ದೇಶದಲ್ಲಿ ಶೋಷಣೆ, ಅಸಮಾನತೆ, ಧರ್ಮಾಂಧತೆ ಮಿತಿಮೀರುತ್ತಿದ್ದು, ಸಂಘಟಿತರಾಗಿ ಮನುವಾದಿಗಳ ವಿರುದ್ಧ ಹೋರಾಡುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಬೀದರ್ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಬೀದರ್ ಜಿಲ್ಲಾ ಶಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 892ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʼಕೋಮುವಾದಿ, ಬಂಡವಾಳಶಾಹಿ ಶಕ್ತಿಗಳ ಆರ್ಭಟ ಹೆಚ್ಚುತ್ತಿದೆ. ನಮ್ಮೊಳಗಿನ ಭಿನ್ನತೆಗಳು ಬಿಟ್ಟು ವಿಶಾಲ ದೃಷ್ಟಿಕೋನದಿಂದ ಒಂದೇ ವೇದಿಕೆಗೆ ಬಂದು ಸಂಘಟಿತರಾಗಿ ಹೋರಾಡಬೇಕಿದೆʼ ಎಂದರು.
ʼಅನುಭವ ಮಂಟಪ ಆಗಬೇಕೆನ್ನುವುದು ಚನ್ನಬಸವ ಪಟ್ಟದ್ದೇವರು, ನಮ್ಮ ತಂದೆ ಮಾಜಿ ಸಚಿವ ಭೀಮಣ್ಣ ಖಂಡ್ರೆ ಸೇರಿದಂತೆ ಹಲವರ ಆಸೆಯಾಗಿತ್ತು. ಹಿರಿಯರ ಕನಸ್ಸಿನಂತೆ ನಮ್ಮ ಸರ್ಕಾರ ಆ ಕೆಲಸ ಮಾಡುತ್ತಿದೆ. ಈಗಾಗಲೇ ₹350 ಕೋಟಿ ಖರ್ಚಾಗಿದೆ. 750 ಕಂಬಗಳ ಮೇಲೆ ವಿವಿಧ ವೃತ್ತಿಗಳ ಶರಣರ ವಚನಗಳನ್ನು ಕೆತ್ತನೆ ಮಾಡಲಾಗುವುದು. ಎಲ್ಲ ಶರಣರ ಪರಿಚಯಿಸಲು ಶರಣ ಗ್ರಾಮ ಕೂಡ ಅಲ್ಲಿ ನಿರ್ಮಾಣವಾಗಲಿದೆʼ ಎಂದು ಹೇಳಿದರು.
ʼಯುವಕರಿಗೆ ಉತ್ತಮ ಸಂಸ್ಕಾರ ಕೊಟ್ಟು ದಾರ್ಶನಿಕರ ವಿಚಾರಗಳನ್ನು ಬಿತ್ತಬೇಕು. ಈ ದೃಷ್ಟಿಯಿಂದ ಅನುಭವ ಮಂಟಪದಲ್ಲಿ ಐಐಎಸ್‌ಸಿ ಸಂಶೋಧಕರ ನೆರವಿನೊಂದಿಗೆ ವೈಜ್ಞಾನಿಕವಾಗಿ ಇಷ್ಟಲಿಂಗ ಪೂಜೆಗೆ ತರಬೇತಿ ಕೊಡುವ ಕೇಂದ್ರ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಯುವಕರಲ್ಲಿ ಏಕಾಗ್ರತೆ ಮೂಡಿಸಲು ಯೋಜನೆ ರೂಪಿಸಲಾಗಿದೆ. ಯುವಕರಿಗೆ ಸಂಸ್ಕಾರ ಕೊಟ್ಟು, ಪ್ರೀತಿ, ಸಹೋದರತೆ ಬಿತ್ತುವ ಕೆಲಸ ಮಾಡಲಾಗುವುದುʼ ಎಂದು ತಿಳಿಸಿದರು.
ಉಪನ್ಯಾಸ ನೀಡಿದ ಸಾಹಿತಿ ಕಾವ್ಯಶ್ರೀ ಮಹಾಗಾಂವಕರ ವಿಶೇಷ ಉಪನ್ಯಾಸ ನೀಡಿದರು. ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಂಬಿಕಾ ಅಕ್ಕ ಮಾತನಾಡಿದರು.
ಹರಳಯ್ಯ ಸಮಾಜದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಟಿಳೇಕರ ಹಲಬರ್ಗಾ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನೆಯಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಗುರುನಾನಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಲಬೀರ್ ಸಿಂಗ್, ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಮರಾಠ ಸಮಾಜದ ಅಶೋಕ ಸೋನಜಿ, ಲಿಂಗಾಯತ ಸಮಾಜ ಯುವ ಒಕ್ಕೂಟದ ಅಧ್ಯಕ್ಷ ಆನಂದ ದೇವಪ್ಪ, ಮುಖಂಡರಾದ ಬಸವಕುಮಾರ ಪಾಟೀಲ, ಅನಿಲಕುಮಾರ ಬೆಲ್ದಾರ, ರಮೇಶ ಡಾಕುಳಗಿ, ದೇವಿದಾಸ ತುಮಕುಂಟೆ, ದಿಗಂಬರ ಮಡಿವಾಳ, ಜಗನ್ನಾಥ ತಡಪಳ್ಳಿ, ತುಕಾರಾಮ ಚಿಮಕೋಡೆ, ಡಾ.ರಾಜಶೇಖರ ಸೇಡಂಕರ, ಶಾಮರಾವ್ ಮೋರ್ಗಿಕರ್, ತಾನಾಜಿ ಸಗರ, ಸಂಗಯ್ಯ ಸುಲ್ತಾನಪೂರೆ, ಓಂರೆಡ್ಡಿ ಸೇರಿದಂತೆ ವಿವಿಧ ಸಮುದಾಯಗಳ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಬೀದರ್ | ಪತ್ರಿಕೋದ್ಯಮ ಅಧ್ಯಯನದಿಂದ ಸಾಮಾಜಿಕ ಹೊಣೆಗಾರಿಕೆ