ಹೊಸವೇಷ ಧರಿಸಿರುವ ಪುನೀತ್ ಕೆರೆಹಳ್ಳಿ ಎಂಬ ರೌಡಿ ‘ಹಿಂದೂ ರಾಷ್ಟ್ರ ಸಂಕಲ್ಪʼ ಹೆಸರಿನಲ್ಲಿ ಪ್ರತಿ ಭಾನುವಾರ ಬೆಳಗ್ಗೆ ಹನ್ನೊಂದು ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ವಿಶೇಷ ಪೂಜೆ ಹಮ್ಮಿಕೊಂಡಿದ್ದಾನೆ. ಜೊತೆಗೆ ದೇವಾಲಯ ನಿರ್ಮಿಸಲು ಹೊರಟಿದ್ದಾನೆ. ತನ್ನ ಜನ್ಮಕ್ಕೆ ಮತ್ತು ದೇಹಕ್ಕೆ ಬಳಿದುಕೊಂಡಿರುವ ಕೆಸರನ್ನು ಮರೆ ಮಾಚಲು ಈಗ ಹಿಂದೂ ಧರ್ಮದ ಮೊರೆ ಹೊಕ್ಕಿದ್ದಾನೆ. ಈತನ ಬೆಂಬಲಕ್ಕೆ ಬಿಜೆಪಿ ನಿಂತಿದೆ.
ಹಿಂದೂ ಧರ್ಮ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಸುಲಿಗೆ ಹಾಗೂ ಗೂಂಡಾಗಿರಿಯನ್ನು ವೃತ್ತಿಯಾಗಿಸಿಕೊಂಡಿರುವ ಪುನೀತ್ ಕೆರೆಹಳಿ ಎಂಬ ರೌಡಿಯು ಹೊಸ ಅವತಾರ ಎತ್ತಿದ್ದಾನೆ. ಇತ್ತೀಚೆಗೆ ಹಸು ಮತ್ತು ಕರುವನ್ನು ಮಾರಾಟ ಮಾಡಲು ಅಧಿಕೃತ ಪರವಾನಗಿ ಪತ್ರದೊಂದಿಗೆ ಸಂತೆಗೆ ಹೊರಟಿದ್ದ ಮಂಡ್ಯ ನಗರದ ಇದ್ರಿಷ್ ಪಾಶ ಎಂಬ ಅಮಾಯಕನನ್ನು ಕನಕಪುರದ ಸಾತನೂರು ಬಳಿ ಇವನು ಸಹಚರರೊಂದಿಗೆ ಕೊಂದು ಹಾಕಿದ್ದ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದ ಕಾರಣ ಈತನನ್ನು ಮತ್ತು ಸಂಗಡಿಗರನ್ನು ಬಂಧಿಸಿದ್ದ ರಾಮನಗರ ಪೊಲೀಸರು, ಈತನ ಅಕ್ರಮ ಚಟುವಟಿಕೆಗಳು ಹಾಗೂ ಈವರೆಗೆ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಮೊಕದ್ದಮೆಗಳನ್ನು ಸೇರಿಸಿ ಸರಿಯಾದ ರೀತಿಯಲ್ಲಿ ಮೊಕದ್ದಮೆ ದಾಖಲಿಸಬೇಕಿತ್ತು. ಜೊತೆಗೆ ಗೂಂಡಾಗಿರಿ ಕಾಯ್ದೆ ಬಳಸಿದ್ದರೆ ಸಾಕಿತ್ತು. ಕನಿಷ್ಠ ಎರಡರಿಂದ ಮೂರು ವರ್ಷ ಈತನನ್ನು ಜೈಲಿನಲ್ಲಿ ಇರಿಸಬಹುದಿತ್ತು. ಈತನಿಗೆ ಹೆಂಗ್ ಪುಂಗ್ಲಿ ಎಂಬ ನಯವಂಚಕ ಜಾಮೀನು ಕೊಡಿಸಿ, ಮನೆಗೆ ಕರೆದುಕೊಂಡು ಹೋಗಿ ಸನ್ಮಾನ ಮಾಡಿದನು. ನ್ಯಾಯಾಲಯವು ಜಾಮೀನು ನೀಡುವ ಸಂದರ್ಭದಲ್ಲಿ ಕರ್ನಾಟಕದ ಪೊಲೀಸರು ಸರಿಯಾದ ದಾಖಲೆಗಳನ್ನು ನೀಡಿ ಆಕ್ಷೇಪಣೆ ಸಲ್ಲಿಸದೆ ಮೌನವಾಗಿದ್ದರು.
