ನಗರಕ್ಕೆ ಹೊಂದಿಕೊಂಡು ಸ್ಥಾಪನೆಗೆ ಸಿದ್ಧವಾದ ಬಿಎಸ್‌ಪಿಎಲ್ ಹಾಗೂ ಕಿರ್ಲೋಸ್ಕರ್, ಕಲ್ಯಾಣ ಸೇರಿ ಇತರೆ ಕಾರ್ಖಾನೆಗಳ ಆರಂಭ ಹಾಗೂ ವಿಸ್ತರಣೆ ವಿರೋಧಿಸಿ ನಡೆಸುತ್ತಿರುವ ಜನಾಂದೋಲನದ ಭಾಗವಾಗಿ ಹೋರಾಟ ತೀವ್ರಗೊಳಿಸಲು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ವತಿಯಿಂದ “ಪೇಂಟ್ ಅಭಿಯಾನ”ವನ್ನು ನಗರದ ಹಲವೆಡೆ ಆರಂಭಿಸಲಾಗಿದೆ.
ಕೊಪ್ಪಳದ ಬ್ರಿಡ್ಜ್ ಗೋಡೆ ಹಾಗೂ ಬಾಧಿತ ಪ್ರದೇಶಗಳ ಹಳ್ಳಿಗಳಲ್ಲಿ ಕಾರ್ಖಾನೆ ವಿರುದ್ಧ ಮತ್ತು ಅದರಿಂದ ಆಗುತ್ತಿರುವ ಹಾನಿಯ ಬಗ್ಗೆ ಜನಜಾಗೃತಿ ಮೂಡಿಸಲು ಈ ಪೇಂಟ್ ಅಭಿಯಾನ ನಡೆಸುತ್ತಿದ್ದು, ಗೋಡೆ ಬರಹಕ್ಕೆ ಬಣ್ಣಗಳನ್ನು ನಗರದ ಬಣ್ಣದ ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಬಣ್ಣ ಒದಗಿಸಿದ್ದಾರೆ.

ಜಿಲ್ಲೆಯ ಸುತ್ತಲೂ ಬೃಹತ್ ಕಾರ್ಖಾನೆಗಳು ಹೆಚ್ಚಾಗಿದ್ದು, ಅದರಿಂದ ಜಿಲ್ಲೆಯ ಪರಿಸರದ ಮೇಲೆ ಮಾರಕ ದುಷ್ಪರಿಣಾಮ ಬೀರುವುದರಿಂದ ʼಬಿಎಸ್‌ಪಿಎಲ್ ಕಾರ್ಖಾನೆಗಳು ತೊಲಗಬೇಕು ಇಲ್ಲವೇ ಕೊಪ್ಪಳ ತೊಲಗಬೇಕುʼ ಎಂಬ ಘೋಷ ವಾಕ್ಯದಡಿ ಗೋಡೆ ಬರಹಗಳನ್ನು ಮಾಡಲು ಜಿಲ್ಲ ಬಚಾವೋ ಆಂದೋಲನ ಸಮಿತಿ ನಿರ್ಧರಿಸಿ ನಗರದ ಕುಷ್ಟಗಿ ರಸ್ತೆಯಲ್ಲಿರುವ ಗವಿಸಿದ್ದಪ್ಪ ಚಿನ್ನೂರ್, ಮಾರುತಿ, ಶ್ರೀನಿವಾಸ್ ಪೇಂಟ್ಸ್ ವಿವಿಧ ಬಣ್ಣದ ಡಬ್ಬಿಗಳನ್ನು ಕೊಟ್ಟು ಹೋರಾಟಕ್ಕೆ ಬೆಂಬಲಿಸಿದರು.
ಇದನ್ನೂ ಓದಿ: ಕೊಪ್ಪಳ | ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಅಪಹರಣ ಪ್ರಕರಣ; ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ಅಭಿಯಾನದಲ್ಲಿ ಗೋಡೆ ಬರಹ ಬರೆಯಲು ಹಿರಿಯ ಚಿತ್ರ ಕಲಾವಿದ ರಾಜು ತೇರದಾಳ್ ಮತ್ತು ಕೃಷ್ಣ ಸೇರಿ ಇತರರು ಬರಹ ಬರೆಯಲು ಸಹಕಾರ ನೀಡಿದರು. ಪರಿಸರ ಹಿತರಕ್ಷಣಾ ವೇದಿಕೆ ಸದಸ್ಯರೂ ಸಹ ಇದರಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ಕೊಪ್ಪಳದಿಂದ ಕಾರ್ಖಾನೆಗಳನ್ನು ಓಡಿಸುವ ನಿಟ್ಟಿನಲ್ಲಿ ಆಂದೋಲನವನ್ನು ತೀವ್ರಗೊಳಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.

ಬಂಡಾಯ ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟ್ಟದೂರ್, ಕೆ. ಬಿ. ಗೋನಾಳ, ಬಸವರಾಜ ಶೀಲವಂತರ್, ಮಹಾಂತೇಶ್ ಕೊತಬಾಳ, ಮಂಜುನಾಥ ಜಿ. ಗೊಂಡಬಾಳ, ಶರಣು ಶೆಟ್ಟರ್, ಎಸ್.ಎ. ಗಫಾರ್, ಜ್ಯೋತಿ ಎಂ. ಗೊಂಡಬಾಳ, ಶರಣು ಗಡ್ಡಿ, ಮುದುಕಪ್ಪ ಹೊಸಮನಿ, ಚನ್ನಬಸಪ್ಪ ಅಪ್ಪಣ್ಣವರ ಹಾಗೂ ಇತರರು ಉಪಸ್ಥಿತರಿದ್ದರು.