ಚಿಕ್ಕನಾಯಕನಹಳ್ಳಿ ಪಟ್ಟಣದ ಅರಣ್ಯ ಇಲಾಖೆ ಎದುರಿನ ಆರ್ ವಿ ಎಲೆಕ್ಟ್ರಿಕ್ ಅಂಡ್ ಎಲೆಕ್ಟ್ರಾನಿಕ್ಸ್ ಅಂಗಡಿ ಮಳಿಗೆಯಿರುವ ಕಟ್ಟಡದಲ್ಲಿ ವಿದ್ಯುತ್ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 13 ವರ್ಷದ ಬಾಲಕ ಅಚ್ಚುತಕುಮಾರ್ ಅಸುನೀಗಿದ್ದಾನೆ.
ಬೆಸ್ಕಾಂ ಹಿರಿಯ ಅಧಿಕಾರಿಗಳು ಮಳೆ-ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮೇಲಿನಿಂದ ಸೂಚನೆಗಳು ಕೊಡುತ್ತಿದ್ದರೂ ಸಹಾ, ಕೆಳಹಂತದ ಅಧಿಕಾರಿಗಳು ಅದನ್ನು ಸರಿಯಾಗಿ ಪಾಲಿಸದೇ ನಿರ್ಲಕ್ಷ್ಯ ತೋರುತ್ತಾ ಹೊಣೆಗೇಡಿತನ ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಈ ಆರೋಪಗಳಿಗೆ ತಾಜಾ ಉದಾಹರಣೆ ಎಂಬಂತೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಈ ಒಂದು ತಿಂಗಳ ಕಾಲಾವಧಿಯ ಒಳಗೇ ಸಂಭವಿಸಿರುವ ವಿದ್ಯುತ್ ಅಪಘಾತದಲ್ಲಿ ಇಬ್ಬರು ಬಾಲಕರು ಸಾವನೊಪ್ಪಿದ್ದಾರೆ.
ಈ ಹಿಂದೆ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಕೆಳಗೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ 9 ವರ್ಷದ ಬಾಲಕ ಕುಶಾಲ್ ಸಾವನ್ನಪ್ಪಿದ್ದ ಘಟನೆ ಮಾಸುವ ಮೊದಲೇ ಇದೀಗ ತಾಲ್ಲೂಕು ಕೇಂದ್ರದಲ್ಲಿ ಮತ್ತೊಬ್ಬ ಬಾಲಕ ವಿದ್ಯುತ್ ಅಪಘಾತಕ್ಕೆ ಬಲಿಯಾಗಿರುವುದು ಖೇದಕರ.

ಅಚ್ಚುತಕುಮಾರ್ ಎಂದಿನಂತೆ ತನ್ನ ಮನೆಯ ಬಳಿ ಆಟವಾಡಿಕೊಂಡಿದ್ದ ಸಮಯದಲ್ಲಿ ಮನೆ-ಪಕ್ಕದಲ್ಲೇ ಇದ್ದ ಕಂಬದಿಂದ ಆತನಿಗೆ ವಿದ್ಯುತ್ ಸ್ಪರ್ಶವಾಗಿದೆ. ಅದೇ ಕಂಬದಿಂದ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳಲಾಗಿತ್ತು. ಮಳೆಯಿಂದಾಗಿ ವಿದ್ಯುತ್ ವೈಯರ್ ಮನೆಗೆ ಹೊಂದಿಕೊಂಡೇ ಇದ್ದ ಅಂಗಡಿ ಮಳಿಗೆಯ ಶೀಟ್-ಛಾವಣಿಯ ಮೇಲೆ ಬಿದ್ದಿದೆ. ದಿನವಿಡೀ ಬಿಟ್ಟೂಬಿಡದೆ ಬೀಸುತ್ತಿದ್ದ ರಭಸದ ಗಾಳಿಯಿಂದಾಗಿ ಅಂಗಡಿಯ ಪಿಲ್ಲರ್ರಿಗೆ ವೈಯರ್ ಸ್ಪರ್ಶಿಸಿದೆ. ಆಟವಾಡುತ್ತಿದ್ದ ಬಾಲಕನಿಗೆ ಅದು ತಿಳಿದಿಲ್ಲದೆ ಅದೇ ಸಮಯದಲ್ಲಿ ಆತ ಅಂಗಡಿಯ ಪಿಲ್ಲರ್ರನ್ನು ಸ್ಪರ್ಶಿಸಿಬಿಟ್ಟಿದ್ದಾನೆ. ಕ್ಷಣದಲ್ಲೇ ಬಾಲಕನಲ್ಲಿ ವಿದ್ಯುತ್ ಪ್ರವಹಿಸಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಶೀಘ್ರದಲ್ಲೇ ಬಾಲಕನನ್ನು ಆಸ್ಪತ್ರೆಗೆ ಒಯ್ಯಲಾಗಿದೆಯಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕನ ಸಾವನ್ನು ದೃಢಪಡಿಸಲಾಗಿದೆ.
ಬೆಳೆಯುತ್ತಿದ್ದ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಜಿಲ್ಲೆಯಾದ್ಯಂತ ಕಳೆದೆರಡು ವಾರದಿಂದ ಬಿಟ್ಟೂಬಿಡದೆ ಮಳೆಯಾಗುತ್ತಿದ್ದು, ಸೋನೆ ಮಳೆಯಂತೂ ದಿನವಿಡೀ ಸುರಿಯುತ್ತಲೇ ಇದೆ. ಹಿರಿಯ ಅಧಿಕಾರಿಗಳು ತುರ್ತಾಗಿ ಇದರತ್ತ ಗಮನಹರಿಸಬೇಕಿದೆ. ಮಳೆ ಹೆಚ್ಚಾಗಿರುವ ಕಾಲದಲ್ಲಿ ಮನೆಗಳಿಗೆ ಸಂಪರ್ಕ ಕಲ್ಲಿಸಿ ಹಾಕಲಾಗಿರುವ ಹಳೆಯ ತಂತಿ ಮತ್ತು ವೈಯರ್‌ಗಳನ್ನು ಬದಲಾಯಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಜವಾಬ್ದಾರಿ ಮೂಡಿಸಬೇಕು ಎಂದು ಪ್ರಜ್ಞಾವಂತ-ನಾಗರಿಕರು ಒತ್ತಾಯಿಸುತ್ತಿದ್ದಾರೆ.
ವರದಿ – ಸಂಚಲನ, ಚಿಕ್ಕನಾಯಕನ ಸೀಮೆಯಿಂದ