ಕರ್ನಾಟಕದಲ್ಲಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರವೂ ಈತನ ಅಟಾಟೋಪ ಮುಂದುವರಿದಿದೆ. ಹಿಂದಿನ ಸರ್ಕಾರದಲ್ಲಿ ಗೃಹಸಚಿವರಾಗಿದ್ದ ಆರಗ ಜ್ಞಾನೇಂದ್ರ ಅವರ ನಿಷ್ಕ್ರಿಯತೆಯನ್ನು ಮೀರಿಸುವಂತಹ ಗುಣಗಳನ್ನು ಹೊಂದಿರುವ ಡಾ.ಜಿ.ಪರಮೇಶ್ವರ್ ಈಗ ಹೊಸ ಸರ್ಕಾರದಲ್ಲಿ ಗೃಹಸಚಿವರು. ದಲಿತ ಸಮುದಾಯಕ್ಕೆ ಸೇರಿದ ಸಜ್ಜನ ಹಿರಿಯ ರಾಜಕಾರಣಿ ಎಂಬ ಅರ್ಹತೆಯನ್ನು ಹೊರತು ಪಡಿಸಿದರೆ, ಇಂದಿನ ರಾಜ್ಯದ ಸಾಮಾಜಿಕ ಸ್ಥಿತಿಯಲ್ಲಿ ಕಾನೂನು ಸುವ್ಯವಸ್ಥೆ ಹೇಗಿರಬೇಕು ಎಂದು ಗಂಭೀರವಾಗಿ ಯೋಚಿಸಿದವರಲ್ಲ. ತಮಗಿಂತ ಕಿರಿಯವರಾದ ಸಚಿವ ಪ್ರಿಯಾಂಕ್ ಖರ್ಗೆಗೆ ಇರುವ ನೈತಿಕ ಸಿಟ್ಟು ಸಹ ಡಾ.ಜಿ.ಪರಮೇಶ್ವರ್ ಅವರಿಗೆ ಇಲ್ಲವಾಗಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ರಾಜ್ಯದಲ್ಲಿ ಮತ್ತೆ ಶುರುವಾಯಿತು ಹೆಣ ರಾಜಕಾರಣ
ಪುನೀತ್ ಕೆರೆಹಳ್ಳಿ ಎಂಬ ಕೊಲೆಗಡುಕ ರೌಡಿಯ ಹೊಸ ಅವತಾರ ಇದೀಗ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆ. ಮೆಜಸ್ಟಿಕ್ ಬಳಿಯ ಉಪ್ಪಾರಪೇಟೆ ಪೊಲೀಸ್ ಸ್ಟೇಷನ್ ಕಡೆಯಿಂದ ಶಾಂತಲಾ ಸಿಲ್ಕ್ ಕಡೆಗೆ ಹೋಗಬೇಕಾದರೆ ನಡುವೆ ಚಿಕ್ಕಲಾಲ್ ಬಾಗ್ ಎಂಬ ಪುಟ್ಟ ಉದ್ಯಾನವನವು ರಸ್ತೆ ಎಡಭಾಗದ ತಗ್ಗು ಪ್ರದೇಶದಲ್ಲಿದೆ. ಅದನ್ನು ತುಳಸಿ ತೋಟ ಎಂದು ಸಹ ಕರೆಯುತ್ತಾರೆ. ರಸ್ತೆಯ ಫುಟ್ ಪಾತ್ ಬದಿಯಲ್ಲಿ ಹಳೆಯ ಅರಳಿ ಮರಕ್ಕೆ ಮತ್ತು ಉದ್ಯಾನವನದ ಬೇಲಿಗೆ ಹೊಂದಿಕೊಂಡಂತೆ ಹಲವಾರು ನಾಗರ ಕಲ್ಲುಗಳು ಇದ್ದವು. ಈಗ ಅವುಗಳ ಉದ್ಧಾರಕ್ಕೆ ಹೊಸವೇಷ ಧರಿಸಿರುವ ಈ ರೌಡಿ ‘ಹಿಂದೂ ರಾಷ್ಟ್ರ ಸಂಕಲ್ಪʼ ಹೆಸರಿನಲ್ಲಿ ಪ್ರತಿ ಭಾನುವಾರ ಬೆಳಗ್ಗೆ ಹನ್ನೊಂದು ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ವಿಶೇಷ ಪೂಜೆ ಹಮ್ಮಿಕೊಂಡಿದ್ದಾನೆ. ಜೊತೆಗೆ ದೇವಾಲಯ ನಿರ್ಮಿಸಲು ಹೊರಟಿದ್ದಾನೆ. ತನ್ನ ಜನ್ಮಕ್ಕೆ ಮತ್ತು ದೇಹಕ್ಕೆ ಬಳಿದುಕೊಂಡಿರುವ ಕೆಸರನ್ನು ಮರೆ ಮಾಚಲು ಈಗ ಹಿಂದೂ ಧರ್ಮದ ಮೊರೆ ಹೊಕ್ಕಿದ್ದಾನೆ.
ಈಗಾಗಲೇ ದೇಶದ ಸರ್ವೋಚ್ಚ ನ್ಯಾಯಾಲಯ (ಸುಪ್ರೀಂ ಕೋರ್ಟ್) ನೀಡಿರುವ ಆದೇಶದಂತೆ ದೇಶದ ಎಲ್ಲೆಡೆ ರಸ್ತೆಯ ವಿಸ್ತರಣೆಗೆ ಅವಶ್ಯಕವಾಗಿರುವ ಜಾಗದಲ್ಲಿ ಮಸೀದಿ ಅಥವಾ ಮಂದಿರಗಳು ಇದ್ದರೆ ಅವುಗಳನ್ನು ತೆರವುಗೊಳಿಸಬಹುದು. ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿದ್ದ ಮುಸ್ಲಿಂ ಸಂತನ ಸಮಾಧಿ ಸೇರಿದಂತೆ, ಹುಬ್ಬಳ್ಳಿ-ಧಾರವಾಡ ರಸ್ತೆಯ ಉಣಕಲ್ ಬಳಿ ಇದ್ದ ದರ್ಗಾ ಮತ್ತು ಅನೇಕ ಹಿಂದೂ ದೇವಾಲಯಗಳನ್ನು ತೆರವುಗೊಳಿಸಿದ ಉದಾಹರಣೆಗಳು ನಮ್ಮ ಮುಂದಿವೆ.
ಈಗ ಬೆಂಗಳೂರು ನಗರದ ಹೃದಯ ಭಾಗದ ಸಾರ್ವಜನಿಕ ಪ್ರದೇಶದಲ್ಲಿ ದೇವಾಲಯ ನಿರ್ಮಿಸಲು ಹೊರಟಿರುವ ಈತನ ಮೇಲೆ ಸಾರ್ವಜನಿಕ ಆಸ್ತಿಯ ಅತಿಕ್ರಮಣದ ಹೆಸರಿನಲ್ಲಿ ಒದ್ದು ಒಳಕ್ಕೆ ಹಾಕಲಾಗದ ಅಸಹಾಯಕತೆಯಿಂದ ಒದ್ದಾಡುತ್ತಿರುವ ಪೊಲೀಸರು ಕೇವಲ ಪೂಜೆಗೆ ಮಾತ್ರ ಅವಕಾಶ ನಿರಾಕರಿಸಿದ್ದಾರೆ. ಈ ವಿಷಯವನ್ನು ಎತ್ತಿಕೊಂಡು ಬಿಜೆಪಿಯ ಶಾಸಕರು ಎಂಬ ಮತಿಹೀನರು ವಿಧಾನಸಭೆಯಲ್ಲಿ ಗದ್ದಲವೆಬ್ಬಿಸಿದರು. ಅಮಾಯಕ ಮುಸ್ಲಿಂ ಯುವಕನನ್ನು ಈ ರೌಡಿಯು ಕೊಂದು ಹಾಕಿದಾಗ ಬಾಯಿ ಬಿಡದ ಜನಪ್ರತಿನಿಧಿಗಳೆಂಬ ಈ ಮೂರ್ಖರು ಇಂದು ಆತನ ಬೆಂಬಲಕ್ಕೆ ನಿಂತಿದ್ದಾರೆ. ಇವರಿಗೆ ನೈತಿಕತೆ ಎಂಬುದು ಏನಾದರೂ ಇದೆಯಾ? ಇದು ಕರ್ನಾಟಕದ ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ.
