ಹೊಸಿಲ ಒಳಗೆ-ಹೊರಗೆ | ಒಳಗೊಳಗೇ ನಂಜು ಕಾರುವ ಗಾದೆಗಳ ಬಗ್ಗೆ ಒಂಚೂರು ಎಚ್ಚರವಿರಲಿ

Date:

Advertisements
ಗಾದೆಗಳು ನಮ್ಮೆಲ್ಲರ ಮನದಲ್ಲೂ ಚಿಕ್ಕಂದಿನಿಂದಲೇ ಗಟ್ಟಿಯಾಗಿ ನೆಲೆಯೂರಿಬಿಟ್ಟಿವೆ. ಹಾಗಾಗಿಯೇ ಅವುಗಳ ಬಗ್ಗೆ ನಮ್ಮೊಳಗೆ ಪ್ರಶ್ನೆ ಹುಟ್ಟುವುದಿಲ್ಲ. ಆದರೆ, ಹೆಣ್ಣುಮಕ್ಕಳ ವಿಷಯದಲ್ಲಿ ಮಾತ್ರ ಈ ಗಾದೆಮಾತುಗಳು ಮೌಢ್ಯ, ನಂಜು, ಪುಕಾರು ಬಿತ್ತುವ ಅಪಾಯಕಾರಿ ಸಂಗತಿಗಳೂ ಹೌದು

ನಮ್ಮ ಸುತ್ತಮುತ್ತಲೂ ಹತ್ತು ಹಲವು ಗಾದೆಮಾತುಗಳು ಅಥವಾ ನಾಣ್ಣುಡಿಗಳು ಹೊತ್ತುಹೊತ್ತಿಗೂ ಕೇಳಿಬರುತ್ತವೆ. ಅವು ಅನುಭವದ ಹಿನ್ನೆಲೆಯಿಂದ ಬಂದ ಹಾಗೆ ಇದ್ದು, ಅಪ್ಪಟ ಸತ್ಯಗಳೆಂಬಂತೆ ಸವಾಲು ಹಾಕುತ್ತವೆ. ತರಬೇತಿಗಳಲ್ಲಿ, ಒಂದು ಆಳವಾದ ಮಾತುಕತೆ ಈ ಗಾದೆಮಾತುಗಳ ವಿಚಾರದಲ್ಲಿಯೇ ನಡೆಯುತ್ತವೆ. ಆ ಗುಂಪಿನ ಸಂದರ್ಭಕ್ಕೆ ಪ್ರಚಲಿತವಾಗಿರುವ ಒಂದಷ್ಟು ಗಾದೆಮಾತುಗಳನ್ನು ಗುರುತಿಸಿಕೊಂಡು, ಸಣ್ಣ ಗುಂಪುಗಳಲ್ಲಿ ಗಾದೆಗಳ ಎದೆ ಸೀಳಿ ನೋಡುವ ಪ್ರಯತ್ನ ನಡೆಯುತ್ತದೆ. “ಈ ಗಾದೆಮಾತನ್ನು ನೀವು ಒಪ್ಪುತ್ತೀರಾ? ಇಲ್ಲವಾ? ಯಾಕೆ? ಈ ಗಾದೆ ಮಾತಿನ ಅರ್ಥವೇನು? ಇದನ್ನು ಒಪ್ಪಿಕೊಂಡರೆ ಆಗುವ ಪರಿಣಾಮವೇನು? ಇದು ಸರಿಯಿಲ್ಲ ಅನಿಸಿದರೆ ಇದನ್ನು ಹೇಗೆ ಬದಲಾಯಿಸುತ್ತೇವೆ?” ಇವೇ ಮುಂತಾದ ಪ್ರಶ್ನೆಗಳನ್ನು ಮುಂದಿರಿಸಿಕೊಂಡು ಚರ್ಚೆಗಳು ನಡೆಯುತ್ತವೆ.

