ಛತ್ತೀಸ್‌ಘಢದ ಶಿಕ್ಷಣ ಸಚಿವ ಪ್ರೇಮಸಾಯಿ ಸಿಂಗ್ ಟೇಕಮ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ನಿರ್ದೇಶನದಂತೆ ತಾವು ರಾಜೀನಾಮೆ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಸಂಪುಟ ಪುನರ್ ರಚನೆ ಮಾಡಲಿದ್ದಾರೆ ಎಂದು ಕಳೆದ ಕೆಲವು ದಿನಗಳಿಂದ ಸುದ್ದಿ ಹಬ್ಬಿದೆ. ಇದರ ನಡುವೆಯೇ ಪ್ರೇಮಸಾಯಿ ಸಿಂಗ್ ಟೇಕಮ್ ಅವರ ರಾಜೀನಾಮೆ ನೀಡಿದ್ದಾರೆ. ಪ್ರತಾಪ್‌ಪುರ್‌ನ ಶಾಸಕರಾಗಿದ್ದ ಪ್ರೇಮಸಾಯಿ ಸಿಂಗ್, ಶಿಕ್ಷಣದ ಜೊತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಹಾಗೂ ಸಹಕಾರ ಖಾತೆಗಳನ್ನೂ ಹೊಂದಿದ್ದರು.
‘ಸಂಪುಟದಲ್ಲಿ ಯಾರನ್ನು ಇಟ್ಟುಕೊಳ್ಳಬೇಕು, ಯಾರನ್ನು ತೆಗೆಯಬೇಕು ಎನ್ನುವುದು ಮುಖ್ಯಮಂತ್ರಿಯ ವಿವೇಚನೆಗೆ ಬಿಟ್ಟ ವಿಚಾರ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ನನ್ನ ಪದವಿಗೆ ರಾಜೀನಾಮೆ ನೀಡಿದ್ದೇನೆ’ ಎಂದು ಪ್ರೇಮಸಾಯಿ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಸಂಪುಟ ಪುನರ್ ರಚನೆ ಎಂಬುದು ಒಂದು ಸಹಜ ಪ್ರಕ್ರಿಯೆ ಎಂದೂ ಅವರು ಹೇಳಿದ್ದಾರೆ. ತಾವು ಇದೇ ವರ್ಷದ ಕೊನೆಗೆ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಯ ಕೆಲಸವನ್ನು ನಿರ್ವಹಿಸುವುದಾಗಿ ಅವರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ: ಅಧಿವೇಶನ | ಮೋದಿ ಮಾತು ಕೇಳಿದ್ದರೆ ಐದು ವರ್ಷ ಸಿಎಂ ಆಗಿರುತ್ತಿದ್ದೆ: ಎಚ್ ಡಿ ಕುಮಾರಸ್ವಾಮಿ
ಈ ಬಗ್ಗೆ ಪ್ರಕಟಣೆ ನೀಡಿರುವ ಮುಖ್ಯಮಂತ್ರಿ ಭೂಪೇಶ್ ಬಘೇಲ್, ತಾವು ಪ್ರೇಮಸಾಯಿ ಸಿಂಗ್ ಟೇಕಮ್ ಅವರ ರಾಜೀನಾಮೆಯನ್ನು ರಾಜ್ಯಪಾಲರಿಗೆ ರವಾನಿಸಿರುವುದಾಗಿ ತಿಳಿಸಿದ್ದಾರೆ.
ನಿನ್ನೆಯಷ್ಟೇ ಛತ್ತೀಸ್‌ಘಢ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಮೋಹನ್ ಮಾರ್ಕಮ್ ಅವರನ್ನು ತೆಗೆದು ಅವರ ಜಾಗದಲ್ಲಿ ಸಂಸದ ದೀಪಕ್ ಬೈಜ್ ಅವರನ್ನು ಕೂರಿಸಲಾಗಿತ್ತು. ಮೋಹನ್ ಮಾರ್ಕಮ್ ಅವರಿಗೆ ಸಚಿವ ಪದವಿ ನೀಡಲಾಗುತ್ತದೆ ಎನ್ನುವ ಸುದ್ದಿಗಳಿವೆ.