ಪಂಚಾಯತ್ ರಾಜ್ ಇಲಾಖೆ ಬಗ್ಗೆ ಸಂಪೂರ್ಣ ತಿಳಿಯಲು ನನಗೆ ಇನ್ನೂ ನಾಲ್ಕರಿಂದ ಐದು ತಿಂಗಳು ಬೇಕಾಗಬಹುದು. ಅದಕ್ಕಾಗಿ ಎಲ್ಲ ಸದಸ್ಯರು ಸಹಕರಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ವಿಧಾನ ಪರಿಷತ್ತಿನಲ್ಲಿ ಗುರುವಾರ ಮಾತನಾಡಿದ ಅವರು, ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ಸರ್ಕಾರ ಕೂಡಲೇ ಹೆಚ್ಚಿನ ಲೈವ್ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸಿಕೊಂಡು ತೆರಿಗೆ ಸಂಗ್ರಹದ ಬಗ್ಗೆ ಗಮನ ಹರಿಸುತ್ತದೆ ಎಂದರು.
ಪಿಡಿಒ, ಸಿಬ್ಬಂದಿಗಳ ಕೊರತೆಗೆ ಸಂಬಂಧಿಸಿದಂತೆ ಈಗಾಗಲೇ ನೇಮಕಾತಿ ಕರೆದಿದ್ದೇವೆ. ಆ ಮೂಲಕ ತಕ್ಷಣವೇ ಪಂಚಾಯಿತಿಗಳ ಸುಧಾರಣೆ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಹೇಳಿದರು.
ಕಾಲ ಕಾಲಕ್ಕೆ ಪಂಚಾಯಿತಿ ಸಭೆಗಳನ್ನು ನಡೆಸಿ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಮೆಟಿರಿಯಲ್ ರಿಕವರಿ ಸೌಲಭ್ಯವನ್ನು ಪ್ರತೀ ಜಿಲ್ಲೆಗಳಲ್ಲೂ ಅಳವಡಿಸಲು ಈಗಾಗಲೇ ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಪಾರದರ್ಶಕತೆಯಿಂದ ನಡೆದುಕೊಳ್ಳುತ್ತೇವೆ. ಮುಂದಿನ ವರ್ಷದಲ್ಲಿ ಪಿಡಿಒಗಳ ಕೌನ್ಸೆಲಿಂಗ್ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ಅಧಿಕಾರಿ ಸಿಬ್ಬಂದಿಗಳಿಗೆ ತರಬೇತಿ ಕೊಡುವ ವ್ಯವಸ್ಥೆಯನ್ನು ಎಲ್ಲ ಪಂಚಾಯಿತಿಗಳಲ್ಲಿ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ನನ್ನ ಮೇಲೆ ಲಾರಿ ಹತ್ತಿಸುತ್ತೇನೆಂದು ಬೆದರಿಕೆ ಹಾಕುತ್ತಿದ್ದಾರೆ: ಸರ್ಕಾರದ ರಕ್ಷಣೆ ಕೋರಿದ ಶಾಸಕಿ ಕರೆಮ್ಮ
ಗ್ರಾಮ ಒನ್ ಮತ್ತು ಇ-ಬೆಳಕು ಯೋಜನೆಯ ಕಾರ್ಯಕ್ಕೂ ಹೆಚ್ಚಿನ ತರಬೇತಿ ನೀಡುತ್ತೇವೆ. ಪಂಚಾಯಿತಿಗಳಲ್ಲಿನ ಕೆಲ ಭ್ರಷ್ಟಾಚಾರದ ಬಗ್ಗೆ ಹೆಚ್ಚಿನ ತನಿಖೆ ಮಾಡಿಸಿ ಗ್ರಾಮೀಣ ಜನರ ಅಭಿವೃದ್ಧಿಗೆ ಸದಾ ಶ್ರಮಿಸುತ್ತೇನೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಸಲಹೆ ನನಗೆ ನೀವು ನೀಡಬೇಕು ಎಂದು ಮನವಿ ಮಾಡಿದರು.
ಪಂಚಾಯತ್ ರಾಜ್ ಇಲಾಖೆಯಲ್ಲಿ ಸಬಲೀಕರಣ ಮತ್ತು ಸರಳೀಕರಣಕ್ಕೆ ಸಾಕಷ್ಟು ಶ್ರಮಿಸಿ ಪಂಚಾಯತ್ ವ್ಯವಸ್ಥೆ ಸುಧಾರಣೆ ತರುತ್ತೇನೆ ಎಂದು ಭರವಸೆ ನೀಡಿದರು.