ಉದಾಹರಣೆಗೆ, ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ.’ ಈ ಗಾದೆಮಾತಿನ ಅರ್ಥವೇನು? ಒಮ್ಮೆ ಮದುವೆ ಮಾಡಿ ‘ಕೊಟ್ಟ’ (ಈ ಪದವನ್ನೂ ಗಮನಿಸಬೇಕು) ಮೇಲೆ ಹೆಣ್ಣು ಆ ಕುಲದಿಂದ ಹೊರಗೆ ಹೋದಂತೆ. ಅವಳಿಗೆ ಅವಳ ತವರುಮನೆಯಲ್ಲಿ ಯಾವುದೇ ಹಕ್ಕು ಇಲ್ಲ. ಎಲ್ಲ ಚೆನ್ನಾಗಿದ್ದರೆ, ಆಗಾಗ ಬರುತ್ತ, ಖುಷಿಪಡುತ್ತ, ಒಂದಷ್ಟು ಸುಖ-ದುಃಖ ಹಂಚಿಕೊಳ್ಳುತ್ತ ಇರಬಹುದಷ್ಟೆ. ‘ಕೊಟ್ಟ’ ಮನೆ, ಅಂದರೆ ಗಂಡನ ಮನೆಯಲ್ಲಿ ಅವಳ ಬದುಕು ಅವಳಿಗೆ ಬಿಟ್ಟಿದ್ದು. ಅವಳ ಮೇಲೆ ಹಿಂಸೆ, ದೌರ್ಜನ್ಯಗಳು ನಡೆದರೂ, ಅದು ಅವಳು ಪಡೆದುಕೊಂಡು ಬಂದಿದ್ದು. ಅವಳು ಈಗ ಕೊಟ್ಟ ಮನೆಗೆ ಸೇರಿದವಳು. ಅವಳಿಗೆ ತವರುಮನೆ ಬೆಂಬಲ ಕೊಡುವ ಹಾಗಿಲ್ಲ. ಈ ಮಾತನ್ನು ಸಂಪೂರ್ಣವಾಗಿ ಒಪ್ಪಿಕೊಂಡರೆ, ಹೆಣ್ಣುಮಕ್ಕಳಿಗೆ ನೈತಿಕವಾಗಿ ತವರುಮನೆಯ ಬೆಂಬಲ ಇಲ್ಲದ ಹಾಗೆ ಆಗಿಬಿಡುತ್ತದೆ. ನ್ಯಾಯವೇ ಇದು?

ಮಾನವ ಸಹಜ ಗುಣಗಳಾದಂತಹ ಅಳುವ, ನಗುವ ಭಾವಗಳ ಮೇಲೂ ನಿರ್ಬಂಧನೆ ಹಾಕುತ್ತಿರುವ, ‘ಅಳುವ ಗಂಡಸನ್ನು ನಂಬಬಾರದು; ನಗುವ ಹೆಂಗಸನ್ನು ನಂಬಬಾರದು’ ಎಂಬ ಗಾದೆಯ ಬಗ್ಗೆ ಏನು ಹೇಳೋಣ! ‘ಹೆಣ್ಣು ತಿರುಗಿ ಕೆಟ್ಟಳು; ಗಂಡು ಕುಳಿತು ಕೆಟ್ಟ’ ಎಂಬ ಗಾದೆ, ಮಹಿಳೆಯರ ಚಲನಶೀಲತೆ ಮೇಲೆ ಹೇಗೆ ಲಗಾಮು ಹಾಕುತ್ತದೆ, ಜೊತೆಗೆ ಹೇಗೆ ಪುರುಷನೊಬ್ಬ ಚಲನಶೀಲವಾಗಿರುವುದು ಮುಖ್ಯ ಅಂತ ಹೇಳುತ್ತದೆ ಎಂಬುದನ್ನು ಗಮನಿಸಬೇಕು. ‘ಉದ್ಯೋಗಂ ಪುರುಷ ಲಕ್ಷಣಂ’ ಎಂಬುದು – ಪುರುಷನಾದವನು ಕಡ್ಡಾಯವಾಗಿ ಉದ್ಯೋಗ ಮಾಡಬೇಕು ಅಂತ ಸೂಚಿಸುತ್ತದೆ, ಮಹಿಳೆಯರು ಉದ್ಯೋಗದ ಆವಶ್ಯಕತೆ ಇಲ್ಲದವರು; ಮನೆಯೊಳಗಿನ ಕೆಲಸವೇ ಅವರ ಮುಖ್ಯ ಜವಾಬ್ದಾರಿ ಎಂಬುದನ್ನು ಸೂಚಿಸುತ್ತದೆ. ‘ಹೆಣ್ಣುಮಕ್ಕಳ ಬುದ್ಧಿ ಮೊಣಕಾಲ ಕೆಳಗೆ’ – ಹೆಣ್ಣುಮಕ್ಕಳ ಬುದ್ಧಿ, ಸಾಮರ್ಥ್ಯವನ್ನು ಅಳೆಯುವ ಮಾನದಂಡ ಹೀಗಿದೆ. ಮಹಿಳೆಯರು ಏನಾದರೂ ಸಲಹೆ ನೀಡಲು ಬಂದರೆ, ಕುಹಕದಿಂದ ಈ ಮಾತು ಹೇಳುವುದೂ ಇದೆ. ‘ನಾರಿ ಮುನಿದರೆ ಮಾರಿ’ – ಇದನ್ನು ಅವಳಲ್ಲಿ ಇರಬಹುದಾದ ಶಕ್ತಿಯ ಬಗ್ಗೆ ಎಚ್ಚರಿಸುವುದಕ್ಕೂ ಹೇಳಿರಬಹುದು ಅಥವಾ ‘ಮಾರಿ’ ಅಂದರೆ ಭಯಂಕರ ಎಂಬ ನೆಲೆಯಿಂದಲೂ ಹೇಳಿರಬಹುದು.