ಕಳೆದ ಚುನಾವಣೆಯಲ್ಲಿ ಸಾರ್ವಜನಿಕರಿಂದ ತಿರಸ್ಕೃತರಾಗಿ ಕಸದ ಬುಟ್ಟಿಗೆ ಸೇರಿದ್ದರೂ ಸಹ ಬಿಜೆಪಿ ನಾಯಕರಿಗೆ ಇನ್ನೂ ಬುದ್ದಿ ಬಂದಿಲ್ಲ, ಈ ಶತಮಾನದಲ್ಲಿ ಬರುವ ಸಾಧ್ಯತೆಯೂ ಕೂಡ ಇಲ್ಲ. ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು, ಮಹತ್ತರವಾದ ಬಜೆಟ್ ಅಧಿವೇಶನ ಹದಿನೈದು ದಿನಗಳಿಂದ ನಡೆಯುತ್ತಿದೆ. ವಿಧಾನಸಭೆಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಇವರಿಂದ ಸಾಧ್ಯವಾಗಿಲ್ಲ. ಈ ಸ್ಥಿತಿಯಲ್ಲಿ ಇಂತಹವರಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ?

ಈಗ ಆಯ್ಕೆಯಾಗಿರುವ ಹಿರಿಯ ಶಾಸಕರಲ್ಲಿ ‘ನನಗೆ ಹತ್ತಾರು ಶಾಸಕರ ಬೆಂಬಲವಿದೆ ನಾನು ನಾಯಕ’ ಎಂದು ಹೇಳಿಕೊಳ್ಳುವ ಧೈರ್ಯವಿಲ್ಲ. ಎಲ್ಲರೂ ದೆಹಲಿಯ ಗೊಂಬೆರಾಮರು ಆಡಿಸುವ ತೊಗಲು ಬೊಂಬೆಗಳಂತೆ ಕಾಣುತ್ತಿದ್ದಾರೆ. ಇಂತಹವರ ನಡುವೆ ರಾಜ್ಯದ ಕ್ರಿಮಿನಲ್ ಗಳು ಧರ್ಮದ ಹೆಸರಿನಲ್ಲಿ ಹೆಡೆ ಬಿಚ್ಚುತ್ತಿದ್ದಾರೆ.
ಇಂತಹವರನ್ನು ಹೆಡೆಮುರಿ ಕಟ್ಟಿ ಸೆರೆಮನೆಗೆ ನೂಕಬೇಕಾಗಿರುವುದು ಸಿದ್ದರಾಮಯ್ಯನವರ ಸರ್ಕಾರದ ನೈತಿಕ ಜವಾಬ್ದಾರಿಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಿಷ್ಠುರ ನಡೆ ಮತ್ತು ನುಡಿಗಳು ಇಂದಿನ ದಿನಗಳಲ್ಲಿ ಅತ್ಯವಶ್ಯಕವಾಗಿವೆ. ಅವುಗಳನ್ನು ಕರ್ನಾಟಕದ ಜನತೆ ನೂತನ ಸರ್ಕಾರದಿಂದ ನಿರೀಕ್ಷಿಸುತ್ತಿದ್ದಾರೆ.
-ಡಾ. ಜಗದೀಶ್ ಕೊಪ್ಪ