ಪದೇ ಪದೇ ಬಿಜೆಪಿಯ ‘ಬಿ ಟೀಂ’ ಎಂದು ಜೆಡಿಎಸ್ ಅನ್ನು ಟೀಕಿಸುವ ಮುನ್ನ ಒಂದು ವಿಚಾರ ತಿಳಿದಿರಲಿ; ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ನಾನು ಅಂದು ಕೇಳಿದ್ದರೆ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಿದ್ದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡುವ ಸಂದರ್ಭದಲ್ಲಿ ಆಪರೇಷನ್ ಕಮಲದ ಪ್ರಸ್ತಾಪವಾಯಿತು. ಅಷ್ಟರಲ್ಲಿ ಮಧ್ಯಪ್ರವೇಶ ಮಾಡಿದ ಕುಮಾರಸ್ವಾಮಿ, “ಆಪರೇಷನ್ ಕಮಲ ಎಂಬುದು ಇತ್ತು. ಆದರೆ ಮಾಧ್ಯಮಗಳಲ್ಲಿ ಕಳೆದ ಕೆಲವು ದಿನಗಳಿಂದ ಆಪರೇಷನ್ ಹಸ್ತ ಎಂಬ ಸುದ್ದಿ ಬರುತ್ತಿದೆ” ಎಂದರು.
ಸಿದ್ದರಾಮಯ್ಯ ಇದಕ್ಕೆ ಪ್ರತಿಕ್ರಿಯಿಸಿ, “ಏಕೆ ಅವರ ಜೊತೆ ಸೇರಿಕೊಂಡಿದ್ದೀರಾ ಕುಮಾರಸ್ವಾಮಿ ಅವರೇ” ಅವರನ್ನೇ ಪ್ರಶ್ನಿಸಿದರು. ಕುಮಾರಸ್ವಾಮಿ ಉತ್ತರಿಸಿ, “ಪ್ರಧಾನಿ ನರೇಂದ್ರ ಮೋದಿ ಅವರು 2019ರಲ್ಲಿ ನನ್ನ ಜೊತೆ ಒಂದೂವರೆ ಗಂಟೆ ಚರ್ಚೆ ಮಾಡಿದ್ದರು. ಅವರ ಮಾತು ಕೇಳಿದ್ದರೆ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಿದ್ದೆ” ಎಂದರು.
ಕಳೆದ ಲೋಕಸಭಾ ಚುನಾವಣೆಯ ವೇಳೆ ಪ್ರಧಾನಿ ಮೋದಿ ಅವರು ನನ್ನನ್ನು ಕರೆದು ಚರ್ಚಿಸಿದ್ದರು. ಮುಂದಿನ ನಾಲ್ಕು ವರ್ಷ ಯಾವುದೇ ಸಮಸ್ಯೆ ಇರಲ್ಲ, ಸರ್ಕಾರಕ್ಕೆ ಬೆಂಬಲ ಕೊಡುತ್ತೇವೆ ಎಂದು ಆಹ್ವಾನ ನೀಡಿದ್ದರು. ಅವರ ಮಾತು ಕೇಳದೆ ತಪ್ಪು ಮಾಡಿದೆ. ಕಾರಣ ಕಪ್ಪು ಚುಕ್ಕೆ ಬರಬಾರದು ಎಂಬುದಕ್ಕೆ” ಎಂದು ಹೇಳಿದರು.