Advertisements
ಈ ಆಡಿಯೊ ಕೇಳಿದ್ದೀರಾ?: ಶಾಸನ ಸಂಶೋಧಕಿ ಸ್ಮಿತಾ ರೆಡ್ಡಿ ಸಂದರ್ಶನ | ‘ಅವತ್ತು ರಾತ್ರಿ ನಮ್ಮೆದುರು ನಿಂತಿದ್ದು ಮಚ್ಚು-ಲಾಂಗು ಹಿಡಿದ ಗ್ರಾಮಸ್ಥರು!’

ಮಹಿಳೆಯರಿಗೇ ಮೀಸಲಾದ ‘ಶೀಲ’ ಅನ್ನುವ ಪರಿಕಲ್ಪನೆಯನ್ನು ದೃಢಪಡಿಸುವ ಗಾದೆಮಾತುಗಳೂ ಬಹಳಷ್ಟು ಇವೆ. ‘ಮುಳ್ಳು ಸೆರಗಿನ ಮೇಲೆ ಬಿದ್ದರೂ ಸೆರಗೇ ಮುಳ್ಳಿನ ಮೇಲೆ ಬಿದ್ದರೂ ಹರಿಯುವುದು ಸೆರಗೇ’ ಎಂಬುದು ಅವುಗಳಲ್ಲೊಂದು. ಮುಳ್ಳನ್ನು ಗಂಡಿಗೂ ಸೆರಗನ್ನು ಹೆಣ್ಣಿಗೂ ಹೋಲಿಸಿರುವುದು ನೋಡಿ. ಎಷ್ಟು ಸುಂದರವಾಗಿ, ಮುಳ್ಳಿನಿಂದಲೇ ತಪ್ಪಾಗಿದ್ದರೂ ಕಳೆದುಕೊಳ್ಳುವುದು ಹೆಣ್ಣೇ ಎಂಬ ಚಿಂತನೆಯನ್ನು ಸ್ಥಾಪಿಸಿರುವುದು ಕಾಣುತ್ತದೆ. ಅಲ್ಲಗೆಳೆಯಲು ಕಷ್ಟವಾಗುವ ಹಾಗೆ ಇಂತಹವನ್ನು ನಿರೂಪಿಸಿರುತ್ತಾರೆ. ‘ಗಂಡು ತಾಮ್ರದ ಕೊಡದ ಹಾಗೆ, ಬಿದ್ದರೂ ಒಡೆಯುವುದಿಲ್ಲ; ಹೆಣ್ಣು ಮಣ್ಣಿನ ಕೊಡದ ಹಾಗೆ, ಸಣ್ಣ ಏಟು ಬಿದ್ದರೂ ಒಡೆದುಹೋಗುವುದು’ – ಎಂಬ ಮಾತಲ್ಲಿನ ಈ ಕೊಡದ ಪ್ರತಿಮೆಗಳು ಮನಸ್ಸಿನಲ್ಲಿ ಕುಳಿತುಕೊಳ್ಳುತ್ತವೆ; ಹೌದಲ್ಲ ಅನ್ನಿಸುವ ಹಾಗೆ ಮಾಡುತ್ತವೆ. ‘ಗಂಡಸರಿಗೇನು? ಮಣ್ಣಿರುವಲ್ಲಿ ತುಳೀತಾರೆ, ನೀರು ಕಂಡಲ್ಲಿ ತೊಳೀತಾರೆ’ – ಅಂದರೆ ಅವರಿಗೆ ಯಾವುದೇ ಕೊಳೆ ಅಂಟಿಕೊಳ್ಳುವುದಿಲ್ಲ, ಅವರು ಏನೂ ಮಾಡಬಹುದು. ಇನ್ನೊಂದು ಸದಾ ಕೇಳಿಬರುವ ಮಾತು, ‘ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುವ ತನಕ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡ ಹಾಗೆ…’ – ಎಂತಹ ಘನವಾದ ಉಪಮೆ!

