ಯಾವುದೋ ವಿಷಯಕ್ಕೆ ಜಗಳ ನಡೆದಾಗ ನೀನ್ಯಾಕೆ ಸಾಯಬಾರದು ಎಂದು ಪತಿ ಹೇಳಿದ ಕಾರಣಕ್ಕೆ 22 ವರ್ಷದ ಮಹಿಳೆ ವಿಡಿಯೋ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ. ಸುಮಾರು ನಾಲ್ಕು ತಿಂಗಳ ಹಿಂದೆ ವಿವಾಹ ನಡೆದಿತ್ತು.
ಮೃತ ಮಹಿಳೆಯನ್ನು ಅಮ್ರೀನ್ ಎಂದು ಗುರುತಿಸಲಾಗಿದೆ. ಅಮ್ರೀಮ್ ಪ್ರೇಮ ವಿವಾಹವಾಗಿದ್ದು ಆಕೆಯ ಪತಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ. ಆಕೆ ಮೊರಾದಾಬಾದ್ನಲ್ಲಿ ತನ್ನ ಮಾವ, ಅತ್ತಿಗೆಯೊಂದಿಗೆ ವಾಸವಾಗಿದ್ದಳು. ವಿಡಿಯೋ ಮಾಡಿಕೊಂಡು ತನ್ನ ಮಾವ, ಅತ್ತಿಗೆ, ಪತಿಯ ಒತ್ತಡದಿಂದ ಈ ನಿರ್ಧಾರ ಮಾಡಿಕೊಂಡಿದ್ದೇನೆ ಎಂದು ಹೇಳಿ ಅಮ್ರೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದನ್ನು ಓದಿದ್ದೀರಾ? ಬೆಂಗಳೂರು | ವಕೀಲೆ ಆತ್ಮಹತ್ಯೆ ಪ್ರಕರಣ; ಡಿವೈಎಸ್ಪಿ ಕನಕಲಕ್ಷ್ಮೀ ಬಂಧನ
“ಗರ್ಭಪಾತವಾದಾಗಿನಿಂದ ನಾನು ಅಸ್ವಸ್ಥಳಾಗಿದ್ದೇನೆ. ಆದರೆ ಇವರೆಲ್ಲರೂ ನನ್ನ ಆಹಾರ ಪದ್ಧತಿ ಬಗ್ಗೆಯೇ ಮಾತನಾಡುತ್ತಾರೆ. ನನ್ನ ಅತ್ತಿಗೆ ಖತೀಜಾ ಮತ್ತು ನನ್ನ ಮಾವ ಶಾಹಿದ್ ನನ್ನ ಸಾವಿಗೆ ಕಾರಣರು. ನನ್ನ ಪತಿ ಕೂಡ ಭಾಗಶಃ ಕಾರಣ” ಎಂದು ಅಮ್ರೀನ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
“ನನ್ನ ಪತಿ ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ. ಪ್ರತಿ ಬಾರಿಯೂ ನನ್ನದೇ ತಪ್ಪೆಂದು ಭಾವಿಸುತ್ತಾರೆ. ನನ್ನ ಪತಿ, ಮಾವ, ಅತ್ತಿಗೆ ನಾನು ಸಾಯಬೇಕೆಂದು ಬಯಸಿದ್ದರು. ‘ನೀನ್ಯಾಕೆ ಸಾಯಬಾರದು’ ಎಂದು ನನ್ನ ಪತಿ ಕೇಳಿದ್ದರು. ಅವರ ತಂದೆ, ಸಹೋದರಿ ಕೂಡಾ ಇದೇ ಮಾತನ್ನು ಆಗಾಗೇ ಹೇಳುತ್ತಾರೆ. ಈ ಎಲ್ಲ ಮಾತಿಂದ ನಾನು ಬೇಸತ್ತಿದ್ದೇನೆ. ಇನ್ನು ನನಗೆ ಇದನ್ನು ಸಹಿಸಲಾಗದು” ಎಂದು ಅಮ್ರೀನ್ ಆರೋಪಿಸಿದ್ದಾರೆ.
ಈ ವಿಡಿಯೋ ಮಾಡಿ ಅಮ್ರೀನ್ ನೇಣು ಬಿಗಿದು ಮೃತಪಟ್ಟಿದ್ದಾಳೆ. ಘಟನೆಯ ಬಗ್ಗೆ ಅಮ್ರೀನ್ಳ ತಾಯಿಗೆ ತಿಳಿಸಿದಾಗ, ಆಕೆಯ ಗಂಡನ ಮನೆಯವರು ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ತನಿಖೆಯ ಸಮಯದಲ್ಲಿ, ಪೊಲೀಸರಿಗೆ ಅಮ್ರೀನ್ಳ ಫೋನ್ನಲ್ಲಿ ವಿಡಿಯೋ ಪತ್ತೆಯಾಗಿದೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ವಿಷಯದ ಬಗ್ಗೆ ಸಂಪೂರ್ಣ ತನಿಖೆಯ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಅಮ್ರೀನ್ ಕುಟುಂಬದಿಂದ ದೂರು ಪಡೆದುಕೊಂಡಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.
