ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದ್ದು, ವಿವಿಧ ಭಾಗಗಳಲ್ಲಿ ಹಾನಿಗಳು ವರದಿಯಾಗಿವೆ. ಜಿಲ್ಲೆಯೆಲ್ಲೆಡೆ ಸುರಿಯುತ್ತಿರುವ ಮಳೆಯ ಹಿನ್ನೆಲೆ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ.
ಮುಂದಿನ 3 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ಬಲವಾದ ಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಅದರಲ್ಲೂ ಬಂಟ್ವಾಳ ತಾಲೂಕಿನಾದ್ಯಂತ ಮಳೆ ತೀವ್ರವಾಗಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕಾಡಬೆಟ್ಟು ಗ್ರಾಮದ ವಗ್ಗ ಎಂಬಲ್ಲಿ ವಾಸ್ತವ್ಯ ಇಲ್ಲ ಮನೆಯೊಂದರ ತಡೆಗೋಡೆ ಕುಸಿದಿದೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಉಕ್ಕುಡ ದರ್ಬೆಯಲ್ಲಿ ಶಿಥಿಲಗೊಂಡ ಛಾವಣಿಗೆ ಟಾರ್ಪಲ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಪುದು ಗ್ರಾಮದಲ್ಲಿ ಮನೆ ಗೋಡೆ ಹಾಗೂ ಹೆಂಚಿಗೆ ಹಾನಿಯಾಗಿದೆ.
ಬಡಗ ಬೆಳ್ಳೂರು ಗ್ರಾಮದ ನಿವಾಸಿ ಮಮತಾರ ಮನೆಯ ಬದಿ ತಡೆಗೋಡೆ ಬಿದ್ದು ಮನೆಗೆ ಹಾನಿಯಾಗಿದೆ. ನೆಟ್ಲಮುಡ್ನೂರು ಗ್ರಾಮದ ಪರ್ಲೊಟ್ಟು ಬಳಿ ಮರ ಬಿದ್ದು ಹಾನಿಯಾಗಿದೆ. ಸಜಿಪಮುನ್ನೂರು ಗ್ರಾಮದಲ್ಲಿ ಕೆಲ ಮನೆಗಳಿಗೆ ತುಂಬಿ ಹರಿಯುತ್ತಿದ್ದ ಚರಂಡಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಇದನ್ನೂ ಓದಿ: ಮಂಗಳೂರು | ಮಳೆ ಅವಾಂತರ; ಮೂರು ಲಕ್ಷ ಮೌಲ್ಯದ ದಿನಸಿ ನೀರುಪಾಲು
ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ. ಅನಿವಾರ್ಯ ಕೆಲಸವಿಲ್ಲದಿದ್ದರೆ ಜನಸಾಮಾನ್ಯರು ಸುರಕ್ಷಿತವಾಗಿ ಮನೆಯಲ್ಲಿ ಉಳಿಯುವಂತೆ ಜಿಲ್ಲಾಡಳಿತ ವಿನಂತಿಸಿದೆ ಎಂದು ವರದಿಯಾಗಿದೆ.