ಈಗಾಗಲೇ ಜಾನಪದದಲ್ಲಿ ಸಾಗಿಬಂದ ಗಾದೆಮಾತುಗಳಿಗೆ ಪೂರಕವಾಗಿ ಹೊಸ ಮಾತುಗಳು ಕೂಡ ಹುಟ್ಟಿಕೊಳ್ಳುತ್ತಿರುವುದು ಗಮನಿಸಬೇಕಾದ ವಿಚಾರ. ಕುಟುಂಬ ಯೋಜನೆಯ ಸಂದೇಶವನ್ನು ಬಹಳ ಜೋರಾಗಿ ಸಾರುವ ಹೊತ್ತಿನಲ್ಲಿ ಹುಟ್ಟಿಕೊಂಡ ಮಾತು – ‘ಕೀರ್ತಿಗೊಬ್ಬ ಮಗ, ಆರತಿಗೊಬ್ಬ ಮಗಳು.’ ಇದು ಬಹಳ ಕಾಲ ಚಾಲ್ತಿಯಲ್ಲಿ ಇತ್ತು. ಇಬ್ಬರು ಮಕ್ಕಳು ಸಾಕು, ಅದು ಸುಖೀ ಕುಟುಂಬವಾಗುತ್ತದೆ ಅಂತ ಹೇಳುವುದು ಇಲ್ಲಿಯ ಉದ್ದೇಶ. ಹುಡುಗಿ ಇರುವುದು ‘ಆರತಿಗಾಗಿ’; ಆರತಿ ಅಂದರೆ, ಮನೆಯ ಬೆಳಕು ಅಂತ ಕೂಡ ಅಂದುಕೊಳ್ಳಬಹುದು ಅಥವಾ ಆರತಿ ಮಾಡಿ ಕಳುಹಿಸುವುದಕ್ಕಾಗಿ ಅಂತ ಕೂಡ ಅನ್ನಿಸಬಹುದು. ಗಂಡುಮಗು ಬೇಕಾಗಿರುವುದು ‘ಕೀರ್ತಿಗಾಗಿ’ ಅನ್ನುವ ಒಂದು ಸಂದೇಶ ಇದರ ಜೊತೆಗೇ ಸಾಗುತ್ತದೆ. ಏನೇ ಇರಲಿ, ಈ ಘೋಷಣೆಯಲ್ಲಿ ಬಹಳ ಸೂಕ್ಷ್ಮವಾಗಿ ಲಿಂಗ ತಾರತಮ್ಯದ ಮನೋಭಾವ ಹೆಣೆದುಕೊಂಡಿದೆ. ಅಂತೆಯೇ, ‘ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ’ ಅನ್ನುವ ಘೋಷಣೆ ಶಿಕ್ಷಣ ಸಾರ್ವತ್ರೀಕರಣದ ಹೊತ್ತಿನಲ್ಲಿ ಜೋರಾಗಿ ಕೇಳಿಬರುತ್ತಿತ್ತು. ಮಹಿಳೆಯರನ್ನು ಪ್ರೇರೇಪಿಸುವ ದೃಷ್ಟಿಯಲ್ಲಿ ಇಂತಹ ಒಂದು ಮಹತ್ವದ ಪಾತ್ರವನ್ನು ನಿರೂಪಿಸುವುದು ಚೆನ್ನಾಗಿಯೇ ಇದೆ. ಆದರೆ, ಇಲ್ಲೂ ಕುಟುಂಬದವರಿಗೆ ಕಲಿಸುವ, ವಿದ್ಯಾವಂತರನ್ನಾಗಿ ಮಾಡುವ ಹೊಣೆಗಾರಿಕೆ ಮಹಿಳೆಯರದ್ದೇ ಎಂಬ ಒಂದು ಪರೋಕ್ಷ ಭಾವವೂ ಇದೆ. ಗಂಡು ಕಲಿತಾಗ ಕೂಡ ಕುಟುಂಬದವರಿಗೆ ಕಲಿಸಬಹುದಾದವನು ಎಂಬ ಭಾವದ ಮಾತುಗಳು ಎಲ್ಲೂ ಕೇಳಿಬರುವುದಿಲ್ಲ. ಇವೆಲ್ಲ ತಾರತಮ್ಯದ ಭಾವಗಳನ್ನು ಹಿಡಿದಿರಿಸಿಕೊಳ್ಳುವಲ್ಲಿ ಪ್ರಭಾವ ಬೀರುತ್ತದೆ. ನೇರವಾಗಿ ನೋಡುವಾಗ ಇವು ಬಹಳ ಸಹಜವಾಗಿ ಕಾಣುತ್ತವೆ. ಪ್ರಶ್ನೆ ಎತ್ತಿ ವಿಮರ್ಶೆ ಮಾಡಿ ನೋಡಿದರೆ ಮಾತ್ರ ಇದರ ಒಳಹರಿವು ಅರ್ಥವಾಗುತ್ತದೆ.

