ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 524 ಮೀಟರ್ ವರೆಗೆ ಏರಿಸಿ ನವೀಕರಿಸಲು ಮಹಾರಾಷ್ಟ್ರ ಸರ್ಕಾರ ಕ್ಯಾತೆ ತೆಗೆಯುತ್ತಿರುವುದು ಸರಿಯಲ್ಲ. ಅಣೆಕಟ್ಟೆ ಎತ್ತರ ಏರಿಸಲು ಯಾವುದೇ ತ್ಯಾಗಕ್ಕೂ ಸಿದ್ದ. ಈ ಕುರಿತು ವಿಜಯಪುರದಲ್ಲಿ ರಾಜ್ಯ ಮಟ್ಟದ ಸಭೆ ನಡೆಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗಲಾಗುವುದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಆಡಳಿತಸೌಧ ಸಭಾ ಭವನದಲ್ಲಿ ನಡೆದ 2025-26ನೇ ಸಾಲಿನ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
“ಆಲಮಟ್ಟಿ ಜಲಾಶಯ ಎತ್ತರಿಸಲು ಅಗತ್ಯ ಇರುವ ಅನುದಾನಕ್ಕಾಗಿ ಬಾಂಡ್ ಮೂಲಕ ಹಣ ಸಂಗ್ರಹಿಸಿ, ಇಲ್ಲವೇ ನಮ್ಮ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಿ ಅನುದಾನ ಬಿಡುಗಡೆ ಮಾಡಿಸಲಿ. ಬಚಾವತ್ ಐ ತೀರ್ಪಿನ ಪ್ರಕಾರ ಅಣೆಕಟ್ಟೆ ಎತ್ತರ 524 ಮೀಟರ್ ಮಾಡಬೇಕು. ಮತ್ತು ನಮ್ಮ ಪಾಲಿನ 130 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಬೇಕಾಗಿದೆ. ಬ್ರಿಜೇಶ್ ಕುಮಾರ್ ತೀರ್ಪಿನ ಪ್ರಕಾರ ಬಿ ಸ್ಕೀಮ್‌ನ ಯೋಜನೆಗಳಿಗೆ ಕಾನೂನು ಬದ್ಧವಾಗಿ ನೀರು ಪಡೆಯಬೇಕಾದರೆ ಎತ್ತರ 524 ಮೀಟರ್ ಆಗಲೇಬೇಕು” ಎಂದರು.
ಇದನ್ನೂ ಓದಿ: ವಿಜಯನಗರ | ಆಡಂಬರವಿಲ್ಲದೆ ಸಂವಿಧಾನ ಸಾಕ್ಷಿಯಾಗಿ ಅಂತರ್ಜಾತಿ ವಿವಾಹವಾದ ನವದಂಪತಿ
“ಇಂಡಿ ತಾಲೂಕಿನಲ್ಲಿ ಹಾದುಹೋಗಿರುವ ಗುತ್ತಿ ಬಸವಣ್ಣ, ಚಿಮ್ಮಲಗಿ, ಮುಳವಾಡ ಏತ ನೀರಾವರಿ, ಇಂಡಿ ಬ್ರಾಂಚ್ ಕಾಲುವೆ ಮತ್ತು ರೇವಣಸಿದ್ದೇಶ್ವರ ಕಾಲುವೆಯಲ್ಲಿ ನೀರು ಹರಿಯುತ್ತಿಲ್ಲ. ಹೀಗಾಗಿ ಆಲಮಟ್ಟಿ ಅಣೆಕಟ್ಟಿನ್ನು ಎತ್ತರಿಸುವುದು ಅನಿವಾರ್ಯ. ತಾಲೂಕಿನಲ್ಲಿರುವ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲು ಮತ್ತು ಅದಕ್ಕೆ ಬೇಕಾಗುವ ಹಣ ನೀಡಲಾಗುವುದು” ಎಂದು ತಿಳಿಸಿದರು.
ಸಭೆಯಲ್ಲಿ ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ತಹಶೀಲ್ದಾರ್ ಬಿ ಎಸ್ ಕಡಕಬಾವಿ, ಇಒ ನಂದೀಪ ರಾಠೋಡ, ಕೃಷಿ ಇಲಾಖೆ ಅಧಿಕಾರಿ ಚಂದ್ರಕಾಂತ ಪವಾರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಹೆಸ್ಕಾಂನ ಎಸ್ ಎಸ್ ಬಿರಾದಾರ, ಸಂಜಯ ಖಡಗೇಕರ, ಡಿ ಎಸ್ ಪಿ ಜಗದೀಶ ಎಚ್, ನಾಮ ನಿರ್ದೇಶಿತ ಸದಸ್ಯರಾದ ಬಿ ಕೆ ಪಾಟೀಲ, ಗುರನಗೌಡ ಪಾಟೀಲ, ದೀಪಾಲಿ ಸ್ ಕುಲಕರ್ಣಿ, ಜೆ ಎಂ ಕರಜಗಿ, ಇಲಿಯಾಸ್ ತು ಬೋರಾಮಣಿ, ಪ್ರಶಾಂತ ಕಾಳೆ ಇದ್ದರು.