ಗಾಜಾದಲ್ಲಿ ಆಶ್ರಯತಾಣವಾಗಿ ಬದಲಾಯಿಸಲಾದ ಶಾಲೆಯ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ್ದು, 25 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಹೆಚ್ಚಿನವರು ಮಹಿಳೆಯರು, ಮಕ್ಕಳು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇಸ್ರೇಲ್ ಸೇನೆಯು ಉಗ್ರಗಾಮಿಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿಕೊಂಡಿದೆ.
ಹಮಾಸ್ ಜೊತೆಗಿನ ಕದನ ವಿರಾಮ ಅಂತ್ಯಗೊಳಿಸಿದ ಬಳಿಕ ಮಾರ್ಚ್‌ನಲ್ಲಿ ಇಸ್ರೇಲ್ ಮತ್ತೆ ಗಾಜಾದ ಮೇಲೆ ದಾಳಿ ಮುಂದುವರೆಸಿದೆ. 2023ರ ಅಕ್ಟೋಬರ್ 7ರಂದು ಇಸ್ರೇಲ್- ಹಮಾಸ್ ಯುದ್ಧ ಆರಂಭವಾಗಿದೆ. ಈಗಾಗಲೇ ಲಕ್ಷಾಂತರ ಜೀವಗಳು ಯುದ್ಧಕ್ಕೆ ಬಲಿಯಾಗಿದೆ.
ಇದನ್ನು ಓದಿದ್ದೀರಾ? ಇಸ್ರೇಲ್ ವಾಯುದಾಳಿಗೆ 11 ಪ್ಯಾಲೆಸ್ತೀನ್ ಪತ್ರಕರ್ತರು ಮೃತ್ಯು
ಉತ್ತರ ಗಾಜಾದಲ್ಲಿ ಶಾಲೆಯ ಮೇಲೆ ನಡೆದ ದಾಳಿಯಲ್ಲಿ 55ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯದ ತುರ್ತು ಸೇವೆಯ ಮುಖ್ಯಸ್ಥ ಫಾಹ್ಮಿ ಅವದ್ ಹೇಳಿದ್ದಾರೆ. ಮೃತರಲ್ಲಿ ಐವರು ಮಕ್ಕಳು ಇದ್ದಾರೆ ಎನ್ನಲಾಗಿದೆ.
ಜನರು ಮಲಗಿದ್ದಾಗ ಶಾಲೆಗೆ ಮೂರು ಬಾರಿ ಗುಂಡು ಹಾರಿಸಲಾಗಿದೆ. ಸದ್ಯ ರಕ್ಷಣಾ ಕಾರ್ಯಕರ್ತರು ಬೆಂಕಿ ನಂದಿಸುವ ಮತ್ತು ಮೃತದೇಹವನ್ನು ಹೊರತೆಗೆಯುವ ಕಾರ್ಯವನ್ನು ಮಾಡುತ್ತಿದ್ದಾರೆ.
ಇಸ್ರೇಲ್ ದಾಳಿಯಿಂದಾಗಿ ಸುಮಾರು 54,000 ಪ್ಯಾಲೆಸ್ತಿನಿಯನ್ನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಮಹಿಳೆಯರು ಮತ್ತು ಮಕ್ಕಳು ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳಿದೆ.