ಈ ಆಡಿಯೊ ಕೇಳಿದ್ದೀರಾ?: ಲೇಖಕಿ ಗೀತಾ ವಸಂತ ಆಡಿಯೊ ಸಂದರ್ಶನ | ‘ಮಾವಿನ ಹಣ್ಣಿಗಾಗಿ ಹುಡುಗರೊಂದಿಗೆ ಭರ್ಜರಿ ಫೈಟ್ ಮಾಡಿದ್ದೆ!’

ಇವುಗಳು ಹುಟ್ಟಿಕೊಂಡಿರಬಹುದಾದ ರೀತಿಯ ಬಗ್ಗೆ, ನಂಬಿಕೆಗಳನ್ನು ಎಷ್ಟು ಸೃಜನಶೀಲವಾಗಿ, ಕಾವ್ಯಾತ್ಮಕವಾಗಿ ಎರಡೇ ಎರಡು ಸಾಲುಗಳಲ್ಲಿ ಪೋಣಿಸಿರುವುದರ ಬಗ್ಗೆ ನಿಜಕ್ಕೂ ಅಚ್ಚರಿ ಎನಿಸುತ್ತದೆ. ಜಾತಿ, ಧರ್ಮ, ವರ್ಗ, ಪ್ರದೇಶಗಳಿಗೆ ಸಂಬಂಧಿಸಿದಂತೆಯೂ ನಾನಾ ಗಾದೆಮಾತುಗಳಿವೆ. ಈ ಎಲ್ಲ ಹಳೆಯ-ಹೊಸ ಗಾದೆಮಾತುಗಳನ್ನು ಜನ ಸಾಧಾರಣವಾಗಿ ಯಾವುದೇ ವಿವಾದಗಳಿಲ್ಲದೆ ಒಪ್ಪಿಕೊಂಡಿರುತ್ತಾರೆ. ಅಷ್ಟು ಪ್ರಖರವಾಗಿದೆ ಗಾದೆಮಾತುಗಳ ಪ್ರಭಾವ. ಮನಸ್ಸಿನಲ್ಲಿ ಅಚ್ಚೊತ್ತಿದ ಹಾಗೆ ಇರುತ್ತವೆ. ಆಯಾಯ ಸಂದರ್ಭಗಳಲ್ಲಿ ದಿಕ್ಕು ತೋರಿಸುವ ಹಾಗೆ, ನಿರ್ದೇಶನ ನೀಡುವ ಹಾಗೆ, ಎಚ್ಚರಿಸುವ ಹಾಗೆ ನೆನಪಿಗೆ ಬರುತ್ತವೆ. ಚಿಕ್ಕಂದಿನಿಂದಲೇ ಇವುಗಳು ಎಷ್ಟರಮಟ್ಟಿಗೆ ಕಿವಿಗೆ ಬಿದ್ದಿರುತ್ತವೆ ಅಂದರೆ, ಅದು ಮನದಾಳದಲ್ಲಿ ನೆಲೆಯೂರಿರುತ್ತದೆ ಮತ್ತು ಕ್ರಮೇಣ ಸಾಮಾನ್ಯ ವಿಚಾರ ಅನಿಸಿಬಿಡುತ್ತದೆ. ಅವುಗಳ ಬಗ್ಗೆ ಪ್ರಶ್ನೆಗಳೇ ಹುಟ್ಟುವುದಿಲ್ಲ. ಅದರ ಮೇಲೆ, ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಅನ್ನುವ ಮಾತು ಗಾದೆಮಾತುಗಳನ್ನು ಪ್ರಶ್ನಾತೀತ ಮಾಡಿಸಿಬಿಡುತ್ತದೆ. ಹೊಸ ಚಿಂತನೆಯ ಸಾಧ್ಯತೆಗೆ ಬೀಗ ಜಡಿದ ಹಾಗೆ ಮಾಡಿಬಿಡುತ್ತದೆ. ಎಷ್ಟೋ ಸಾರಿ, ವೇದಗಳಿಗಿಂತ ಗಾದೆಗಳೇ ಹೆಚ್ಚು ಅಪಾಯಕಾರಿಯೇನೋ ಅನಿಸಿಬಿಡುತ್ತದೆ.

