ಉಡುಪಿಯ ಶ್ರೀ ಕೃಷ್ಣ ಮಠದ ರಥಬೀದಿಯಿಂದ, ಸೋದೆ ವಾದಿರಾಜ ಮಠದ ಭೂವರಾಹ ಕಾಂಪ್ಲೆಕ್ಸ್ ಸನಿಹದಿಂದ, ಹಾಗೂ ಕಾಣಿಯೂರು ಮಠದ ಹಿಂಬಾಗದಿಂದ ಮಳೆ ನೀರು ಸಾಗುವ ತೋಡು ಮದ್ವ ಸರೋವರದ ಪಕ್ಕದಿಂದ ಗೀತಾ ಮಂದಿರದ ಎದುರಿನಿಂದ ಹಾದುಹೋಗಿ ಮುಕುಂದ ಕೃಪಾ ಶಾಲೆಯ ಸನಿಹದಿಂದ ಕಲ್ಸಂಕದಲ್ಲಿ ಹಾದುಹೋಗುವ ಇಂದ್ರಾಣಿ ನದಿಯನ್ನು ಸೇರಿ ಆ ಮೂಲಕ ಮಳೆನೀರು ಕಡಲನ್ನು ಸೇರುತ್ತದೆ.
ಪ್ರಸ್ತುತ ತೋಡಿನಲ್ಲಿ ಹೂಳು ತುಂಬಿಕೊಂಡಿದ್ದು, ಕಲ್ಲುಗಳು ಬಿದ್ದುಕೊಂಡಿವೆ. ಕೆಲವು ಕಡೆಗಳಲ್ಲಿ ತೋಡಿನ ದಂಡೆಯ ಮೇಲೆ ಕಾನೂನು ಬಾಹಿರವಾಗಿ ನಿರ್ಮಾಣ ಕಾಮಗಾರಿಗಳು ನಡೆಯುತ್ತಿರುವುದು ಕಂಡುಬಂದಿದೆ. ಶ್ರೀಕೃಷ್ಣ ಮಠದ ಪರಿಸರವು ತಗ್ಗು ಪ್ರದೇಶವಾಗಿದ್ದು, ಮಳೆಗಾಲದಲ್ಲಿ ಎತ್ತರ ಪ್ರದೇಶದ ಮಳೆ ನೀರು ಈ ಪ್ರದೇಶದಲ್ಲಿ ಹರಿದು ನಗರಸಭೆಯ ತೋಡಿನ ಮೂಲಕ ಕಲ್ಸಂಕ ಇಂದ್ರಾಣಿ ನದಿ ಸೇರುವುದು ಸಮರ್ಪಕ ವ್ಯವಸ್ಥೆಯಾಗಿತ್ತು, ಈವಾಗ ನಗರಸಭೆಯ ತೋಡಿನಲ್ಲಿ ಹೂಳು ತುಂಬಿರುವುದು ಅಕ್ರಮಗಳು ನಡೆದಿರುವುದರಿಂದ ಬೈಲಕೆರೆ, ಬಡಗುಪೇಟೆ, ಬುಡ್ನಾರು, ಕಲ್ಸಂಕ, ಶ್ರೀಕೃಷ್ಣ ಮಠದ ಪರಿಸರ, ರಥಬೀದಿಗೆ ನೆರೆಭೀತಿ ಎದುರಾಗಿದೆ. ಪರಿಸರವು ಜನವಸತಿ ಪ್ರದೇಶವಾಗಿದ್ದು ಮುಳುಗಡೆ ಭೀತಿಯಿಂದ ಸ್ಥಳೀಯರು ಆತಂಕಗೊಳಗಾಗಿದ್ದಾರೆ. ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನಗಳು ಕೊಳಚೆ ನೀರಿನಿಂದ ಜಲಾವೃತಗೊಳ್ಳುವ ಸಾಧ್ಯತೆ ಇದೆ.
ಅಷ್ಟಮಠದ ಸ್ವಾಮೀಜಿಯವರು ಶ್ರೀ ಕೃಷ್ಣ ಮಠದ ಪರಿಸರವನ್ನು ನೆರೆಯಿಂದ ರಕ್ಷಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ದ್ವನಿ ಎತ್ತಬೇಕಾಗಿದೆ. ಜಿಲ್ಲಾಡಳಿತ, ನಗರಾಡಳಿತ ಸೂಕ್ತ ಕ್ರಮವನ್ನು ಜರುಗಿಸಬೇಕಾಗಿದೆ ಎಂದು ನಗರಸಭೆಯ ಮಾಜಿ ಸದಸ್ಯ ನಿತ್ಯಾನಂದ ಒಳಕಾಡುವರು ವಿನಂತಿಸಿಕೊಂಡಿದ್ದಾರೆ. ಸಂಭವನೀಯ ನೆರೆಯಿಂದ ರಕ್ಷಿಸುವಂತೆಯೂ ಸಾರ್ವಜನಿಕರು ಆಗ್ರಹಿಸಿದ್ದಾರೆ.