವಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು. ಆ ಸಮಯದಲ್ಲಿ ಕೊಡಗಿನಲ್ಲಿ ನಡೆದ ಸಣ್ಣ ಪ್ರತಿಭಟನೆ ವೇಳೆ ಸಿದ್ದರಾಮಯ್ಯರನ್ನು ಬಂಧಿಸಲಾಗಿತ್ತು. ಆದರೆ, ನಾವು ಅವರಿಗೆ ಸಂಪೂರ್ಣ ಭದ್ರತೆ ನೀಡಿದ್ದೆವು. ಗೌರವದಿಂದ ನಡೆಸಿಕೊಂಡಿದ್ದೆವು. ಆದರೆ ಈಗ, ಮಲ್ಲಿಕಾರ್ಜುನ ಖರ್ಗೆಯಂತಹ ಕಾಂಗ್ರೆಸ್ ನಾಯಕರು ಅಗೌರವವಾಗಿ ಹೇಳಿಕೆ ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಗೋವಿಂದ ಕಾರಜೋಳ, ಡಾ. ಸಿ.ಎನ್. ಅಶ್ವತ್ಥನಾರಾಯಣ್ ಭಾಗಿಯಾಗಿದ್ದರು.
ಅಂದಹಾಗೆ, ತಿರಂಗಾ ಯಾತ್ರೆ ಸಮಯದಲ್ಲಿ ಚಿತ್ತಾಪುರಕ್ಕೆ ಬಂದಿದ್ದ ಛಲವಾದಿ ನಾರಾಯಣಸ್ವಾಮಿ ಅವರು ಪ್ರಿಯಾಂಕ್ ಖರ್ಗೆ ಅವರನ್ನು ‘ನಾಯಿ’ ಎಂದು ನಿಂದಿಸಿದ್ದರು. ಇದರಿಂದ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ನಾರಾಯಣಸ್ವಾಮಿ ಅವರಿಗೆ ಮುತ್ತಿಗೆ ಹಾಕಿ, ಪ್ರತಿಭಟಿಸಿದ್ದರು.
ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿಗರು ಈ ಹಿಂದೆ ಅಕ್ಕಿ ಕಳ್ಳ, ಮಕ್ಕಳ ಹಾಲಿನ ಪೌಡರ್ ಕಳ್ಳನ ಪರ ಕಲಬುರಗಿಗೆ ಬಂದಿದ್ದರು. ಈಗ ನನ್ನ ವಿರುದ್ಧ ಸಂಚು ರೂಪಿಸಿಕೊಂಡು ಬಂದಿದ್ದಾರೆ” ಎಂದಿದ್ದಾರೆ.