ಒಟ್ಟಿನಲ್ಲಿ ಪುರುಷಪ್ರಧಾನತೆಯನ್ನು ಚಾಲ್ತಿಯಲ್ಲಿ ಇರಿಸಿಕೊಳ್ಳುವುದಕ್ಕಾಗಿ ಗಾದೆಮಾತುಗಳು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಎಲ್ಲ ಗಾದೆಮಾತುಗಳು ಅಪಾಯಕಾರಿ ಎಂದೇನೂ ಅಲ್ಲ; ಒಪ್ಪುವ ಮುನ್ನ ಮತ್ತೆ-ಮತ್ತೆ ಪರಿಶೀಲಿಸಿಕೊಳ್ಳುವ ಅಗತ್ಯವಿದೆ. ಅಂತೆಯೇ, ಹೊಸ ಚಿಂತನೆಗಳನ್ನು ಇಷ್ಟೇ ಸೊಗಸಾಗಿ ಹೆಣೆದು ಪಸರಿಸುವ ಅಗತ್ಯವೂ ಇದೆ.

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಪೆರಿಯೋಡಿ
ವಾಣಿ ಪೆರಿಯೋಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಾಮಾಜಿಕ ಕಾರ್ಯಕರ್ತೆ. 'ತರಿಕಿಟ ಕಲಾ ಕಮ್ಮಟ' ಎಂಬ ಸಾಂಸ್ಕೃತಿಕ ವೇದಿಕೆಯ ಉಸ್ತುವಾರಿ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರುದ್ಧ ಒಕ್ಕೂಟದ ಸಕ್ರಿಯ ಸದಸ್ಯೆ. ಲಿಂಗ ಸಂವೇದನೆ, ಸಂವಹನ ಕೌಶಲ್ಯ ಇತ್ಯಾದಿ ವಿಚಾರಗಳ ಮೇಲೆ ತರಬೇತಿ ನಡೆಸುವುದು ಇಷ್ಟದ ಕೆಲಸ.

4 COMMENTS

    • ಥ್ಯಾಂಕ್ಯೂ. ಈದಿನ.ಕಾಮ್ ಜಾಲತಾಣಕ್ಕೆ ಭೇಟಿ ನೀಡಿದ್ದಕ್ಕಾಗಿ ನನ್ನಿ. ನಿಮ್ಮಿಂದ ಇನ್ನಷ್ಟು ಪ್ರತಿಕ್ರಿಯೆ ಎದುರು ನೋಡುತ್ತಿರುತ್ತೇವೆ.

  1. ಎಂತಹ ಅದ್ಬುತ ಲೇಖನ ಮೇಡಂ
    ಈ ಎಲ್ಲಾ ಗಾದೆಮಾತುಗಳ ಬಗ್ಗೆ ನಾನು ಅನೇಕ ಬಾರಿ ಗೊಂದಲಕ್ಕೆ ಒಳಗಾಗಿದ್ದೆ. ಈಗ ಅದಕ್ಕೆ ಸರಿಯಾದ ಪರಿಹಾರ ಸಿಕ್ಕಂತಾಯಿತು ಮೇಡಂ.👌👌🙂🙂

    • ಥ್ಯಾಂಕ್ಯೂ.. ನಿಮ್ಮ ಪ್ರತಿಕ್ರಿಯೆಯನ್ನು ಲೇಖಕರಿಗೆ ತಲುಪಿಸಲಾಗಿದೆ. ಈದಿನ.ಕಾಮ್ ಜಾಲತಾಣಕ್ಕೆ ಭೇಟಿ ನೀಡಿದ್ದಕ್ಕಾಗಿ ನನ್ನಿ. ನಿಮ್ಮಿಂದ ಇನ್ನಷ್ಟು ಪ್ರತಿಕ್ರಿಯೆ ಎದುರು ನೋಡುತ್ತಿರುತ್ತೇವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X